ಅತಿ ಭಾರ ಸಾಗಾಟ, ಟ್ರಕ್ ತಡೆದು ರೈತರಿಂದ ಪ್ರತಿಭಟನೆ

KannadaprabhaNewsNetwork |  
Published : Jul 31, 2026, 02:15 AM IST
ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಸರಹದ್ದಿನಲ್ಲಿ ಗಾಳಿ ಯಂತ್ರ ಕಂಪನಿಯ ಭಾರೀ ಗಾತ್ರದ ವಾಹನಗಳು ಸಂಚರಿಸದಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಗುರುವಾರ ಗೊಜನೂರು ಗ್ರಾಮದ ರೈತರು ತಹಸೀಲ್ದಾರ್‌ ಧನಂಜಯ ಎಂ. ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಗೊಜನೂರು-ಯಳವತ್ತಿ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದ ಕಾರಣ ಭಾರೀ ತೂಕದ ವಾಹನಗಳನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿ ಗೊಜನೂರು ಗ್ರಾಮದ ರೈತರು ಭಾರಿ ಗಾತ್ರದ ವಾಹನ ತಡೆದು ಬುಧವಾರ ಸಂಜೆ ಹಾಗೂ ಗುರುವಾರ ಮಧ್ಯಾಹ್ನ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಲಕ್ಷ್ಮೇಶ್ವರ: ಸಮೀಪದ ಗೊಜನೂರು ಸರಹದ್ದಿನಲ್ಲಿ ಬರುವ ಹೊಲವೊಂದರಲ್ಲಿ ಸರೆಂಟಿಕಾ ವಿಂಡ್ ಪವರ್ ಕಂಪನಿಯು ಭಾರಿ ವಾಹನಗಳು ಅತಿಯಾದ ಭಾರ ಹೊತ್ತು ಸಂಚರಿಸುತ್ತಿವೆ, ಇದರಿಂದಾಗಿ ಗೊಜನೂರು-ಯಳವತ್ತಿ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದ ಕಾರಣ ಭಾರೀ ತೂಕದ ವಾಹನಗಳನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿ ಗೊಜನೂರು ಗ್ರಾಮದ ರೈತರು ಭಾರಿ ಗಾತ್ರದ ವಾಹನ ತಡೆದು ಬುಧವಾರ ಸಂಜೆ ಹಾಗೂ ಗುರುವಾರ ಮಧ್ಯಾಹ್ನ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾಹಿತಿ ತಿಳಿದು ತಹಸೀಲ್ದಾರ್‌ ಧನಂಜಯ ಎಂ. ಅವರು ಸ್ಥಳಕ್ಕೆ ಆಗಮಿಸಿ ಸರೆಂಟಿಕಾ ಕಂಪನಿಯ ಅಧಿಕಾರಿಗಳೊಂದಿಗೆ ಹಾಗೂ ರೈತರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಗೊಜನೂರ ಗ್ರಾಮದ ರೈತರು ಮಾತನಾಡಿ, ಗ್ರಾಮ ಸಡಕ್‌ ಯೋಜನೆ ಅಡಿಯಲ್ಲಿ 2019-20ನೇ ಸಾಲಿನಲ್ಲಿ ರಸ್ತೆ ನಿರ್ಮಿಸಲಾಗಿದೆ. ಗೊಜನೂರ ಗ್ರಾಮದ ನೂರಾರು ರೈತರು ಪ್ರತಿನಿತ್ಯ ತಮ್ಮ ಹೊಲಗಳಿಗೆ ಹೋಗಲು ಈ ರಸ್ತೆಯ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಈಗ ಈ ರಸ್ತೆಯ ಮೇಲೆ ಅತಿಯಾದ ಭಾರ ಹೊತ್ತ ಟ್ರಕ್ ಹಾಗೂ ಟಿಪ್ಪರ್‌ಗಳು ಸಂಚರಿಸುತ್ತಿವೆ. ಈಗಾಗಲೇ ರಸ್ತೆ ಅಲ್ಲಲ್ಲಿ ಕಿತ್ತು ಹಾಳಾಗುತ್ತಿದೆ. ಇದೇ ರೀತಿ ವಾಹನಗಳು ಸಂಚರಿಸಿದರೆ ಇನ್ನಷ್ಟು ದಿನಗಳಲ್ಲಿ ಇಡೀ ರಸ್ತೆ ಸಂಪೂರ್ಣ ಗುಂಡಿ ಬಿದ್ದು ಸಂಚಾರಕ್ಕೆ ಬಾರದಂತಾಗುತ್ತದೆ. ಕಾರಣ ಭಾರಿ ತೂಕದ ವಾಹನ ಸಂಚಾರ ಮಾಡದಂತೆ ನಿರ್ಬಂಧ ಹೇರಬೇಕು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣಗೊಂಡ ರಸ್ತೆಯ ಮೇಲೆ ೧೦ ಟನ್ ಭಾರ ಸಾಗಿಸಲು ಯೋಗ್ಯವಾಗಿದೆ. ಆದರೆ ಕಂಪನಿ ವಾಹನಗಳು ಬರೋಬ್ಬರಿ ೫೪ ಟನ್ ಭಾರ ಹಾಕಿಕೊಂಡು ಸಂಚರಿಸುತ್ತಿದ್ದು, ಇದರಿಂದಾಗಿ ರಸ್ತೆ ಹದಗೆಡುತ್ತಿದೆ.

