ಬಿಡಿಸಿಸಿ ಬ್ಯಾಂಕ್‌ ಅಮೀನಗಡ ಶಾಖೆ ಎದುರು ರೈತರ ಪ್ರತಿಭಟನೆ

KannadaprabhaNewsNetwork | Updated : May 28 2024, 01:03 AM IST

ಸಾರಾಂಶ

2022ರಲ್ಲಿ ಅಮೀನಗಡ ಬಿಡಿಸಿಸಿ ಬ್ಯಾಂಕ್‌ ಸಿಬ್ಬಂದಿಯಿಂದ ನಡೆದ ಬಹುಕೋಟಿ ಅವ್ಯವಹಾರದಲ್ಲಿ ಸಿಒಡಿ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಅಮೀನಗಡ

2022ರಲ್ಲಿ ಅಮೀನಗಡ ಬಿಡಿಸಿಸಿ ಬ್ಯಾಂಕ್‌ ಸಿಬ್ಬಂದಿಯಿಂದ ನಡೆದ ಬಹುಕೋಟಿ ಅವ್ಯವಹಾರದಲ್ಲಿ ಖಾತೆದಾರರೂ ಭಾಗಿಯಾಗಿದ್ದಾರೆಂದು, ಸಿಒಡಿ ಅಧಿಕಾರಿಗಳು, ಖಾತೆದಾರರಿಗೆ ನೋಟಿಸ್ ನೀಡಿ ಜಿಲ್ಲಾ ಕಚೇರಿಗೆ ಕರೆಸಿದ್ದರು. ಅಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಖಾತೆ ಹೊಂದಿರುವ ನೂರಾರು ರೈತರು ಸೋಮವಾರ ಬ್ಯಾಂಕ್ ಶಾಖಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರ ದೇವರಾಜ ಕಮತಗಿ, ನಾಗೇಶ ಗಂಜೀಹಾಳ ಮಾತನಾಡಿ, ಬಿಡಿಸಿಸಿ ಬ್ಯಾಂಕಿನ ಅಮೀನಗಡ ಶಾಖೆಯಲ್ಲಿ ಸಿಪಾಯಿ ಹಾಗೂ ಸಿಬ್ಬಂದಿ ಮೂಲಕ ಜರುಗಿದ ಬಹುಕೋಟಿ ಹಗರಣದಲ್ಲಿ ಅಮಾಯಕ ರೈತರ ಖಾತೆಯ ಮೂಲಕ ವ್ಯವಸ್ಥಿತವಾಗಿ ಹಣ ಲಪಟಾಯಿಸಲಾಗಿದೆ. ಅಧಿಕಾರಿಗಳು ನಿಜವಾದ ಲೂಟಿಕೋರರನ್ನು ಹೊರಗೆ ಬಿಟ್ಟು ಅಮಾಯಕ ರೈತರನ್ನು ವಿಚಾರಣೆ ನೆಪದಲ್ಲಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಪ್ರತಿಬಾರಿಯೂ ಒಬ್ಬೊಬ್ಬರನ್ನು ಜಿಲ್ಲಾ ಕೇಂದ್ರಕ್ಕೆ ಕರೆಸಿ ಹಣತುಂಬಿ ಇಲ್ಲವೆ ನಾವೇ ತಪ್ಪು ಮಾಡಿದ್ದೇವೆಂದು ಒಪ್ಪಿಕೊಳ್ಳಿ ಎಂದು ಒತ್ತಾಯಿಸುತ್ತಿದ್ದಾರೆ ಎಂದು ದೂರಿದರು.

