ಕಳಪೆ ಬಿತ್ತನೆ ಬೀಜ ಮಾರಾಟದ ವಿರುದ್ಧ ಶಾಸಕರ ಕಚೇರಿ ಎದುರು ಮುಂದುವರಿದ ರೈತರ ಪ್ರತಿಭಟನೆ

KannadaprabhaNewsNetwork |  
Published : May 25, 2025, 11:59 PM IST
ಮ | Kannada Prabha

ಸಾರಾಂಶ

ಕಳೆದ 3 ವರ್ಷಗಳಿಂದ ಪರವಾನಗಿ ಇಲ್ಲದೇ ಅನಧಿಕೃತವಾಗಿ ತೋಟಗಾರಿಕೆ ಬಿತ್ತನೆ ಬೀಜಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದರು.

ಬ್ಯಾಡಗಿ: ಧನಕ್ರಾಪ್ ಆ್ಯಂಡ್ ಸನ್ಸ್ ಪ್ರೈ.ಲಿ. ಕಂಪನಿಯು ಜಿಲ್ಲೆಯಲ್ಲಿ ಕಳಪೆ ಬೀಜ ಮಾರಾಟ ಮುಂದುವರಿಸಿದೆ. ರೈತರ ತಾಳ್ಮೆ ಪರೀಕ್ಷಿಸದೇ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಮುನ್ನವೇ ಈ ಕಂಪನಿ ಮಾರಾಟ ನಿಲ್ಲಿಸದಿದ್ದಲ್ಲಿ ಮುಂದಿನ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.ಪಟ್ಟಣದ ಶಾಸಕರ ಕಾರ್ಯಾಲಯ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಕಳಪೆ ಕ್ಯಾಬೀಜ್, ಮೆಣಸಿನಕಾಯಿ ಬೀಜದಿಂದ ನೊಂದ ರೈತರು ಆರಂಭಿಸಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯ 5ನೇ ದಿನವಾದ ಭಾನುವಾರ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.ಕಳಪೆ ಜೀಜದಿಂದಾಗಿ ರೈತರು ಇಷ್ಟೆಲ್ಲಾ ಸಂಕಷ್ಟಗಳಿಗೆ ಸಿಲುಕಿದ್ದರೂ ಧನಕ್ರಾಪ್ ಆ್ಯಂಡ್ ಸನ್ಸ್ ಪ್ರೈ.ಲಿ. ಕಂಪನಿ ಯಾರ ಭಯವಿಲ್ಲದೇ ಅಧಿಕೃತವಾಗಿ ಕಳಪೆ ಬೀಜ ಔಷಧಿ ಸೇರಿದಂತೆ ಕೃಷಿಗೆ ಸಂಬಂಧಿಸಿದ ಪರಿಕರಗಳನ್ನು ಎಗ್ಗಿಲ್ಲದೇ ಮಾರಾಟ ನಡೆಸಿದೆ ಎಂದು ಆರೋಪಿಸಿದರು.

