ಬೆಂಬಲ ಬೆಲೆ ಘೋಷಿಸಲು ಒತ್ತಾಯ, ಕುರುಗೋಡದಲ್ಲಿ ರೈತ ಸಂಘದ ನೇತೃತ್ವದಲ್ಲಿ ಆಕ್ರೋಶ
ಕನ್ನಡಪ್ರಭ ವಾರ್ತೆ ಕುರುಗೋಡುಒಣ ಮೆಣಸಿನಕಾಯಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಮತ್ತು ಏ. ೨೦ರ ವರೆಗೆ ಕೆಳಮಟ್ಟದ ಕಾಲುವೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಪಟ್ಟಣದ ಮುಖ್ಯವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಮುಖ್ಯವೃತ್ತದ ರಸ್ತೆಯಲ್ಲಿ ಒಣಮೆಣಸಿನಕಾಯಿ ಸುರಿದ ರೈತರು ಕೃಷಿ ವಲಯದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ಸಂಸ್ಥಾಪಕ, ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಅತಿಹೆಚ್ಚು ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಬೆಲೆ ಕುಸಿತದಿಂದ ರೈತರು ನಷ್ಟದಲ್ಲಿ ಕಾಲ ದೂಡುವಂತಾಗಿದೆ. ಕಳೆದ ವರ್ಷ ಬೆಳೆದ ಒಣಮೆಣಸಿಕಾಯಿ ಬೆಳೆಗೆ ಬೆಲೆ ದೊರೆಯದ ಪರಿಣಾಮ ರೈತರು ಕೋಲ್ಡ್ ಸ್ಟೋರೇಜ್‌ಗಳಲ್ಲಿ ಸಂಗ್ರಹಿಸಿದ್ದಾರೆ. ಈ ವರ್ಷವೂ ಬೆಲೆ ಕುಸಿತ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಾಲದ ಬಾಧೆಯಿಂದ ಕೆಲವು ರೈತರು ಆತ್ಮಹತ್ಯೆಯ ದಾರಿ ತುಳಿದಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕೂಡಲೇ ಸರ್ಕಾರ ಆಂಧ್ರಪ್ರದೇಶ ಸರ್ಕಾರದ ಮಾದರಿಯಲ್ಲಿ ಬೆಂಬಲ ಬೆಲೆಯಲ್ಲಿ ಒಣಮೆಣಸಿನಕಾಯಿ ಖರೀದಿಸಬೇಕು ಎಂದು ಒತ್ತಾಯಿಸಿದರು.ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕದ ಅಧ್ಯಕ್ಷ ಶಾಪುರ ಗುರುರುದ್ರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಎರಡು ಲಕ್ಷ ಎಕರೆಯಲ್ಲಿ ಭತ್ತ ಬೆಳೆಯುತ್ತಾರೆ. ಈ ವರ್ಷ ಎರಡನೇ ಬೆಳೆ ತಡವಾಗಿ ನಾಟಿ ಮಾಡಿದ ಕಾರಣ ಏಪ್ರಿಲ್ ಅಂತ್ಯದ ವರೆಗೆ ನೀರಿನ ಅಗತ್ಯವಿದ್ದು, ಏ. ೨೦ರ ವರೆಗೆ ನೀರು ಬಿಡಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ನರಸಪ್ಪ ತಹಶೀಲ್ದಾರ್ ಮನವಿ ಸ್ವೀಕರಿಸಿದರು.ಕುರುಗೋಡು ನಗರ ಘಟಕದ ಅಧ್ಯಕ್ಷ ಕರಿಬ್ಯಾಡರ ಶೇಖಣ್ಣ, ರೈತರಾದ ಗೂಳ್ಯಂ ದೊಡ್ಡಗಾದಿಲಿಂಗಪ್ಪ, ಮಂಜುನಾಥ ಗೌಡ, ಪುರುಗೈ ಮರಿವೇಶಪ್ಪ, ದುರ್ಗ ಪಾಂಡುರಂಗ, ಗೂಳ್ಯಂ ಶಿವರಾಜ, ಗೊರವರ ಮಂಜು, ಸಿದ್ದಪ್ಪ, ಕರಿಬ್ಯಾಡರ ಕರಿಯಣ್ಣ, ಗೋರೂರು ಗಾದಿಲಿಂಗಪ್ಪ, ಪವಾಡಿ ಚಂದ್ರಪ್ಪ, ಕರಿಬ್ಯಾಡರ ಬಸವಣ್ಣ, ಆಂಧ್ರದ ಚಿದಾನಂದ, ಗಂಗಣ್ಣ, ಗೋವಿಂದಪ್ಪ, ಲೋಕೇಶ, ಗಾದಿಲಿಂಗಪ್ಪ ಮತ್ತು ನಾಗರಾಜ ಇದ್ದರು.