ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಆಗ್ರಹಿಸಿ ರೈತರ ಪ್ರತಿಭಟನೆ

KannadaprabhaNewsNetwork |  
Published : Nov 26, 2025, 01:15 AM IST
೨ನೇ ದಿನವು ಡಿಸಿ ಕಛೇರಿ ಮುಂದೆ ಮುಂದುವರೆದ ರೈತರ ಅಹೋರಾತ್ರಿ ಧರಣಿ | Kannada Prabha

ಸಾರಾಂಶ

ಕಳಪೆ ಬೀಜದಿಂದ ಉಂಟಾದ ನಷ್ಟವನ್ನು ಸರ್ಕಾರ ಪರಿಹರಿಸಬೇಕು, ಹೊರರಾಜ್ಯದಿಂದ ಮೆಕ್ಕೆಜೋಳ ಆಮದು ನಿಲ್ಲಿಸಬೇಕು, ತಕ್ಷಣ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಆಗ್ರಹಿಸಿ, ರೈತರು ಹಗಲು, ರಾತ್ರಿ ನಿರಂತರ ಧರಣಿ ಆರಂಭಿಸಿರುವುದಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಕಳೆದ ನಾಲ್ಕು ವರ್ಷಗಳಿಂದ ಅತಿವೃಷ್ಟಿ ಹಾಗೂ ಬರಗಾಲದ ನಡುವೆ ತತ್ತರಿಸುತ್ತಿರುವ ರೈತರು ಇದೀಗ ಕಳಪೆ ಮೆಕ್ಕೆಜೋಳ ಬೀಜದ ಪರಿಣಾಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ, ಸೂಲ ಮಾಡಿ ಎರಡೆರಡೂ ಬಾರಿ ಬಿತ್ತನೆ ಮಾಡಿದರೂ ಬಂಡವಾಳವೇ ವಾಪಸ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ದಿಕ್ಕುತೋಚದ ರೈತರು ಆತ್ಮಹತ್ಯೆಗೇ ತಳ್ಳಲ್ಪಡುವಂತಾಗಿದೆ ಎಂದು ರೈತ ಸಂಘಟನೆಗಳು ಆರೋಪಿಸಿ ಡೀಸಿ ಕಚೇರಿ ಮುಂದೆ ಎರಡನೇ ದಿನವೂ ಅಹೋರಾತ್ರಿ ಧರಣಿ ಮುಂದುವರಿಸಿದವು.

ರೈತ ಸಂಘದ ರಾಜ್ಯ ಅಧ್ಯಕ್ಷೀಯ ಮಂಡಳಿ ಸದಸ್ಯ ಗ್ಯಾರಂಟಿ ರಾಮಣ್ಣ ಮಾಧ್ಯಮದೊಂದಿಗೆ ಮಾತನಾಡಿ, ರೈತರಿಗೆ ಆತ್ಮಸ್ಥೈರ್ಯ ತುಂಬಿ ರಕ್ಷಣೆ ನೀಡುವುದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಕರ್ತವ್ಯವಾಗಿದ್ದರೂ, ಸರ್ಕಾರ ರೈತರ ಸಮಾಧಿಗಳ ಮೇಲೆ ಮಹಲ್ ಕಟ್ಟುವಂಥ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿದರು. ದುಬಾರಿ ಬೀಜ, ದುಬಾರಿ ರಸಗೊಬ್ಬರ, ದುಬಾರಿ ರಾಸಾಯನಿಕಗಳು ಎಲ್ಲದರ ಬೆಲೆ ಏರಿಕೆಯಿಂದ ಬೆಳೆ ಬೆಳೆಯಲು ರೈತರು ಭಾರೀ ವೆಚ್ಚ ಮಾಡಬೇಕಾಗಿದೆ. ಆದರೆ, ಬೆಳೆದ ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ನಿಗಧಿಪಡಿಸಿದ ದರಕ್ಕೂ ಕಡಿಮೆಯಲ್ಲಿ ಮಾರಾಟವಾಗುತ್ತಿದೆ. ಬೆಲೆ ಕುಸಿತದ ಸಂದರ್ಭದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕಿದ್ದರೂ, ಇನ್ನೂ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆ ಹೈನುಗಾರಿಕೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನದಲ್ಲಿದ್ದು, ಪಶುಆಹಾರಕ್ಕೆ ಅಗತ್ಯವಾಗಿರುವ ಮೆಕ್ಕೆಜೋಳವನ್ನು ಕೆ.ಎಂ.ಎಫ್. ಹೊರರಾಜ್ಯಗಳಿಂದ ದಲ್ಲಾಳಿಗಳ ಮುಖಾಂತರ ತರಿಸಿಕೊಳ್ಳುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಹಾಸನ ಜಿಲ್ಲೆಯ ರೈತರಿಂದಲೇ ಮೆಕ್ಕೆಜೋಳ ಖರೀದಿ ಮಾಡುವ ಬದಲಿಗೆ ಹೊರಜಿಲ್ಲೆ, ಹೊರರಾಜ್ಯಗಳ ಅವಲಂಬನೆ ಮುಂದುವರಿದಿದೆ. ಇದನ್ನು ತಕ್ಷಣ ನಿಲ್ಲಿಸಿ, ಸ್ಥಳೀಯ ರೈತರಿಗೆ ಆದ್ಯತೆಯಾಗಿ ಖರೀದಿ ಪ್ರಾರಂಭಿಸಬೇಕೆಂದು ಆಗ್ರಹಿಸಿದರು.

ಕಳಪೆ ಬೀಜದಿಂದ ಉಂಟಾದ ನಷ್ಟವನ್ನು ಸರ್ಕಾರ ಪರಿಹರಿಸಬೇಕು, ಹೊರರಾಜ್ಯದಿಂದ ಮೆಕ್ಕೆಜೋಳ ಆಮದು ನಿಲ್ಲಿಸಬೇಕು, ತಕ್ಷಣ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಆಗ್ರಹಿಸಿ, ರೈತರು ಹಗಲು, ರಾತ್ರಿ ನಿರಂತರ ಧರಣಿ ಆರಂಭಿಸಿರುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ವರಿಷ್ಠ ಮೂರ್ತಿ ಕಣಗಾಲ್, ಹಿರಿಯ ಹೋರಾಟಗಾರ ಬಳ್ಳೂರು ಉಮೇಶ್, ಬಿಟ್ಟಗೌಡನಹಳ್ಳಿ ಮಂಜು, ಮರ್ಕುಲಿ ಪ್ರಕಾಶ್, ಭುವನೇಶ್, ಜಗದೀಶ್, ಶಿವಕುಮಾರ್, ಬೂಮೇಶ್ ಇತರರು ಉಪಸ್ಥಿತರಿದ್ದರು.

PREV

Recommended Stories

ವಾಟರ್‌ ಬಾಟಲ್‌ ತಯಾರಿಸಲು ಬೆಂಗಳೂರು ಜಲಮಂಡಳಿ ಸಿದ್ಧತೆ: ಶೀಘ್ರ ಮಾರುಕಟ್ಟೆಗೆ ಲಭ್ಯ
ತಾಯಿಯಿಂದಲೇ 3 ದಿನದ ಶಿಶು ಉಸಿರುಗಟ್ಟಿಸಿ ಕೊಲೆ