ಭಕ್ತಿಯ ಪರಾಕಾಷ್ಠೆ, ಭೀಮೆಯೊಡಲು ಮಲೀನ..!

KannadaprabhaNewsNetwork |  
Published : Nov 19, 2026, 01:15 AM IST
ಸವದತ್ತಿ ಯಲ್ಲಮ್ಮ ದೇವಿಯ ಮೈಮೇಲೆ ಹಾವು ಸುತ್ತಿಕೊಂಡಿದೆ, ದೇವಿಯ ಪಾದುಕೆಯನ್ನು ಹಾವು ನುಂಗಿದೆ ಎಂಬ ವದಂತಿ ಹಬ್ಬಿ, ನದಿಯಲ್ಲಿ ಸ್ನಾನ ಮಾಡಿ, ಹಳೆಯ ಪಾದುಕೆ ಬಿಚ್ಚಿ ಹೊಸ ಪಾದುಕೆ ಕಟ್ಟಿಕೊಳ್ಳಬೇಕು. ಹಳೆಯ ಬಟ್ಟೆ ಬಿಟ್ಟು ಹೊಸ ಬಟ್ಟೆ ಧರಿಸಬೇಕು ಎಂಬ ಮಾತನ್ನು ನಂಬಿ, ಮಂಗಳವಾರ ಒಂದೇ ದಿನ 3 ಸಾವಿರಕ್ಕೂ ಅಧಿಕ ಮಹಿಳೆಯರು ತಂಡೋಪತಂಡವಾಗಿ ಯಾದಗಿರಿ ಹೊರವಲಯದ ಭೀಮಾ ನದಿಯತ್ತ ದೌಡಾಯಿಸಿ, ಪೂಜೆಗೈದರು. | Kannada Prabha

ಸಾರಾಂಶ

ಸವದತ್ತಿ ಯಲ್ಲಮ್ಮ ದೇವಿಗೆ ಸರ್ಪದೋಷ ಸುತ್ತಿಕೊಂಡಿದೆ, ದೇವಿಯ ಪಾದುಕೆಯನ್ನು ಹಾವು ನುಂಗಿದೆ ಎಂಬ ಒಂದು ಸಾಮಾಜಿಕ ಜಾಲತಾಣದ ಸಂದೇಶವೋ ಅಥವಾ ಬಾಯಿಂದ ಬಾಯಿಗೆ ಹರಡಿದ ಮಾತೋ... ಯಾವುದೋ ಒಂದು ಕ್ಷಣದಲ್ಲಿ ಹುಟ್ಟಿದ ಗಾಳಿಸುದ್ದಿಯೊಂದು ಇಡೀ ಯಾದಗಿರಿ ಜಿಲ್ಲೆಯಲ್ಲಿ ಮಂಗಳವಾರ ಸಂಚಲನ ಮೂಡಿಸಿ, ಮೂರು ಸಾವಿರಕ್ಕೂ ಹೆಚ್ಚು ಮಹಿಳೆಯರನ್ನು ಭೀಮಾನದಿಯತ್ತ ಓಡಿಸಿತು. ಕೊನೆಗೆ ನದಿಯನ್ನೇ ಮಲಿನಗೊಳಿಸಿ, ನಗರಸಭೆ ಸಿಬ್ಬಂದಿ ಕೈಯಲ್ಲಿ ಪೊರಕೆ ಹಿಡಿಯುವಂತೆ ಮಾಡಿತ್ತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಸವದತ್ತಿ ಯಲ್ಲಮ್ಮ ದೇವಿಗೆ ಸರ್ಪದೋಷ ಸುತ್ತಿಕೊಂಡಿದೆ, ದೇವಿಯ ಪಾದುಕೆಯನ್ನು ಹಾವು ನುಂಗಿದೆ ಎಂಬ ಒಂದು ಸಾಮಾಜಿಕ ಜಾಲತಾಣದ ಸಂದೇಶವೋ ಅಥವಾ ಬಾಯಿಂದ ಬಾಯಿಗೆ ಹರಡಿದ ಮಾತೋ... ಯಾವುದೋ ಒಂದು ಕ್ಷಣದಲ್ಲಿ ಹುಟ್ಟಿದ ಗಾಳಿಸುದ್ದಿಯೊಂದು ಇಡೀ ಯಾದಗಿರಿ ಜಿಲ್ಲೆಯಲ್ಲಿ ಮಂಗಳವಾರ ಸಂಚಲನ ಮೂಡಿಸಿ, ಮೂರು ಸಾವಿರಕ್ಕೂ ಹೆಚ್ಚು ಮಹಿಳೆಯರನ್ನು ಭೀಮಾನದಿಯತ್ತ ಓಡಿಸಿತು. ಕೊನೆಗೆ ನದಿಯನ್ನೇ ಮಲಿನಗೊಳಿಸಿ, ನಗರಸಭೆ ಸಿಬ್ಬಂದಿ ಕೈಯಲ್ಲಿ ಪೊರಕೆ ಹಿಡಿಯುವಂತೆ ಮಾಡಿತ್ತು.