ಗಡುವು ಮುಕ್ತಾಯ: ರುದ್ರಗೌಡ್ರ ಕಾಡನಗೌಡ್ರ ಮಾತನಾಡಿ, ಕಂಪನಿಗೆ ಸಂಬಂಧಿಸಿದ ಎಲ್ಲ ತರಹದ ಬೀಜ ಮಾರಾಟವನ್ನು ಸ್ಥಗಿತಗೊಳಿಸಿ ಪರಿಕರಗಳನ್ನು ವಶಕ್ಕೆ ಪಡೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ರೈತ ಸಂಘ ಮನವಿ ಮಾಡುವ ಮೂಲಕ 2 ದಿನಗಳ ಗಡುವನ್ನು ನೀಡಿತ್ತು. ಆದರೆ ಇಲ್ಲಿಯವರೆಗೂ ಜಿಲ್ಲಾಡಳಿತದಿಂದ ಯಾವುದೇ ಕ್ರಮಗಳಾಗಿಲ್ಲ. ನಮ್ಮ ತಾಳ್ಮೆಯನ್ನು ಪರೀಕ್ಷಿಸುವ ಕೆಲಸವಾಗುತ್ತಿದೆ. ಇನ್ನೂ ಕಾಲ ಮಿಂಚಿಲ್ಲ. ಸಂಘರ್ಷಕ್ಕಿಂತ ಮುಂಚೆ ಮಾರಾಟ ಸ್ಥಗಿತಗೊಳಿಸುವಂತೆ ಎಚ್ಚರಿಸಿದರು.ಮುಖಂಡ ಗಂಗಣ್ಣ ಎಲಿ ಮಾತನಾಡಿ, ಕಳೆದ 3 ವರ್ಷಗಳಿಂದ ಪರವಾನಗಿ ಇಲ್ಲದೇ ಅನಧಿಕೃತವಾಗಿ ತೋಟಗಾರಿಕೆ ಬಿತ್ತನೆ ಬೀಜಗಳನ್ನು ಮಾರಾಟ ಮಾಡಲಾಗುತ್ತಿದೆ. ತೋಟಗಾರಿಕೆ ಅಧಿಕಾರಿಗಳು ಬೀಜ ಮಾರಾಟಗಾರರಿಗೆ ಪರವಾನಗಿ ನೀಡದೆ ಮೌನವಾಗಿದ್ದೇಕೆ? ಕಳಪೆ ಬೀಜ ಮಾರಿದ ಕಂಪನಿ ವಿರುದ್ಧ ರೈತರು ಹೋರಾಟ ಆರಂಭಿಸುತ್ತಿದ್ದಂತೆ ಎಚ್ಚೆತ್ತು ಅಂಗಡಿಗಳಿಗೆ ತೆರಳಿ ಹೊಸದಾಗಿ ಅರ್ಜಿ ಸಲ್ಲಿಸಲು ಸೂಚನೆ ನೀಡುವ ಮೂಲಕ ತಮ್ಮದೇನೂ ತಪ್ಪಿಲ್ಲವೆಂದು ಸಾಬೀತು ಮಾಡಲು ಹೊರಟಿದ್ದಾರೆ ಎಂದರು.

