ಶಿಕಾರಿಪುರ: ಅರಣ್ಯ ಇಲಾಖೆ ಅಧಿಕಾರಿಗಳು ಸುದೀರ್ಘ ಕಾಲದ ಸಾಗುವಳಿದಾರರನ್ನು ಬಲವಂತವಾಗಿ ತೆರವುಗೊಳಿಸುವುದನ್ನು ಖಂಡಿಸಿ ಪಟ್ಟಣದ ಅರಣ್ಯ ಇಲಾಖೆ ಕಚೇರಿಗೆ ಸಂಸದ ರಾಘವೇಂದ್ರ ನೇತೃತ್ವದಲ್ಲಿ ಸಾಗುವಳಿದಾರರು ಆಗಮಿಸಿ ಅರಣ್ಯಾಧಿಕಾರಿಗಳ ವಿರುದ್ಧ ಘೋಷಣೆ ಹಾಕಿ ಪ್ರತಿಭಟಿಸಿದ ಘಟನೆ ನಡೆದಿದೆ. ತಾಲೂಕಿನ ಎರೇಕೊಪ್ಪ, ಹರಿಹರಪುರ ಗ್ರಾಮದ ರೈತರಾದ ಕಲ್ಲೇಶಪ್ಪ, ಲಕ್ಷ್ಮಣ, ಗಿರೀಶಣ್ಣ ಎಂಬುವವರಿಗೆ ಸೇರಿದ ಒಂಬತ್ತು ಎಕರೆ ಬಗರ್ ಹುಕುಂ ಜಮೀನಿಗೆ ಅಂಬ್ಲಿಗೊಳ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಜೆಸಿಬಿ ಮುಖಾಂತರ ಟ್ರಂಚ್ ಹೊಡೆದು ತೆರವುಗೊಳಿಸಲು ಧಾವಿಸಿದಾಗ ಸಮೀಪದ ಹೋತನಕಟ್ಟೆ ಗ್ರಾಮದ ಮುಖಂಡ ಮಲ್ಲಿಕಾರ್ಜುನ್ ರೆಡ್ಡಿ, ಹನುಮಂತಪ್ಪ, ಮಧು, ನಿಸಾರ್, ದರ್ಶನ್ ಗೌಡ, ಕಿರಣ್ ಗೌಡ, ಭೋಜರಾಜು ಮತ್ತಿತರರು ಜಮೀನಿಗೆ ಭೇಟಿ ನೀಡಿ ಜೆಸಿಬಿಯನ್ನು ತಡೆದು ಪ್ರತಿಭಟಿಸಿದರು. ನಂತರ ಪಟ್ಟಣದ ವಲಯ ಅರಣ್ಯ ಅಧಿಕಾರಿಗಳ ಕಚೇರಿಗೆ ಸಂಸದ ರಾಘವೇಂದ್ರ ನೇತೃತ್ವದಲ್ಲಿ ನೂರಾರು ರೈತರು ಆಗಮಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಹಾಕಿ ಪ್ರತಿಭಟಿಸಿದರು.
ವಲಯ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ನಾಯಕ್ ಮಾತನಾಡಿ, ಸಮರ್ಪಕ ಮಾಹಿತಿ ಕೊರತೆಯಿಂದಾಗಿ ಈಗಾಗಲೇ ಜೆಸಿಬಿಯಿಂದ ತೆಗೆದಿರುವ ಗುಂಡಿಗಳನ್ನು ಮುಚ್ಚುವ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಡಾ.ಬಿ.ಡಿ.ಭೂಕಾಂತ್, ಟಿಎಪಿಸಿಎಂಎಸ್ ಸದಸ್ಯ ಪಿಳಿಪಿಳಿ ಗಿಡ್ಡಪ್ಪ, ಮಾಜಿ ಅಧ್ಯಕ್ಷ ರಾಘವೇಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕ ದೂದಿಹಳ್ಳಿ ಬಸವರಾಜ್, ಪುರಸಭಾ ಸದಸ್ಯ ರೇಣುಕಸ್ವಾಮಿ, ಸಾಧಿಕ್ ಪ್ರಶಾಂತ್, ಮಹೇಶ್ ಹುಲ್ಮಾರ್, ಮುಖಂಡ ಸಣ್ಣ ಹನುಮಂತಪ್ಪ ತೊಗರ್ಸಿ, ಚನ್ನವೀರಪ್ಪ, ಹದಡಿ ಮಂಜುನಾಥ್, ಈರಣ್ಣ, ವಿನಯ್ ಸೇಬು, ಪಾಪಯ್ಯ, ಭೋಜರಾಜ ಸಹಿತ ಸಾಗುವಳಿ ನಿರತ ರೈತರ ಕುಟುಂಬಸ್ಥರು ಹಾಜರಿದ್ದರು.
ಸಾಗುವಳಿದಾರರನ್ನು ತೆರವುಗೊಳಿಸಲು ಮುಂದಾದ ಅರಣ್ಯಾಧಿಕಾರಿಗಳ ವಿರುದ್ಧ ಶಿಕಾರಿಪುರ ಅರಣ್ಯ ಇಲಾಖೆ ಮುಂಬಾಗ ಸಂಸದ ರಾಘವೇಂದ್ರ ನೇತೃತ್ವದಲ್ಲಿ ಸಾಗುವಳಿದಾರ ರೈತರು ಪ್ರತಿಭಟಿಸಿ ಘೋಷಣೆ ಹಾಕಿದರು.