ಈ ರಸ್ತೆ ಹಾಳಾದರೆ ಗೊಜನೂರು ಗ್ರಾಮದ ರೈತರು ತಮ್ಮ ಹೊಲಗಳಿಗೆ ಹೋಗಿ ಬರಲು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ನಿಗದಿತ ಪ್ರಮಾಣದಲ್ಲಿ ಭಾರ ಹಾಕಿಕೊಂಡು ವಾಹನಗಳ ಸಂಚಾರ ಮಾಡಬೇಕು. ಅದಕ್ಕಿಂತ ಪೂರ್ವದಲ್ಲಿ ಸದ್ಯ ಹಾಳಾಗಿರುವ ರಸ್ತೆಯನ್ನು ಕಂಪನಿ ದುರಸ್ತಿ ಮಾಡಬೇಕು. ಅಲ್ಲಿಯವರೆಗೆ ರಸ್ತೆಯಲ್ಲಿ ಕಂಪನಿ ವಾಹನಗಳಿಗೆ ಸಂಚರಿಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.

ಈ ವೇಳೆ ತಹಸೀಲ್ದಾರ್‌ ಧನಂಜಯ ಎಂ. ಅವರು, ಅತಿ ಭಾರದ ವಾಹನಗಳು ಸಂಚರಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಶಿವರಾಜಗೌಡ ಪಾಟೀಲ, ಪ್ರವೀಣ ಮಾಡಳ್ಳಿ, ಶಿದ್ಧಲಿಂಗೇಶ ಸೊರಟೂರ, ಮಹಾಂತಗೌಡ ಪಾಟೀಲ, ಹೊಳಲಪ್ಪ ಕರೆಣ್ಣವರ, ಶಂಭುಲಿಂಗಪ್ಪ ಸೊರಟೂರ, ಆರ್.ಡಿ. ಪ್ರಭಯ್ಯನಮಠ, ಹೇಮಣ್ಣ ಕರೆಣ್ಣವರ, ವೀರಯ್ಯ ಹಿರೇಮಠ, ಮುತ್ತು ಸೊರಟೂರ, ಶೇಖರಗೌಡ ಪಾಟೀಲ, ಚನ್ನಪ್ಪ ಷಣ್ಮುಖಿ, ಚಂದ್ರಗೌಡ ದೊಡ್ಡಗೌಡರ, ಬಸಪ್ಪ ಕಪ್ಪತ್ತನವರ ಇದ್ದರು.

ಈ ವೇಳೆ ಗ್ರೇಡ್ -2 ತಹಸೀಲ್ದಾರ್‌ ಮಂಜುನಾಥ ಅಮಾಸಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸರೆಂಟಿಕಾ ಕಂಪನಿಯ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ರಕ್ಷಣೆಗೆ ಸೂಕ್ತ ಕಾನೂನು ಅರಿವು ನೀಡುವುದು ಅತ್ಯಗತ್ಯ: ಹುಲಗಪ್ಪ ಡಿ.
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಬಾರದು: ಜಾನಕಿ ಕೆ.ಎಂ.