ಕಾಂಗ್ರೆಸ್ ಸರ್ಕಾರಕ್ಕೆ ಕುರ್ಚಿರೋಗ ಬಂದಿದೆ

KannadaprabhaNewsNetwork |  
Published : Nov 26, 2025, 01:15 AM IST
999 | Kannada Prabha

ಸಾರಾಂಶ

ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಕುರ್ಚಿರೋಗ ಬಂದಿದೆ. ಅವರ ಕುರ್ಚಿ ಕಾದಾಟದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ರೈತರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಕುರ್ಚಿರೋಗ ಬಂದಿದೆ. ಅವರ ಕುರ್ಚಿ ಕಾದಾಟದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ರೈತರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ಇರಬೇಕಾಗಿದ್ದ ರೈತರು ಸರ್ಕಾರದ ವಿರುದ್ಧ ಸಿಡಿದೆದ್ದು ಬೀದಿಗೆ ಬಂದಿದ್ದಾರೆ. ಇಷ್ಟಾಗಿಯೂ ಸರ್ಕಾರ ಎಚ್ಚೆತ್ತುಕೊಂಡು ರೈತರ ಸಂಕಷ್ಟ ಕೇಳುವ ಪ್ರಯತ್ನ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ವಾಗ್ದಾಳಿ ಮಾಡಿದರು.ಮಂಗಳವಾರ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿ, ಅನಾವೃಷ್ಟಿ, ಬೆಳೆಗೆ ರೋಗ , ಮಾರುಕಟ್ಟೆ ವ್ಯತ್ಯಯಗಳಿಂದ ರೈತರು ಬದುಕು ಚಿಂತಾಜನಕವಾಗಿದೆ. ಸರ್ಕಾರವಂತೂ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಜವಾಬ್ದಾರಿಯುತ ವಿಪಕ್ಷವಾದ ಬಿಜೆಪಿ ರೈತರ ರಕ್ಷಣೆಗೆ ನಿಲ್ಲುತ್ತದೆ. ರೈತರ ಜೊತೆ ಸೇರಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ರೂಪಿಸುತ್ತದೆ. ರೈತರು ಆತಂಕ ಪಡಬೇಡಿ, ರೈತ ವಿರೋಧಿ ಸರ್ಕಾರ ತೊಲಗಿ ಮುಂದೆ ರೈತ ಪರ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು. ಈಗ ಮೆಕ್ಕೆಜೋಳ ಬೆಳೆಯುವ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಇನ್ನೂ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿಲ್ಲ. ಬೆಳೆಹಾನಿಗೆ ಪರಿಹಾರ ಘೋಷಿಸಿ ಒಂದೂವರೆ ತಿಂಗಳಾದರೂ ಪರಿಹಾರ ಕೊಡುವಲ್ಲಿ ರಾಜ್ಯ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ರಾಜ್ಯದ ಎಲ್ಲಾ ಸಮಸ್ಯೆಗಳಿಗೂ ಕೇಂದ್ರ ಸರ್ಕಾರದ ಕಡೆ ಬೊಟ್ಟುತೋರಿಸುವುದು ಮತ್ತು ಪರಿಹಾರಕ್ಕಾಗಿ ಅವರ ಕಡೆ ಮುಖ ನೋಡುವುದಕ್ಕಷ್ಟೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸೀಮಿತವಾಗಿದೆ ಎಂದು ದೂರಿದರು.ಕೇಂದ್ರ ಸರ್ಕಾರ ರೈತ ಪರವಾದ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ನೀಡುತ್ತಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್‌ ಯೋಜನೆಯಡಿ ರಾಜ್ಯದ 51 ಲಕ್ಷ ರೈತರಿಗೆ 6 ಸಾವಿರ ರು.