ಆಲೂರು ವಾಟೆಹೊಳೆ ಜಲಾಶಯ ಎದುರು ರೈತರ ಪ್ರತಿಭಟನೆ

KannadaprabhaNewsNetwork |  
Published : Apr 01, 2024, 12:49 AM IST
31ಎಚ್ಎಸ್ಎನ್14 : ವಾಟೇಹೊಳೆ ಜಲಾಶಯದ ಎಂಜಿನಿಯರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡಿರುವುದು. | Kannada Prabha

ಸಾರಾಂಶ

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಆಲೂರು, ತಾಲೂಕು ಪದಾಧಿಕಾರಿಗಳು ಶನಿವಾರ ಆಲೂರಿನ ವಾಟೆಹೊಳೆ ಜಲಾಶಯ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕೆರೆಗಳಿಗೆ ನೀರು ಹರಿಸಲು ಒತ್ತಾಯ । ಜಲಾಶಯ ಎಂಜಿನಿಯರ್‌ ಕಚೇರಿಗೆ ಮುತ್ತಿಗೆ

ಕನ್ನಡಪ್ರಭ ವಾರ್ತೆ ಆಲೂರು

ಜನ, ಜಾನುವಾರಿಗೆ ಸಪರ್ಮಕ ಕುಡಿಯುವ ನೀರು ಪೂರೈಸಲು ಕೆರೆ-ಕಟ್ಟೆ, ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಆಲೂರು, ತಾಲೂಕು ಪದಾಧಿಕಾರಿಗಳು ಶನಿವಾರ ವಾಟೆಹೊಳೆ ಜಲಾಶಯ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಳೆದ ವರ್ಷ ಸರಿಯಾಗಿ ಮಳೆ ಆಗದ ಹಿನ್ನೆಲೆ ತಾಳೂರು,ಕಣತೂರು, ಹುಣಸವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆರೆ-ಕಟ್ಟೆಗಳು ಬತ್ತಿ ಹೋಗಿದ್ದು ಜನ-ಜಾನುವಾರಿಗೆ ಕುಡಿಯಲು ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಅದ್ದರಿಂದ ವಾಟೆಹೊಳೆ ಜಲಾಶಯದಿಂದ ಎಡ, ಬಲ ಹಾಗೂ ನಾಕಲಗೋಡು ಸೀಳು ನಾಲೆಗಳಿಗೆ ನೀರು ಹರಿಸುವ ಮೂಲಕ ಹತ್ತಾರು ಕೆರೆಗಳಿಗೆ ನೀರು ತುಂಬಿಸಿ ಜನ-ಜಾನುವಾರಿಗೆ ಕುಡಿಯುವ ನೀರು ಒದಗಿಸುವಂತೆ ಒತ್ತಾಯಿಸಿದರು.

ನೀರಿನ ಸಮಸ್ಯೆ ಕುರಿತಾಗಿ ಈಗಾಗಲೇ ಹಲವು ಬಾರಿ ನೀರಾವರಿ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನೀರಿನ ಬವಣೆ ಎದುರಿಸುತ್ತಿರುವ ರೈತರ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ಮಂದ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ರೈತರು ಹಾಗೂ ಜಾನುವಾರಿಗೆ ನೀರು ಪೂರೈಕೆ ಮಾಡುವ ಬದಲು ತಮಿಳುನಾಡಿನ ಕೃಷಿ ಚಟುವಟಿಕೆ, ಬೆಂಗಳೂರು ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದಕ್ಕೆ ಬದಲಾಗಿ ಕೂಡಲೇ ಸಮಸ್ಯೆ ಇರುವ ಭಾಗದ ನಾಲೆಗಳಿಗೆ ನೀರು ಹರಿಸಬೇಕು. ಇಲ್ಲಿನ ಜನ, ಜಾನುವಾರು ಎದುರಿಸುತ್ತಿರುವ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ವಾಟೆಹೊಳೆ ನೀರಾವರಿ ಇಲಾಖೆ ಎಇಇ ಧರ್ಮರಜು ಅವರಿಗೆ ಮನವಿ ಸಲ್ಲಿಸಿದರು.

ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಎಚ್.ಬಿ.ಧರ್ಮರಾಜ್ ಮಾತನಾಡಿ, ಆಲೂರು ತಾಲೂಕಿನಲ್ಲಿ ಬಹುತೇಕ ಕೆರೆಗಳು ಬತ್ತಿ ಹೋಗಿವೆ. ಇದರಿಂದ ಜನ-ಜಾನುವಾರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಕೊಳವೆ ಬಾವಿಗಳಲ್ಲಿ ಅಂತರ್ಜಲ ಕೊರತೆ ಎದುರಿಸುವಂತಾಗಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅದ್ದರಿಂದ ಜಲಾಶಯದಲ್ಲಿ ಇರುವ ನೀರನ್ನು ಕೆರೆ-ಕಟ್ಟೆಗಳಿಗೆ ತುಂಬಿಸಿ ಈ ಭಾಗದ ಜನರ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದರು.

ಡಿಎಸ್ಎಸ್ ಹಿರಿಯ ಮುಖಂಡ ಗೇಕರವಳ್ಳಿ ಬಸವರಾಜ್ ಮಾತನಾಡಿ, ಕಳೆದ ಸಾಲಿನಲ್ಲಿ ಮಳೆ ಅಭಾವದಿಂದ ಕೆರೆ-ಕಟ್ಟೆಗಳು ಬತ್ತಿ ಹೋಗಿವೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಅದ್ದರಿಂದ ವಾಟೆಹೊಳೆ ಜಲಾಶಯದಲ್ಲಿ ಇರುವ ನೀರನ್ನು ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ ಜನರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ವಾಟೆಹೊಳೆ ನೀರಾವರಿ ಇಲಾಖೆ ಎಇಇ ಧರ್ಮರಾಜು ಮನವಿ ಸ್ವೀಕರಿಸಿ ಮಾತನಾಡಿ, ಇಲಾಖೆ ವಾಟೆಹೊಳೆ ಜಲಾಶಯಕ್ಕೆ ಸೇರಿದ ನಾಲೆಗಳು ಸಂಪೂರ್ಣವಾಗಿ ದುರಸ್ತಿಯಲ್ಲಿರುವುದರಿಂದ ನೀರು ಹರಿಸಲು ಸಾದ್ಯವಾಗುತ್ತಿಲ್ಲ. ಜಲಾಶಯದಲ್ಲಿ ನೀರಿನ ಪ್ರಮಾಣ ಸಂಪೂರ್ಣವಾಗಿ ಕುಸಿದಿದೆ. ಈ ಬಗ್ಗೆ ಚರ್ಚಿಸಲಾಗುವುದು ಎಂದರು.

ಎಚ್.ಬಿ.ಧರ್ಮರಾಜು, ಯೋಗಣ್ಣ, ದಲಿತ ಹಿರಿಯ ಮುಖಂಡ ಗೇಕರವಳ್ಳಿ ಬಸವರಾಜ್, ಕೃಷ್ಣಮೂರ್ತಿ, ತೀರ್ಥ ಕುಮಾರ್ ಇದ್ದರು.

ಆಲೂರಿನ ವಾಟೆಹೊಳೆ ಜಲಾಶಯದ ಎಂಜಿನಿಯರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!