ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಮಿನಿ ವಿಧಾನಸೌಧದ ಬಳಿ ಅನಧಿಕೃತ ಪೆಟ್ಟಿಗೆ ಅಂಗಡಿಯನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮತ್ತು ರೈತ ಮುಖಂಡರು ಪ್ರತಿಭಟನೆ ನಡೆಸಿದರು.ಕರವೇ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು ನೇತೃತ್ವದಲ್ಲಿ ಪೆಟ್ಟಿಗೆ ಅಂಗಡಿ ಅಳವಡಿಸಿದ್ದ ಸ್ಥಳದಲ್ಲಿ ನಿಂತು ತಾಲೂಕು ಆಡಳಿತ ಮತ್ತು ಪುರಸಭೆ ವಿರುದ್ಧ ಘೋಷಣೆ ಕೂಗಿ ಅಕ್ರಮ ಪೆಟ್ಟಿಗೆ ಅಂಗಡಿಯನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.
ಕರವೇ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು ಮಾತನಾಡಿ, ಪ್ರತಿನಿತ್ಯ ತಾಲೂಕು ಕಚೇರಿಗೆ ಸಾವಿರಾರು ಜನರು ಬಂದು ಹೋಗುತ್ತಾರೆ. ಇವರಿಗೆ ತೊಂದರೆ ನೀಡಿ ರಸ್ತೆಯಲ್ಲಿ ಅನಧಿಕೃತವಾಗಿ ಪೆಟ್ಟಿಗೆ ತಂದಿಟ್ಟಿದ್ದರು. ತೆರವುಗೊಳಿಸುವಂತೆ ಪ್ರತಿಭಟಿಸಲಾಯಿತು ಎಂದರು.ಪಟ್ಟಣದ ಎಲ್ಲಾ ಪಾದಚಾರಿ ಮಾರ್ಗವನ್ನೂ ಅನಧಿಕೃತ ಪೆಟ್ಟಿಗೆ ಅಂಗಡಿಗಳು ಅತಿಕ್ರಮಿಸಿವೆ. ವರ್ತಕರು ಫುಟ್ ಪಾತ್ ಒತ್ತುವರಿ ಮಾಡಿ ಖಾಯಂ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪುರಸಭೆ, ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಪಾದಚಾರಿಗಳ ಸುಗಮ ಸಂಚಾರಕ್ಕೆ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂದಿನಿ ಮಳಿಗೆ ಹೆಸರಿನಡಿ ಸರ್ಕಾರದ ಜಾಗದಲ್ಲಿ ಎಲ್ಲೆಂದರಲ್ಲಿ ಮಳಿಗೆಗಳನ್ನು ತೆರೆಯಲಾಗಿದೆ. ಆದರೆ, ಮಳಿಗೆಗಳಲ್ಲಿ ಕಾಫಿ, ಟೀ ಸಿಗರೇಟ್, ಬೀಡಿ, ಪಾನ್ ಪರಾಗ್, ಗುಟ್ಕಾ ಸೇರಿದಂತೆ ಬೇರೆ ರೀತಿಯ ಪದಾರ್ಥಗಳ ಮಾರಾಟ ಹೆಚ್ಚಾಗಿದೆ. ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಮನ್ಮುಲ್ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದೆ ಕಂಡರೂ ಕಾಣದಂತಿದ್ದಾರೆ ಎಂದು ಆರೋಪಿಸಿದರು.