ಕನ್ನಡಪ್ರಭ ವಾರ್ತೆ ಯಾದಗಿರಿ
ಬಲದಂಡೆ ಹಾಗೂ ಎಡದಂತೆ ಕಾಲುವೆಗಳಿಗೆ 2027ರ ಜನವರಿ 31ರವರೆಗೆ ನೀರು ಹರಿಸುವಂತೆ ಆಗ್ರಹಿಸುತ್ತಿರುವ ರೈತರು, ಬುಧವಾರ ಹೋರಾಟದ ಕಿಚ್ಚನ್ನು ಹೆಚ್ಚಿಸಿದ್ದರು. ಬೀದರ್-ಬೆಂಗಳೂರು ಹಾಗೂ ಶಹಾಪುರ-ವಿಜಯಪುರ ರಾಜ್ಯ ಹೆದ್ದಾರಿಯನ್ನು ಸುಮಾರು ಗಂಟೆಗಳ ಕಾಲ ಸಂಪೂರ್ಣವಾಗಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಸುಮಾರು 60 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದ ಮೆಣಸಿನಕಾಯಿ ಹಾಗೂ 5 ಸಾವಿರ ಎಕರೆ ಶೇಂಗಾ, ಸಜ್ಜೆ, ಜೋಳ, ತೊಗರಿ ಸೇರಿದಂತೆ ಒಟ್ಟು 80 ಸಾವಿರ ಎಕರೆ ಪ್ರದೇಶದ ಬೆಳೆಗಳು ನೀರಿಲ್ಲದೆ ಕಣ್ಣಮುಂದೆಯೇ ಒಣಗುತ್ತಿವೆ. ಅನ್ನದಾತರು ಆತ್ಮಹತ್ಯೆಯ ಹಾದಿ ಹಿಡಿಯುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ತಕ್ಷಣ ಕಾಲುವೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.ಜಿಲ್ಲಾಧ್ಯಕ್ಷ ಶರಣು ಮಂದರವಾಡ ಮಾತನಾಡಿ, ನವೆಂಬರ್ 12 ರಂದು ನಡೆದ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯ ನಿರ್ಣಯವನ್ನು ತಕ್ಷಣವೇ ಪುನರ್ ಪರಿಶೀಲಿಸಿ, ೨೦೨೭ರ ಜನವರಿ 30 ರವರೆಗೆ ವಾರಬಂದಿ ಪದ್ಧತಿಯಂತೆ (೮ ದಿನ ಚಾಲು, ೮ ದಿನ ಬಂದ್) ಕಾಲುವೆಗಳಿಗೆ ನೀರು ಹರಿಸಿ ಬೆಳೆಗಳನ್ನು ರಕ್ಷಿಸಬೇಕು. ಇಲ್ಲದಿದ್ದರೆ ಈ ಹೋರಾಟವನ್ನು ಜಿಲ್ಲಾದ್ಯಂತ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾನವೀಯತೆ ಮೆರೆದ ರೈತರು: ಹೆದ್ದಾರಿ ತಡೆಯಿಂದಾಗಿ ವಿವಿಧ ಊರುಗಳಿಗೆ ತೆರಳಬೇಕಿದ್ದ ಅಪಾರ ಸಂಖ್ಯೆಯ ಪ್ರಯಾಣಿಕರು ಮತ್ತು ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲೇ ಪರದಾಡುವಂತಾಯಿತು. ಆದಾಗ್ಯೂ, ಪ್ರತಿಭಟನೆಯ ನಡುವೆಯೂ ಮಾನವೀಯತೆ ಮೆರೆದ ರೈತ ಮುಖಂಡರು ಹಾಗೂ ಪೊಲೀಸರು, ಪದವಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ, ಆಂಬುಲೆನ್ಸ್‌ಗಳಿಗೆ ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆಗೆ ತೆರಳುತ್ತಿದ್ದ ಸಾರ್ವಜನಿಕರಿಗೆ ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.