ಭೂ ಸ್ವಾಧೀನ ಪರಿಹಾರ ದೊರಕದ ಕಾರಣ ಆಕ್ರೋಶ । ಶಾಸಕ ದೊಡ್ಡನಗೌಡ ಪಾಟೀಲ ಭೇಟಿ, ರೈತರ ಮನವೊಲಿಕೆ
ಕನ್ನಡಪ್ರಭ ವಾರ್ತೆ ಕುಷ್ಟಗಿಭೂಸ್ವಾಧೀನ ಪರಿಹಾರ ದೊರಕದ ಕಾರಣ ತಾಲೂಕಿನ ಕಲಾಲಬಂಡಿ ಮತ್ತು ಮುದುಟಗಿ ಹತ್ತಿರದಲ್ಲಿರುವ ಪಂಪ್ ಹೌಸ್‌ಗೆ ಬೀಗ ಹಾಕಿ ರೈತರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಶಾಸಕ ದೊಡ್ಡನಗೌಡ ಪಾಟೀಲ ಭೇಟಿ ನೀಡಿ ರೈತರ ಮನವೊಲಿಸಿದರು.ಕೊಪ್ಪಳ ಏತ ನೀರಾವರಿ, ಕೆರೆ ತುಂಬಿಸುವ ಯೋಜನೆಯ ಸಲುವಾಗಿ ಭೂಮಿ ಕಳೆದುಕೊಂಡ ಹಲವು ರೈತರು ತಮಗೆ ಇನ್ನೂ ಭೂ ಸ್ವಾಧೀನ ಪರಿಹಾರ ದೊರಕದ ಕಾರಣ ಕಲಾಲಬಂಡಿ ಮತ್ತು ಮುದುಟಗಿ ಹತ್ತಿರದಲ್ಲಿರುವ ಪಂಪ್ ಹೌಸ್‌ಗೆ ಬೀಗ ಹಾಕಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರು ಪ್ರತಿಭಟನೆ ಮಾಡುತ್ತಿರುವ ಕಾರಣ ತಾಲೂಕಿನ ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬುವ ಕೆಲಸಕ್ಕೆ ಅಡ್ಡಿ ಉಂಟಾಗಿತ್ತು ನಿಗಮದ ಅಧಿಕಾರಿಗಳು ಭರವಸೆಗೆ ಒಪ್ಪದ ರೈತರು ಪಟ್ಟು ಬಿಡಲಿಲ್ಲ. ಶಾಸಕ ದೊಡ್ಡನಗೌಡ ಪಾಟೀಲ ಪಂಪ್ ಹೌಸ್‌ಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ರೈತರು ಹಾಗೂ ನೆರೆದಿರುವ ಮುಖಂಡರೊಂದಿಗೆ ಚರ್ಚಿಸಿದರು. ಮೂರ್ನಾಲ್ಕು ತಿಂಗಳಲ್ಲಿ ನಿಮಗೆ ದೊರಕಬೇಕಾದ ಪರಿಹಾರವನ್ನು ದೊರಕಿಸಿಕೊಡಲಾಗುವುದು. ಈ ಕುರಿತು ಈಗಾಗಲೇ ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳು, ರೈತ ಮುಖಂಡರು, ರೈತರಿದ್ದರು.
ಅಂಗನವಾಡಿ ಕಾರ್ಯಕರ್ತೆಯರಿಗೆ 5ನೇ ಹಂತದ ತರಬೇತಿ ಶಿಬಿರ:ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಟಾಟಾ ಕಲಿಕಾ ಟ್ರಸ್ಟ್ ವತಿಯಿಂದ ಅಂಗನವಾಡಿ ಕಾರ್ಯಕರ್ತರಿಗೆ ಐದನೇ ಹಂತದ ಮಾರ್ಗದರ್ಶನ ತರಬೇತಿ ಶಿಬಿರ ನಡೆಯಿತು.ದೋಟಿಹಾಳ ವಲಯದ ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ ಅಂಗನವಾಡಿ ಕಾರ್ಯಕರ್ತರಿಗೆ ಓದುವ, ಬರೆಯುವ ತಯಾರಿ, ಬೌದ್ಧಿಕ ಮತ್ತು ದೈಹಿಕ ಚಟುವಟಿಕೆಗಳ ಕುರಿತು ತರಬೇತಿ ನೀಡಿದರು.ಪ್ರತಿಯೊಂದು ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತರು ಮಕ್ಕಳಿಗೆ ಆಟ ಆಡಿಸುವುದು, ಅಕ್ಷರ ಪರಿಚಯದ ಚಟುವಟಿಕೆಗಳು, ಶಾಲಾ ಪೂರ್ವ ಶಿಕ್ಷಣದಲ್ಲಿ ದೈಹಿಕ ಆಟಗಳನ್ನು ಆಯೋಜನೆ ಮಾಡುವುದು, ಬೌದ್ಧಿಕ ಚಟುವಟಿಕೆಗಳ ಪರಿಚಯ ಸೇರಿದಂತೆ ಅನೇಕ ವಿಷಯಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೇಸೂರು ಗ್ರಾಮ ಪಂಚಾಯಿತಿಯ ಸದಸ್ಯರಾದ ಶ್ರೀದೇವಿ ಮಳಿಮಠ, ಶಾರದಾ ಜಲಕಮಲದಿನ್ನಿ, ದೋಟಿಹಾಳ ಬಿ ವಲಯದ ಅಂಗನವಾಡಿ ಮೇಲ್ವಿಚಾರಕಿ ಭುವನೇಶ್ವರಿ ಸಂಕಾನಟ್ಟಿ, ಅಂಗನವಾಡಿ ಕಾರ್ಯಕರ್ತರು ಇದ್ದರು.