ಅಧಿಕಾರಿಗಳ ಶಾಮೀಲು: ಡಾ. ಕೆ.ವಿ. ದೊಡ್ಡಗೌಡ್ರ ಮಾತನಾಡಿ, ಜಿಲ್ಲಾದ್ಯಂತ ಬಿತ್ತನೆ ಬೀಜ ಮಾರಾಟಗಾರರು ತೋಟಗಾರಿಕೆ ಅಧಿಕಾರಿ ಹಾಗೂ ಉಪನಿರ್ದೇಶಕರ ಕಣ್ಮುಂದೆ ಕಳಪೆ ಬಿತ್ತನೆ ಬೀಜ ಮಾರುವ ಮೂಲಕ ರೈತರಿಗೆ ಮೋಸ ಜರುಗಿದ ಪ್ರಕರಣಗಳು ನಡೆಯುತ್ತಿವೆ. 3 ವರ್ಷದಿಂದ ಪರವಾನಗಿ ಪಡೆಯದೇ ಮಾರಾಟ ನಡೆಸಿರುವುದು ಗೊತ್ತಿದ್ದ ಬಳಿಕವೂ ಅವರ ಮೇಲೆ ಕ್ರಮ ಕೈಗೊಳ್ಳಬೇಕಾದ ಇಲಾಖೆ ತಪ್ಪನ್ನು ಮುಚ್ಚಿಕೊಳ್ಳಲು ಬೀಜ ಮಾರಾಟಗಾರರಿಂದ ಈವರೆಗೂ ತರಕಾರಿ ಬಿತ್ತನೆ ಬೀಜ ಮಾರಿಲ್ಲವೆಂದು ಬರೆಸಿ ಕೊಡುವಂತೆ ಒತ್ತಡ ಹೇರುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.ಜಾನ್ ಪುನೀತ್ ಮಾತನಾಡಿದರು. ಫಕ್ಕೀರೇಶ ಅಜಗೊಂಡ್ರ, ನಾಗರಾಜ ಬನ್ನಿಹಟ್ಟಿ, ವಿರೂಪಾಕ್ಷಪ್ಪ ಅಂಗಡಿ, ಫಕ್ಕೀರಪ್ಪ ದಿಡಗೂರು, ಮಲ್ಲೇಶಪ್ಪ ಗೌರಾಪುರ, ಮಂಜು ಗೌರಾಪುರ, ಶೇಖಪ್ಪ ತಿಳವಳ್ಳಿ, ಅಶೋಕಗೌಡ್ರ ಹೊಂಡದಗೌಡ್ರ, ಶೇಖಪ್ಪ ತೋಟದ, ಪರಸಪ್ಪ ಪರ್ವತ್ತೇರ, ವೀರೇಶ ದೇಸೂರು, ಮಾರುತಿ ಅಗಸಿಬಾಗಿಲ, ಯಲ್ಲಪ್ಪ ಓಲೇಕಾರ, ಶಂಕ್ರಪ್ಪ ದೇಸಾಯಿ, ಪರಮೇಶಪ್ಪ ಮೂಡೇರ, ಮಂಜಪ್ಪ ದಿಡಗೂರು, ಜಯಪ್ಪ ದಿಡಗೂರು, ಚಂದ್ರಪ್ಪ ಕೋಲಾರ, ಕಾಂತೇಶ ಅಗಸಿಬಾಗಿಲ, ಮಾಲತೇಶ ಲಕ್ಕಮ್ಮನವರ, ಗೋವಿಂದಪ್ಪ ಓಲೇಕಾರ, ಶಿವರುದ್ರಪ್ಪ ಮೂಡೇರ, ಬಸವರಾಜ ಹಿರೇಮಠ ಇತರರಿದ್ದರು.

ಇಂದು ರೈತ ಸಂಘದ ಸಭೆ

ಬಿತ್ತನೆ ಬೀಜ ಕಂಪನಿ ಸಿಬ್ಬಂದಿ ಕರೆಸಿ ರೈತರಿಗೆ ನ್ಯಾಯ ಕೊಡಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ಮೇ 26ರಂದು ರೈತ ಸಂಘದ ಜಿಲ್ಲಾ ಮಟ್ಟದ ಸಭೆ ಜರುಗಲಿದೆ.ಮೆಣಸಿನಕಾಯಿ ಗಿಡದೊಂದಿಗೆ ಪ್ರತಿಭಟನೆ

ಕಳಪೆ ಮೆಣಸಿನಕಾಯಿ ಬೀಜ ಪೂರೈಸಿದ ಕಂಪನಿಯಿಂದ ಕೋಟಿ ರು.ಗಳಿಗೂ ಅಧಿಕ ಮೊತ್ತದ ಅಂದಾಜು ಹಾನಿಯಾಗಿದೆ. ಸಂತ್ರಸ್ತ ರೈತರು ಪರಿಹಾರಕ್ಕಾಗಿ ಆಗ್ರಹಿಸಿದರಲ್ಲದೇ ಕಳಪೆ ಬೀಜದಿಂದ ಮೆಣಸಿನಕಾಯಿ ಬಿಡದಿರುವ ಗಿಡಗಳನ್ನು ಪದರ್ಶಿಸಿದರು.

PREV

Latest Stories

ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ
ಚಿಕ್ಕಬಳ್ಳಾಪುರಕ್ಕೂ ಬರಲಿದೆ ಕುಸುಮ್‌ ಯೋಜನೆ
ಆರೋಗ್ಯ ಇಲಾಖೆ ಸಿಬ್ಬಂದಿಗೆ ಹೆಪಟೈಟಿಸ್ ಬಿ ಲಸಿಕೆ