ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಪ್ರವಾಸಿ ಮಂದಿರದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು, ಗುಂಡ್ಲುಪೇಟೆ ಸರ್ಕಲ್, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತ, ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನದ ಮುಂಭಾಗಕ್ಕೆ ತೆರಳಿ ಪ್ರತಿಭಟನೆ ನಡೆಸಿದರು, ಮೆರವಣಿಗೆಯುದ್ದಕ್ಕೂ ಕೇಂದ್ರ ಮತ್ತು ಸರ್ಕಾರಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಚಾಮರಸ ಮಾಲಿ ಪಾಟೀಲ್, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು, ರವಿಕಿರಣ್ ಪೊಣಚ್ಚ, ಅಭಿರುಚಿ ಗಣೇಶ್, ಎ.ಎಂ. ಮಹೇಶ್‌ಪ್ರಭು, ಮಾತನಾಡಿ, ಯಾವುದೇ ರಾಜಕೀಯ ಪಕ್ಷ ಇರಲಿ ಅ ಪಕ್ಷಗಳ ಅಭ್ಯರ್ಥಿಗಳು ಗೆಲ್ಲುವ ತನಕ ಮಾತ್ರ ರೈತ ಸಂಘನೆಯೊಂದಿಗೆ ಬೆರೆಯುತ್ತವೆ. ಗೆದ್ದ ನಂತರ ತಿರುಗಿಯೂ ನೋಡುವುದಿಲ್ಲ, ಇದಕ್ಕೆ ರೈತ ಸಂಘಟನೆಗಳಲ್ಲಿರುವ ರಾಜಕೀಯ ಅಸ್ಪಷ್ಟತೆಯೇ ಕಾರಣ ಎಲ್ಲಿಯವರೆಗೆ ನಮ್ಮಲ್ಲಿ ರಾಜಕೀಯ ಸ್ಪಷ್ಟತೆ ಇರುವುದಿಲ್ಲವೋ ಆಲ್ಲಿವರೆಗೂ ಪ್ರತಿಭಟನೆಗಳು ನಡೆಯುತ್ತವೆ, ಯಾವುದಕ್ಕೂ ಪರಿಹಾರ ಸಿಗುವುದಿಲ್ಲ ಎಂದರು. ಕಾನೂನು ಕ್ರಮ ಕೈಗೊಳ್ಳಿ:
ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ಬಿಜೆಪಿ ಪಕ್ಷದ ಕೆಲವು ಪುಂಡರು ರೈತ ಮುಖಂಡರಾದ ಮಹೇಶ್‌ಪ್ರಭು ಮತ್ತು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದು ಇವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳಬೇಕು ಇದರ ಬಗ್ಗೆ ಸಂಬಂಧಪಟ್ಟವರು ಬಂದು ಸ್ಟಷ್ಟನೆ ನೀಡಬೇಕು ಎಂದರು.ಪ್ರಧಾನಿ ಮಾತು ತಪ್ಪಿದ್ದಾರೆ:ರೈತ ಮುಖಂಡರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣವನ್ನು ಕೈ ಬಿಡಬೇಕು ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದು ೧೦ ವರ್ಷವಾದರೂ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ, ಇದರ ಬಗ್ಗೆ ಪ್ರಶ್ನೆ ಮಾಡಿ ದೇಶಾದ್ಯಂತ ರೈತ ಸಂಘಟನೆಗಳು ಈ ಬಾರಿ ಬಿಜೆಪಿ ವಿರುದ್ಧ ಮತ ಚಲಾಸುವಂತೆ ಕರೆ ನೀಡಿದ್ದೇವು, ಅದರಂತೆ ಕರ್ನಾಟಕದಲ್ಲೂ ಮಾಡಿದೆವು ಇದು ತಪ್ಪೇ, ಎಂದು ಆಕ್ರೋಶ ವ್ಯಕ್ತಪಡಿಸಿದರು .ರಾಜ್ಯ ಸರ್ಕಾರ ರೈತರ ಕೃಷಿ ಪಂಪ್‌ಸೆಟ್‌ಗಳ ಅನಧಿಕೃತ ವಿದ್ಯುತ್ ಸಂಪರ್ಕವನ್ನು ಅಧಿಕೃತಗೊಳಿಸಲು ಹಾಗೂ ಹೊಸ ಸಂಪರ್ಕವನ್ನು ಪಡೆಯಲು ರೈತರೇ ಪೂರ್ಣ ವೆಚ್ಚವನ್ನು ಭರಿಸಬೇಕೆಂದು ಹೊರಡಿಸಿರುವ ಆದೇಶವನ್ನು ಕೂಡಲೇ ಕೈಬಿಟ್ಟು ಸಾಂಕೇತಿಕ ಮೊತ್ತವನ್ನು ಪಡೆದು ಸಂಪರ್ಕವನ್ನು ಕಲ್ಪಿಸಬೇಕು. ವಿಶೇಷ ಪ್ಯಾಕೇಜ್ ನೀಡಿ:
ರಾಜ್ಯದಲ್ಲಿ ತಲೆದೋರಿರುವ ಬರಗಾಲಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯ ಪೂರ್ಣ ಮೊತ್ತವನ್ನು ಕೇಂದ್ರ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಮೂಲಕ ರೈತರಿಗೆ ಪೂರ್ಣ ನಷ್ಟ ಪರಿಹಾರವನ್ನು ತುಂಬಿಕೊಡಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯಾದ್ಯಂತ ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯಡಿ ರೈತರು ವಿವಿಧ ಬೆಳೆ ವಿಮೆ ಪಾಲಿಸಿ ಕಟ್ಟಿದ್ದು ವಿಮಾ ಕಂಪನಿಯವರು ರೈತರ ಖಾತೆಗೆ ಪರಿಹಾರದ ಮೊತ್ತವನ್ನು ಕೂಡಲೇ ಪಾವತಿಸಬೇಕು.ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡುವ ನೀತಿ ಜಾರಿಯಾಗುವವರೆಗೂ ಸ್ವಾಮಿನಾಥನ್ ವರದಿಯನ್ವಯ ಕನಿಷ್ಠ ಬೆಂಬಲ ಬೆಲೆಯನ್ನು ನೀಡಿ, ಎಲ್ಲಾ ಬೆಳೆಗಳನ್ನು ಸಕಾಲದಲ್ಲಿ ಖರೀದಿಸಬೇಕು. ಅಲ್ಲಿವರೆಗೆ ರೈತರಿಗೆ ವಿದ್ಯುತ್ ಮತ್ತು ಕೃಷಿ ಒಳಸುರಿಗಳು ಹಾಗೂ ಮಾನವ ಸಂಪನ್ಮೂಲ ವೆಚ್ಚವನ್ನು ಉತ್ಪಾದನಾ ಸಹಾಯಧನವನ್ನಾಗಿ ಉದ್ಯೋಗ ಖಾತ್ರಿ ಯೋಜನೆಯ ಅಡಿ ಎಲ್ಲಾ ರೈತರಿಗೂ ನೀಡಬೇಕು ಎಂದು ಒತ್ತಾಯಿಸಿದರು.ಸರ್ಕಾರಕ್ಕೆ ಮನವಿ ಸಲ್ಲಿಕೆ:
ಮಾನವ ಮತ್ತು ವನ್ಯ ಜೀವಿ ಸಂಘರ್ಷವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ವನ್ಯ ಜೀವಿಗಳಿಂದ ರೈತರಿಗೆ ಉಂಟಾಗುವ ಬೆಳೆ, ಆಸ್ತಿ, ಪ್ರಾಣಹಾನಿಗೆ ಹೆಚ್ಚಿನ ಪರಿಹಾರವನ್ನು ಸಕಾಲದಲ್ಲಿ ಪಾವತಿಸಬೇಕು. ವನ್ಯಜೀವಿಗಳಿಂದ ಸಾವಿಗೀಡದ ಕುಟುಂಬದ ಒಬ್ಬ ಸದಸ್ಯರಿಗೆ ಕಾಯಂ ಉದ್ಯೋಗ ದೊರಕಿಸಿಕೊಡಬೇಕು ಆ ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು. ವನ್ಯಜೀವಿಗಳಿಂದ ಸತ್ತ ಜಾನುವಾರುಗಳಿಗೂ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಪ್ರಸನ್ನ, ಜೆ.ಎಂ. ವೀರಸಂಗಯ್ಯ, ಭಾಸ್ಕರ್, ಉಗ್ರನರಸಿಂಹೇಗೌಡ, ಗಣೇಶ್, ಕೆಂಪೇಗೌಡ, ರವಿಕಿರಣ್, ಲಿಂಗಪ್ಪಾಜಿ, ಪ್ರಕಾಶ್, ಮಾದಮ್ಮ, ಶಿವಪುರ ಮಹದೇವಪ್ಪ ಕುಮಾರ್, ಸಿದ್ದರಾಜು, ಚಿನ್ನಸ್ವಾಮಿ ಗೌಂಡರ್, ಶೈಲೇಂದ್ರ, ಗೌಡೇಗೌಡ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.