ಗಳನ್ನು ವಾರ್ಷಿಕವಾಗಿ ನೀಡುತ್ತಿದೆ. ಕಿಸಾನ್‌ ಕ್ರೆಡಿಟ್‌ ಕಾರ್ಡ್ ಸಾಲದ ಮೊತ್ತವನ್ನು 3 ಲಕ್ಷದಿಂದ 5 ಲಕ್ಷರು. ಗೆ ಏರಿಸಲಾಗಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 1.75 ಲಕ್ಷ ಕೋಟಿ ರು. ಹಣವನ್ನು ದೇಶದ ರೈತರಿಗೆ ನೀಡಲಾಗಿದೆ ಎಂದರು.ಪ್ರಧಾನ ಮಂತ್ರಿ ಕಿಸಾನ್ ಮಾನ್‌ಧನ್‌ ಯೋಜನೆಯಡಿ 60 ವರ್ಷದ ನಂತರ ಪಿಂಚಣಿ ರೂಪದಲ್ಲಿ ಮಾಸಿಕ 3 ಸಾವಿರ ರು..ನೀಡಲಾಗುತ್ತದೆ. ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗೆ ಒಂದು ಲಕ್ಷ ಕೋಟಿರು.ನೀಡಲಾಗಿದೆ. ಹನಿ ನಿರಾವರಿ ಪ್ರೋತ್ಸಾಹಿಸಲು ಕೃಷಿ ಸಂಚಾ ಯೋಜನೆಅಡಿಯಲ್ಲಿ 93 ಸಾವಿರ ಕೋಟಿ ಹಣ ನೀಡಲಾಗಿದೆ. ಹೀಗೆ ಹಲವಾರು ರೈತಪರ ಯೋಜನೆಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ ಎಂದು ಸದಾನಂದಗೌಡರು ಹೇಳಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ರೈತರನ್ನು ಸಂಪೂರ್ಣ ಕಡೆಗಣಿಸಿದೆ. ಹೈನುಗಾರಿಕೆಯಿಂದಲೇ ಜೀವನ ನಡೆಸುತ್ತಿರುವ ರಾಜ್ಯದ 24 ಲಕ್ಷ ಹಾಲು ಉತ್ಪಾದಕ ರೈತ ಕುಟುಂಬಗಳು ಪಶು ಆಹಾರ ಬೆಲೆ ಹೆಚ್ಚಳದಿಂದ ಸಂಕಷ್ಟಕ್ಕೊಳಗಾಗಿವೆ. ಬಾಕಿ ಉಳಿಸಿಕೊಂಡಿರುವ 620 ಕೋಟಿರು. ಪ್ರೋತ್ಸಾಹ ಧನವನ್ನುಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ರೈತರು ತಮ್ಮ ನೀರು ಬಳಸಿಕೊಳ್ಳಲು ವಿದ್ಯುತ್ ಸಂಪರ್ಕ ಮತ್ತು ಟಿಸಿ ಅಳವಡಿಕೆಗೆ 2 ಲಕ್ಷರೂ. ನಿಗದಿ ಮಾಡಿ ಸರ್ಕಾರ ರೈತರ ಜೇಬು ಕತ್ತರಿಸುತ್ತಿದೆ. ನೀರಾವರಿ ಯೋಜನೆಗಳು ಸಂಪೂರ್ಣ ನೆನೆಗುದಿಗೆ ಬಿದ್ದಿವೆ. ಸರ್ಕಾರ ರೈತ ವಿರೋಧಿ ಧೋರಣೆ ವಿರುದ್ಧ ಬಿಜೆಪಿ ಎಲ್ಲಾ ತಾಲೂಕಿನಲ್ಲಿ ಈ ತಿಂಗಳ 26-27ರಂದು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಡಿಸೆಂಬರ್ 1-2ರಂದು ಹೋರಾಟ ನಡೆಸಲು ನಿಶ್ಚಯ ಮಾಡಿದೆ ಎಂದು ಹೇಳಿದರು.ಈ ವೇಳೆ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎ.ನಾರಾಯಣಸ್ವಾಮಿ, ರೈತ ಮೋರ್ಚಾ ರಾಜ್ಯಉಪಾಧ್ಯಕ್ಷ ಬ್ಯಾಟರಂಗೇಗೌಡ, ರಾಜ್ಯ ಬಿಜೆಪಿ ಕಾರ್ಯದರ್ಶಿ ವಿನಯ್ ಬಿದರೆ, ಮುಖಂಡ ದಿಲೀಪ್‌ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗಂಗರಾಜು, ಸಂದೀಪ್‌ಗೌಡ, ಜಿಲ್ಲಾ ವಕ್ತಾರ ಟಿ.ಆರ್.ಸದಾಶಿವಯ್ಯ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದರಾಮಣ್ಣ, ಪ್ರಧಾನ ಕಾರ್ಯದರ್ಶಿ ರವೀಂದ್ರ, ಜಿಲ್ಲಾಮಹಿಳಾ ಮೋರ್ಚಾ ಅಧ್ಯಕ್ಷೆ ಸುಮಿತ್ರಮ್ಮ, ಮಾಧ್ಯಮ ಪ್ರಮುಖರಾದ ಜೆ.ಜಗದೀಶ್, ಮರಿತಿಮ್ಮಯ್ಯ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುವೆಂಪು ಸದ್ಭಾವನಾ ಪ್ರಶಸ್ತಿಗೆ ಭಾಜನರಾದ ಶ್ರೀ ಶ್ಯಾಮ್ ಸುಂದರ್ ಹೆಗ್ಡೆ
ಕಿಡ್ನಾಪ್‌ ಆದ 1094 ಮಕ್ಕಳು ಇನ್ನೂ ಪತ್ತೆಯಾಗಿಲ್ಲ!