ಹಕ್ಕುಪತ್ರಕ್ಕಾಗಿ ರೈತರಿಂದ ಅರೆಬೆತ್ತಲೆ ಪ್ರತಿಭಟನೆ

KannadaprabhaNewsNetwork |  
Published : Sep 04, 2025, 01:01 AM IST

ಸಾರಾಂಶ

ಬಗರ ಹುಕುಂ ಸಾಗುವಳಿದಾರರು, ಅರಣ್ಯ ಅವಲಂಬಿತ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಮಹಾಸಭಾ ವತಿಯಿಂದ ಬುಧವಾರ ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ಅರೆಬೆತ್ತಲೆ ಧರಣಿ ನಡೆಸಿ, ಗದಗ-ಹುಬ್ಬಳ್ಳಿ ಮುಖ್ಯರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಲಾಯಿತು.

ಗದಗ: ಬಗರ ಹುಕುಂ ಸಾಗುವಳಿದಾರರು, ಅರಣ್ಯ ಅವಲಂಬಿತ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಮತ್ತು ನರಸಾಪುರ ಕೈಗಾರಿಕಾ ಕೆಐಡಿಬಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಒತ್ತಾಯಿಸಿ ಉತ್ತರ ಕರ್ನಾಟಕ ಮಹಾಸಭಾ ವತಿಯಿಂದ ಬುಧವಾರ ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ಅರೆಬೆತ್ತಲೆ ಧರಣಿ ನಡೆಸಿ, ಗದಗ-ಹುಬ್ಬಳ್ಳಿ ಮುಖ್ಯರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಲಾಯಿತು.

ಮೂರು ವಾರಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಪ್ರತಿಭಟನೆಕಾರರು ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ತಡೆಯಿಂದ ಕೆಲವು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಹುಬ್ಬಳ್ಳಿಯಿಂದ ಗದಗ ಬರುವ ಕೆಲವು ಬಸ್‌ಗಳು ಜಿಲ್ಲಾಡಳಿತ ಭವನದ ಮುಂಭಾಗದಲ್ಲೇ ಪ್ರಯಾಣಿಕರನ್ನು ಇಳಿಸಿ ಹುಬ್ಬಳ್ಳಿಗೆ ಮರಳಿದವು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ರವಿಕಾಂತ ಅಂಗಡಿ, ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೇ ಜಿಲ್ಲೆಯ ಅರಣ್ಯ ಅವಲಂಬಿತ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ತಿರಸ್ಕರಿಸಲಾಗಿದೆ. ತಿರಸ್ಕೃತ ಅರ್ಜಿಗಳ ಮರುಪರಿಶೀಲನೆಗೆ ಸರ್ಕಾರ ಭರವಸೆ ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಹೊಸ ಅರ್ಜಿ ಸ್ವೀಕಾರಕ್ಕೆ ಅನುಮತಿ ದೊರೆತಿದ್ದರೂ ಅರಣ್ಯ ಅವಲಂಬಿತ ರೈತರಿಂದ ಅರ್ಜಿಗಳನ್ನು ಸ್ವೀಕರಿಸದೇ ರೈತರಿಗೆ ಅನ್ಯಾಯ ಮಾಡಲಾಗಿದೆ. ತಕ್ಷಣ ಅರ್ಜಿಗಳನ್ನು ಸ್ವೀಕರಿಸಿ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯ ನಿರ್ಮಿಸಲು ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಅಥವಾ ಪರ್ಯಾಯ ಜಮೀನು ಒದಗಿಸಬೇಕು. ಲಕ್ಷೇಶ್ವರ ತಾಲೂಕಿನ ಯಲ್ಲಾಪುರ ಗ್ರಾಮದ ಹುಲ್ಲುಗಾವಲು ಸಾಗುವಳಿ ರೈತರಿಗೆ ಕೂಡ ತಕ್ಷಣ ಹಕ್ಕುಪತ್ರ ನೀಡಬೇಕು. ಬೆಳದಡಿ, ನಾಗಾವಿ ತಾಂಡಾ, ಕಳಸಾಪುರ, ಅಡವಿಸೋಮಾಪುರ, ಹುಯಿಲಗೊಳ, ಮುರುಡಿ ತಾಂಡಾ, ನಾಗಾವಿ ಮುಂತಾದ ಗ್ರಾಮಗಳಲ್ಲಿ ಇನಾಮದ ಭೂಮಿಯನ್ನು ನಿಜವಾದ ರೈತರು ಪೀಳಿಗೆಗಳಿಂದ ಸಾಗುವಳಿ ಮಾಡಿ ಬದುಕು ಕಟ್ಟಿಕೊಂಡು ಬಂದರು. ನಕಲಿ ದಾಖಲೆ ಸೃಷ್ಟಿಸಿ ಆ ಭೂಮಿಯನ್ನು ಕಸಿದುಕೊಳ್ಳಲಾಗಿದೆ. ಈ ಅಕ್ರಮದಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ನೊಂದ ರೈತರಿಗೆ ನ್ಯಾಯ ಒದಗಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಎನ್.ಟಿ. ಪೂಜಾರ, ರಮೇಶ ಮಜ್ಜೂರು, ಶ್ರೀನಿವಾಸ ಶಿರಹಟ್ಟಿ, ಬಸವಣ್ಣೆಪ್ಪ ಚಿಂಚಲಿ, ಚಂಬಣ್ಣ ಚೆನ್ನಪಟ್ಟಣ, ಹನುಮಂತ ಚೆನ್ನಪಟ್ಟಣ, ಖಾದೀರ್ ಸಾಬ್, ಫಿರೋಜ್ ನದಾಫ್, ಮಹಮ್ಮದ ಶಲವಡಿ ಹಾಗೂ ರೈತರು, ಮಹಿಳೆಯರು ಭಾಗವಹಿಸಿ ಪ್ರತಿಭಟನೆಯನ್ನು ಗಟ್ಟಿಗೊಳಿಸಿದರು.

ಸಾಮೂಹಿಕ ದಿಡ್ ನಮಸ್ಕಾರ!: ಬಗರಹುಕುಂ ಸಾಗುವಳಿದಾರರು, ಅರಣ್ಯ ಅವಲಂಬಿತ ರೈತರಿಗೆ ಹಕ್ಕುಪತ್ರ ನೀಡುವಂತೆ ಜಿಲ್ಲಾಡಳಿತದ ಎದುರು ಸತತ 17 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ನಿರ್ಲಕ್ಷಿಸಿದ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ನಡೆ ಖಂಡಿಸಿ, ನಗರದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಸೆ. 4ರಂದು ರೈತರು ಸಾಮೂಹಿಕ ದಿಡ್ ನಮಸ್ಕಾರ ಹಾಕಲಿದ್ದಾರೆ ಎಂದು ಉತ್ತರ ಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