ನಿರಂತರ 7 ತಾಸು ವಿದ್ಯುತ್ ನೀಡಲು ಆಗ್ರಹಿಸಿ ರೈತರ ಪ್ರತಿಭಟನೆ

KannadaprabhaNewsNetwork |  
Published : Jul 17, 2026, 02:15 AM IST
ಲಕ್ಷ್ಮೇಶ್ವರದ ಹೆಸ್ಕಾಂ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ತಾಲೂಕಿನಲ್ಲಿ ಸಮರ್ಪಕವಾಗಿ ಮಳೆ ಇಲ್ಲದೆ ಇರುವುದರಿಂದ ಬೆಳೆ ಒಣಗುತ್ತಿವೆ. ಬಿತ್ತಿದ ಬೆಳೆ ಉಳಿಸಿಕೊಳ್ಳಬೇಕೆಂದರೆ ನೀರಾವರಿಗೆ ಕರೆಂಟ್ ಸರಿಯಾಗಿ ಕೊಡುತ್ತಿಲ್ಲ.

ಲಕ್ಷ್ಮೇಶ್ವರ: ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆ ತೇವಾಂಶದ ಕೊರತೆಯಿಂದ ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿವೆ. ಬೆಳೆಗಳನ್ನು ಉಳಿಸಿಕೊಳ್ಳಲು ನೀರಾವರಿ ಮೂಲಕ ನೀರು ಹರಿಸಲು ವಿದ್ಯುತ್ ಅಗತ್ಯವಿದ್ದು, ಹೆಸ್ಕಾಂನವರು ಸಮರ್ಪಕವಾಗಿ ವಿದ್ಯುತ್ ಪೂರೈಸುತ್ತಿಲ್ಲ ಎಂದು ಆರೋಪಿಸಿ ಪಟ್ಟಣದ ಹೆಸ್ಕಾಂ ಕಚೇರಿ ಎದುರು ಗುರುವಾರ ರೈತರು ಪ್ರತಿಭಟನೆ ನಡೆಸಿದರು.

ತಾಲೂಕಿನಲ್ಲಿ ಸಮರ್ಪಕವಾಗಿ ಮಳೆ ಇಲ್ಲದೆ ಇರುವುದರಿಂದ ಬೆಳೆ ಒಣಗುತ್ತಿವೆ. ಬಿತ್ತಿದ ಬೆಳೆ ಉಳಿಸಿಕೊಳ್ಳಬೇಕೆಂದರೆ ನೀರಾವರಿಗೆ ಕರೆಂಟ್ ಸರಿಯಾಗಿ ಕೊಡುತ್ತಿಲ್ಲ. ಇದರಿಂದ ಬೆಳೆಗಳು ಒಣಗುತ್ತಿವೆ ಎಂದು ರೈತರು ಒಣಗಿದ ಮೆಕ್ಕೆಜೋಳದ ಗಿಡಗಳನ್ನು ಕೈಯಲ್ಲಿ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ರಾತ್ರಿ 2 ಗಂಟೆಗೆ ವಿದ್ಯುತ್ ನೀಡುವುದಾಗಿ ಅಧಿಕಾರಿಗಳು ತಿಳಿಸುತ್ತಾರೆ. ರೈತರು ಹೊಲಕ್ಕೆ ತೆರಳಿದ ಬಳಿಕ ವಿದ್ಯುತ್ ಪೂರೈಕೆ ಮಾಡದೇ ರೈತರೊಂದಿಗೆ ಹೆಸ್ಕಾಂ ಸಿಬ್ಬಂದಿ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆರೋಪಿಸಿದರು.

ಬ್ಯಾಂಕುಗಳಿಂದ ಸಾಲ ಪಡೆದು ಕೃಷಿ ಮಾಡಿರುವ ರೈತರು ಈಗ ಬೆಳೆ ನಷ್ಟದ ಭೀತಿಯಲ್ಲಿದ್ದಾರೆ. ಸಮರ್ಪಕ ವಿದ್ಯುತ್ ಪೂರೈಕೆ ಆಗದಿದ್ದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದು, ಈ ಪರಿಸ್ಥಿತಿ ಮುಂದುವರಿದರೆ ರೈತರು ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ರೈತರಿಗೆ ಆಗುವ ತೊಂದರೆಗಳಿಗೆ ಹೆಸ್ಕಾಂ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದರು.

ಮಳೆ ಸಮರ್ಪಕವಾಗಿ ಬರುತ್ತಿದ್ದರೆ ನಾವು ವಿದ್ಯುತ್ ಕೇಳುತ್ತಿರಲಿಲ್ಲ. ಈಗ ಮಳೆ ಇಲ್ಲದ ಕಾರಣ ನೀರಾವರಿಯೇ ಆಶ್ರಯವಾಗಿದೆ. ಬೆಳೆ ಉಳಿಸಿಕೊಳ್ಳಲು ಪ್ರತಿದಿನ ಕನಿಷ್ಠ 7 ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಇಲ್ಲವಾದಲ್ಲಿ ಲಕ್ಷ್ಮೇಶ್ವರ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯ ವೇಳೆ ಸರ್ಕಾರ ಹಾಗೂ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ರೈತರು, ತಕ್ಷಣವೇ ರೈತರ ಸಮಸ್ಯೆಗೆ ಸ್ಪಂದಿಸಿ ನಿರಂತರ ವಿದ್ಯುತ್ ಪೂರೈಕೆ ಕಲ್ಪಿಸುವಂತೆ ಒತ್ತಾಯಿಸಿದರು.

ಸೋಮವಾರದ ಒಳಗಾಗಿ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ರೈತರಿಗೆ ಸ್ಪಂದಿಸದ ಅಧಿಕಾರಿಗಳಿಗೆ ವರ್ಗಾವಣೆ ಮಾಡಬೇಕು. ಆಗದಿದ್ದರೆ ಮತ್ತೆ ಸೋಮವಾರದಿಂದ ತಾಲೂಕಿನ ರೈತರು ಸೇರಿ ಉಗ್ರ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.ರೈತರಾದ ಸುರೇಶ ಮಾಳಗಿಮನಿ, ಸುರೇಶ ನಾಯಕ, ದೇವಪ್ಪ ಲಮಾಣಿ, ಬಸವರಾಜ ಲಮಾಣಿ, ಶಿವಪ್ಪ ಲಮಾಣಿ, ಶೇಖಪ್ಪ ಮಾಳಗಿಮನಿ, ವಿನೋದ ಮಾಳಗಿಮನಿ, ರವಿ ಲಮಾಣಿ, ರಾಮಪ್ಪ ಲಮಾಣಿ, ಲೋಕೇಶ ಸುತಾರ, ಬಸವರಾಜ ಹೊಗೆಸೊಪ್ಪಿನ, ರಾಜು ಮಾಳಗಿಮನಿ, ಮಾಂತೇಶ ಲಮಾಣಿ, ಲಕ್ಷ್ಮಣ ಲಮಾಣಿ, ಶಿವು ಲಮಾಣಿ, ಇಮಾಮಹುಸೇಬ ದೊಡ್ಡಮನಿ, ಸಿದ್ದು ಗಾಂಜಿ, ಸೋಮು ಉಮಚಗಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನ ನಿರ್ವಹಣೆಗೆ ಪದವಿ ಮುಖ್ಯವಲ್ಲ, ಕೌಶಲ್ಯ ಬೇಕು
ಹೂಳು ತುಂಬಿದ ಚರಂಡಿ ದುರಸ್ತಿ ಮಾಡಿ: ಡಂಬಳ ಗ್ರಾಮಸ್ಥರ ಆಗ್ರಹ