ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ನೆರೆಯ ಬೆಳಗಾವಿ ಜಿಲ್ಲೆಯ ತಾಲೂಕಿನ ರೈತರಿಗೆ ನಿರಂತರ ೭ ಗಂಟೆ ವಿದ್ಯುತ್ ಪೂರೈಸುತ್ತಿದ್ದರೆ, ನಮ್ಮ ಪ್ರದೇಶದಲ್ಲಿ ದಿನ ಬಿಟ್ಟು ದಿನ ೪ ಗಂಟೆ ಮಾತ್ರ ವಿದ್ಯುತ್ ಪೂರೈಸಲಾತ್ತಿದೆ. ನಮಗೇಕೆ ಅನ್ಯಾಯ ಎಂದು ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು.
ಸ್ಥಳಕ್ಕಾಗಮಿಸಿದ ವಿಶೇಷ ತಹಸೀಲ್ದಾರ್ ವಿಜಯಕುಮಾರ ಕಡಕೋಳ, ಪಿಎಸ್‌ಐ ಅಪ್ಪು ಐಗಳಿ, ಹೆಸ್ಕಾಂ ಶಾಖಾಧಿಕಾರಿ ಬಿರಾದಾರ, ಕೃಷ್ಣಾ ನದಿಯಲ್ಲಿ ನೀರಿನಮಟ್ಟ ಕುಸಿದಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು ಎಂದು ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಕೆಲ ದಿನಗಳಲ್ಲಿ ಎಲ್ಲ ಸರಿ ಹೋಗಲಿದ್ದು, ರೈತರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.ನದಿ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಜನತೆ ಕುಡಿಯಲು ಬಳಸುತ್ತಿಲ್ಲ. ರೈತರು ಬೆಳೆದಿರುವ ಬೆಳೆಗಳ ದುಃಸ್ಥಿತಿ ನೀವೇ ಕಣ್ಣಾರೆ ನೋಡಿ. ನಮಗೆ ಬೆಳೆಗಳ ಸ್ಥಿತಿ ನೋಡಲಾಗುತ್ತಿಲ್ಲ. ಸಣ್ಣಪುಟ್ಟ ರೈತರು ತರಕಾರಿ ಬೆಳೆಯಲೂ ಸಾಧ್ಯವಾಗದೆ ತತ್ತರಿಸಿದ್ದಾರೆ. ಸಕಾಲದಲ್ಲಿ ಮಳೆ ಆಗಿದ್ದರೆ ನಾವು ಹತಾಶರಾಗುತ್ತಿರಲಿಲ್ಲ. ನಮ್ಮ ಬೆಳೆಗಳ ರಕ್ಷಣೆಗೆ ಕನಿಷ್ಠ ನಿತ್ಯ ೬ ಗಂಟೆ ಕಾಲ ವಿದ್ಯುತ್ ನೀಡಬೇಕು, ಇಲ್ಲವಾದಲ್ಲಿ ನಿಮ್ಮ ನಿವಾಸದೆದುರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ತಮದಡ್ಡಿ ಯುವ ರೈತ ಮಹಾವೀರ ಭಿಲವಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಮೇಲಧಿಕಾರಿಗಳೊಡನೆ ಚರ್ಚಿಸಿ ಎರಡು ದಿನಗಳ ಬಳಿಕ ವಿದ್ಯುತ್ ಪೂರೈಕೆಯ ಕಾಲಮಿತಿ ಹೆಚ್ಚಿಸಲಾಗುವುದೆಂದು ಭರವಸೆ ನೀಡಿದ ಅಧಿಕಾರಿಗಳ ಮಾತಿಗೆ ಸುತರಾಂ ಒಪ್ಪದ ರೈತರು ಪ್ರತಿಭಟನೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದು ಶನಿವಾರ 2 ಗಂಟೆ, ಭಾನುವಾರ 4 ಗಂಟೆ ವಿದ್ಯುತ್ ನೀಡಬೇಕು. ಸೋಮವಾರ ನಮ್ಮ ಬೇಡಿಕೆಯಂತೆ ೬ ಗಂಟೆ ಕಾಲ ವಿದ್ಯುತ್ ಪೂರೈಸದಿದ್ದರೆ ತೇರದಾಳ ಬಂದ್ ಗೆ ಕರೆ ನೀಡಲಾಗುವುದೆಂದು ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.