ವಂಚಿಸಿದ ಸಿಬ್ಬಂದಿ ಹಾಗೂ ಸಿಪಾಯಿ ಭೀತಿಯಿಲ್ಲದೆ ಓಡಾಡುತ್ತಿದ್ದಾರೆ. ಸಿಒಡಿ ಅಧಿಕಾರಿಗಳ ಕಠಿಣ ವಿಚಾರಣೆಯಿಂದ ನಮ್ಮನ್ನು ಮುಕ್ತಗೊಳಿಸಿ, ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಅವರು ಆಗ್ರಹಿಸಿದರು. ಕಳೆದ ಎರಡು ವರ್ಷಗಳಿಂದ ಮಳೆಯಿಲ್ಲದೆ ಬೆಳೆಗಳು ಒಣಗಿ ರೈತರು ಸಂಕಷ್ಟದಲ್ಲಿದ್ದಾರೆ. ಈಗಷ್ಟೇ ಮಳೆಯಾಗುತ್ತಿದ್ದು, ಹೊಲದಲ್ಲಿ ದುಡಿಯೋಣವೋ ಅಥವಾ ಜಮೀನು ಬೀಳುಬಿಟ್ಟು ವಿಚಾರಣೆ ಎದುರಿಸುವುದೋ ತಿಳಿಯುತ್ತಿಲ್ಲ. ಮೇಲಿಂದ ಮೇಲೆ ಕರೆಸಿ ವಿಚಾರಣೆ ಮಾಡುವುದನ್ನು ಮುಂದುವರಿಸಿದರೆ ಬ್ಯಾಂಕಿನ ಮುಂದೆ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಶಾಖಾ ವ್ಯವಸ್ಥಾಪಕ ಮಹಾಂತೇಶ ಗಂಜೀಹಾಳ ಪ್ರತಿಭಟನಾಕಾರರಿಗೆ ಮನವೊಲಿಸಲು ಯತ್ನಿಸಿದರು. ಆಗ ಇದನ್ನು ಕೇಳಲು ನಿರಾಕರಿಸಿದ ಪ್ರತಿಭಟನಾಕಾರರು ಪ್ರಧಾನ ವ್ಯವಸ್ಥಾಪಕರೇ ಬರಬೇಕು ಎಂದು ಪಟ್ಟು ಹಿಡಿದು ಧರಣಿ ಮುಂದುವರಿಸಿದರು.

ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಬಾಗಲಕೋಟೆಯಿಂದ ಆಗಮಿಸಿದ, ಬಿಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯ ಪ್ರಭಾರಿ ಪ್ರಧಾನ ವ್ಯವಸ್ಥಾಪಕ ಬಸವರಾಜ ಪೂಜಾರಿ, ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಈಗ ಚುನಾವಣೆ ನೀತಿಸಂಹಿತೆ ಇರುವುದರಿಂದ ಯಾವುದೇ ಭರವಸೆ ನೀಡಲಾಗುವುದಿಲ್ಲ. ಎರಡು ಮೂರು ದಿನಗಳಲ್ಲಿ ಅಧ್ಯಕ್ಷ ಅಜಯಕುಮಾರ ಸರನಾಯಕ ಅವರೊಂದಿಗೆ ರೈತರು ಸಮಾಗಮ ಚರ್ಚೆ ಮಾಡಲು ಅವಕಾಶ ಕೊಡಲಾಗುವುದು. ಯಾವುದೇ ರೈತರಿಗೆ ಅನಾವಶ್ಯಕ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದರಿಂದ ತೃಪ್ತಗೊಂಡ ರೈತರು ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ದೇವರಾಜ ಕಮತಗಿ, ಸುರೇಶ ಗಂಜೀಹಾಳ, ಆನಂದ ಮೋಕಾಶಿ, ನಾಗೇಶ ಗಂಜೀಹಾಳ, ಈರಣ್ಣ ಫರಾಳದ, ವೀರಯ್ಯ ಲೂತಿಮಠ, ಆನಂದ ಮೊಕಾಶಿ, ಪ್ರಶಾಂತ ಲೂತಿಮಠ, ಧರ್ಮಣ್ಣ ಬಾಗಲಿ, ಶ್ರೀಧರ ನಿರಂಜನ, ತಿಪ್ಪವ್ವ ಕತ್ತಿ, ಲಿಂಗಮ್ಮ ಸಜ್ಜನ ಮುಂತಾದವರಿದ್ದರು. ಅಹಿತಕರ ಘಟನೆ ಜರುಗದಂತೆ ಜಿಲ್ಲಾ ಸಶಸ್ತ್ರ ಪಡೆ, ಅಮೀನಗಡ ಪೊಲೀಸ್‌ ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಯಾರೋ ಮಾಡಿದ ತಪ್ಪಿಗೆ ರೈತರಿಗೆ ಶಿಕ್ಷೆ ನೀಡಲಾಗುತ್ತಿದೆ. ಅವ್ಯವಹಾರ ನಡೆಸಿದ ಬ್ಯಾಂಕ್‌ ಸಿಬ್ಬಂದಿ ಕಣ್ಮುಂದೆಯೂ ಇದ್ದರೂ ಅವರನ್ನು ಬಿಟ್ಟು ತನಿಖೆ ನೆಪದಲ್ಲಿ ರೈತರಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ. ಬರದ ಸಂಕಷ್ಟಕ್ಕೆ ಹೈರಾಣಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದ್ದು, ಕೂಡಲೇ ಇದನ್ನು ನಿಲ್ಲಿಸದಿದ್ದರೆ ಬ್ಯಾಂಕ್‌ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ.

-ದೇವರಾಜ ಕಮತಗಿ, ನಾಗೇಶ ಗಂಜೀಹಾಳ, ಪ್ರತಿಭಟನಾ ನಿರತ ರೈತರು

Share this article