ತಾಲೂಕಿನಲ್ಲಿ ತಲೆಎತ್ತಿರುವ ಕ್ಲಬ್ ಗಳಿಗೆ ಕಡಿವಾಣ ಹಾಕಬೇಕು. ರಸ್ತೆ ಬದಿಯಲ್ಲಿ ಪೆಟ್ಟಿಗೆ ಅಂಗಡಿಗಳ ತೆರವಿಗೆ ಅವಕಾಶ ನೀಡದಂತೆ ಶಾಸಕ ಎಚ್.ಟಿ.ಮಂಜು ರವರು ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರವೇ ತಾಲೂಕು ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್,ಪುರಸಭಾ ಮಾಜಿ ಸದಸ್ಯ ಹನುಮಂತರಾಜು, ಕರವೇ ನಗರ ಅಧ್ಯಕ್ಷ ಮದನ್ ಕಸಬಾ ಅಧ್ಯಕ್ಷ ಅನಿಲ್ ಸ್ವಾಮಿಗೌಡ, ಆನಂದ ಸೇರಿದಂತೆ ಹಲವರಿದ್ದರು.ಪ್ರತಿಭಟನೆಗೆ ಮಣಿದು ಪೆಟ್ಟಿಗೆ ಅಂಗಡಿ ತೆರವು
ಕೆ.ಆರ್.ಪೇಟೆ:ಕರವೇ ಕಾರ್ಯಕರ್ತರು, ರೈತ ಮುಖಂಡರ ಪ್ರತಿಭಟನೆಗೆ ಮಣಿದ ತಾಲೂಕು ಆಡಳಿತ ಜೆಸಿಬಿ ಕಾರ್ಯಾಚರಣೆ ನಡೆಸಿ ಪೆಟ್ಟಿಗೆ ಅಂಗಡಿಯನ್ನು ತೆರವುಗೊಳಿಸಿ ಕಚೇರಿ ಮುಂದಿನ ರಸ್ತೆಯನ್ನು ಸಾರ್ವಜರ್ನಿಕರಿಗೆ ಮುಕ್ತಗೊಳಿಸಿತು.
ಕಳೆದ ಕೆಲ ದಿನಗಳ ಹಿಂದೆ ಅನಾಮಿಕರು ತಾಲೂಕು ಕಚೇರಿಗೆ ರೈತರು ತಮ್ಮ ವಾಹನಗಳ ಮೂಲಕ ಪ್ರವೇಶಿಸುವ ಪ್ರವೇಶ ದ್ವಾರದಲ್ಲಿಯೇ ಕಬ್ಬಿಣದ ಪೆಟ್ಟಿಗೆಯನ್ನು ಅಳವಡಿಸಿ ರೈತರ ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಸಾರ್ವಜನಿಕ ರಸ್ತೆಯಲ್ಲಿ ಅಕ್ರಮ ಪೆಟ್ಟಿಗೆ ಅಂಗಡಿ ಇಡಲು ಪುರಸಭೆ ಮತ್ತು ತಾಲೂಕು ಆಡಳಿತ ಪರೋಕ್ಷ ಸಹಕಾರ ನೀಡಿತ್ತು ಎನ್ನಲಾಗಿದೆ.ಪೆಟ್ಟಿಗೆ ಅಂಗಡಿಯಿಟ್ಟು ಜನ ಸಂಚಾರಕ್ಕೆ ಅಡ್ಡಿಪಡಿಸಿದ್ದರೂ ತಾಲೂಕು ಆಡಳಿತ ಯಾವುದೇ ಕ್ರಮ ವಹಿಸಿರಲಿಲ್ಲ. ಕರವೇ ಕಾರ್ಯರ್ತರು ಪೆಟ್ಟಿಗೆ ಅಂಗಡಿ ತೆರವಿಗೆ ಪ್ರತಿಭಟನೆ ಆರಂಭಿಸಿದ ಕೂಡಲೇ ಅಕ್ರಮ ಪೆಟ್ಟಿಗೆ ಅಂಗಡಿ ತೆರವಿಗೆ ಅಗತ್ಯ ಕ್ರಮವಹಿಸಿದ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಸ್ಥಳಕೆ ಜೆಸಿಬಿ ತರಿಸಿ ಕಾರ್ಯಾಚರಣೆ ನಡೆಸಿ ಅಂಗಡಿ ತೆರವುಗೊಳಿಸಿದರು.