ರಾಣಿಬೆನ್ನೂರು: ಜಿಲ್ಲಾಡಳಿತ ಬೆಳೆಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುವ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆ ನೇತೃತ್ವದಲ್ಲಿ ರೈತರು ಬುಧವಾರ ತಾಲೂಕಿನ ತಾಲೂಕಿನ ಹೆಡಿಯಾಲ ಗ್ರಾಮದ ಬಳಿ ಹರಿಹರ- ಸಮಸ್ಸಗಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಮಯದಲ್ಲಿ ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ನಿರಂತರ ಮಳೆಗೆ ನಾಶವಾದ ಬೆಳೆ ಸಮೀಕ್ಷೆಯಲ್ಲಿ ಜಿಲ್ಲಾಡಳಿತ ತಾಲೂಕನ್ನು ಕಡೆಗಣಿಸಿದೆ. ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ನಿರಂತರ ಸುರಿದ ಮಳೆಗೆ ಅಪಾರ ವೆಚ್ಚ ಮಾಡಿ ಬೆಳೆದ ಬೆಳೆಗಳು ನಾಶವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮೆಕ್ಕೆಜೋಳ, ಬೆಳ್ಳುಳ್ಳಿ, ಹತ್ತಿ ಮುಂತಾದ ಬೆಳೆಗಳು ಮಳೆಯಿಂದ ಹಾಳಾಗಿವೆ. ಕೂಡಲೇ ಪ್ರಾಮಾಣಿಕವಾಗಿ ಅಧಿಕಾರಿಗಳ ಜಂಟಿ ಸಮಿತಿ ಮಾಡಿ ಬೆಳೆ ಸಮೀಕ್ಷೆ ಮಾಡಿಸಿ ವೈಜ್ಞಾನಿಕ ಮಾದರಿಯಲ್ಲಿ ಈಗಿನ ಮಾರುಕಟ್ಟೆ ದರದ ರೂಪದಲ್ಲಿ ಬೆಳೆನಷ್ಟ ಪರಿಹಾರ ದೊರೆಯುವಂತೆ ಸರ್ಕಾರಕ್ಕೆ ಮಾಹಿತಿ ನೀಡಿ ಶೀಘ್ರ ಪರಿಹಾರ ವಿತರಿಸುವ ವ್ಯವಸ್ಥೆ ಮಾಡಬೇಕು. ನಿರ್ಲಕ್ಷ್ಯ ವಹಿಸಿದರೆ ರಾಣಿಬೆನ್ನೂರು ಬಂದ್ ಮೂಲಕ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಕೃಷಿ ಇಲಾಖೆಯ ಉಪನಿರ್ದೇಶಕ ಕರಿಯಲ್ಲಪ್ಪ, ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ, ರೇಷ್ಮೆ ಇಲಾಖೆಯ ಮಂಜುನಾಥ ನಾಯಕ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ಪರ್ವತಗೌಡ ಕುಸಗೂರ, ಮಂಜಣ್ಣ ಲಿಂಗದಹಳ್ಳಿ, ಶೇಖಣ್ಣ ಬಿಲ್ಲಹಳ್ಳಿ, ರಂಗಪ್ಪ ಪೂಜಾರ, ಚೌಡಪ್ಪ ಮಲ್ಲಾಡದ, ಚನ್ನಪ್ಪ ರಡ್ಡೇರ, ಎಸ್.ಕೆ. ಬಣಕಾರ, ಚಂದ್ರಮ್ಮ ಮಾಗನೂರ, ಶೈಲಕ್ಕ ಕೊಟ್ಟದ, ಗೌರಮ್ಮ ಬೇವಿನಹಳ್ಳಿ, ಶೈಲಮ್ಮ ಅಂಗಡಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು. ಸಿಪಿಐ ಸಿದ್ದೇಶ ಹಲಗೇರಿ, ಪಿಎಸ್‌ಐ ಪರಶುರಾಮ ಲಮಾಣಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.