ಮಂಗಳವಾರ, ಸವದತ್ತಿ ಯಲ್ಲಮ್ಮ ದೇವಿಯ ಮೈಮೇಲೆ ಹಾವು ಸುತ್ತಿಕೊಂಡಿದೆ, ದೇವಿಯ ಪಾದುಕೆಯನ್ನು ಹಾವು ನುಂಗಿದೆ ಎಂಬ ಸುದ್ದಿ ಗ್ರಾಮೀಣ ಭಾಗದಲ್ಲಿ ವೇಗವಾಗಿ ಹರಡಿತ್ತು. ಯಲ್ಲಮ್ಮನ ಹೆಸರಿನಲ್ಲಿ ಪಾದುಕೆ ಕಟ್ಟಿಕೊಂಡಿರುವ ಭಕ್ತರಿಗೆ ಕೆಡುಕಾಗಲಿದೆ. ನದಿಯಲ್ಲಿ ಸ್ನಾನ ಮಾಡಿ, ಹಳೆಯ ಪಾದುಕೆ ಬಿಚ್ಚಿ ಹೊಸ ಪಾದುಕೆ ಕಟ್ಟಿಕೊಳ್ಳಬೇಕು. ಹಳೆಯ ಬಟ್ಟೆ ಬಿಟ್ಟು ಹೊಸ ಬಟ್ಟೆ ಧರಿಸಬೇಕು ಎಂಬ ವದಂತಿ ಮಿಂಚಿನಂತೆ ಹಬ್ಬಿದೆ. ಈ ಮಾತನ್ನು ನಂಬಿದ ಭಕ್ತರು, ಅದರಲ್ಲೂ ಮಹಿಳೆಯರು ತಂಡೋಪತಂಡವಾಗಿ ಯಾದಗಿರಿ ಹೊರವಲಯದ ಭೀಮಾ ನದಿಯತ್ತ ದೌಡಾಯಿಸಿ, ಮಂಗಳವಾರ ಒಂದೇ ದಿನ 3 ಸಾವಿರಕ್ಕೂ ಅಧಿಕ ಮಹಿಳೆಯರು ಜಮಾಯಿಸಿದ್ದರು.

ನದಿಯಲ್ಲಿ ಪುಣ್ಯಸ್ನಾನ ಮಾಡಿ, ಪೂಜೆ ಸಲ್ಲಿಸಿ, ಕೊರಳಲ್ಲಿದ್ದ ಹಳೆಯ ಪಾದುಕೆಗಳನ್ನು ನದಿಗೆ ವಿಸರ್ಜಿಸಿ, ಹೊಸ ಪಾದುಕೆಗಳನ್ನು ಧರಿಸುವ ಆಚರಣೆ ಅಲ್ಲಿ ನಡೆದಿದೆ. ಒಬ್ಬರಿಂದ ಮತ್ತೊಬ್ಬರಿಗೆ ಸುದ್ದಿ ಹರಡುತ್ತಿದ್ದಂತೆಯೇ, ಭಕ್ತರ ಸಂಖ್ಯೆ ತಾಸಿಗೊಮ್ಮೆ ಹೆಚ್ಚಾಗುತ್ತಲೇ ಹೋಯಿತು. ಭಕ್ತಿ ಇತ್ತು, ಆದರೆ ಭಯವೇ ಹೆಚ್ಚಾಗಿತ್ತು. "ಏನಾದ್ರೂ ಕೆಟ್ಟದ್ದು ಆಗುತ್ತೋ " ಎಂಬ ಆತಂಕದಲ್ಲಿ ಜನರು ಆಚರಣೆಯಲ್ಲಿ ತೊಡಗಿದ್ದರು.

ವದಂತಿಯ ಸುದ್ದಿ ದೃಶ್ಯ ಮಾಧ್ಯಮಗಳ, ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಲೇ, ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಮುಂದೆ ಬಂದು ಸ್ಪಷ್ಟನೆ ನೀಡಿದೆ. ಯಲ್ಲಮ್ಮ ದೇವಿಗೆ ಸರ್ಪದೋಷವಿದೆ ಎಂಬುದು ಸಂಪೂರ್ಣ ಸುಳ್ಳು. ಇಂತಹ ಯಾವುದೇ ಘಟನೆ ನಡೆದಿಲ್ಲ. ದೇವಸ್ಥಾನಕ್ಕೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ಬರುತ್ತಿದ್ದಾರೆ. ಭಕ್ತರು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಪ್ರಾಧಿಕಾರ ಮನವಿ ಮಾಡಿದ್ದಾರೆ. ದೇವಿಗೆ ಯಾವುದೇ ದೋಷವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವದಂತಿ ನಂಬಿ ನದಿಯನ್ನೇ ಮಲಿನಗೊಳಿಸಿದ ಭಕ್ತರು: ಈ ಮಾಹಿತಿ ಸುಳ್ಳು ಎಂದು ಗೊತ್ತಾಗುವ ಹೊತ್ತಿಗೆ ಆಗಬೇಕಾದ ಹಾನಿ ಆಗಿತ್ತು. ಭಕ್ತರು ನದಿಯಲ್ಲಿ ಸ್ನಾನ ಮಾಡಿ ಬಿಸಾಕಿದ ಹಳೆಯ ಬಟ್ಟೆ, ಪೂಜಾ ವಸ್ತುಗಳು, ಹೂವಿನ ಹಾರ, ಪ್ಲಾಸ್ಟಿಕ್ ಹಾಗೂ ಆಹಾರ ಪದಾರ್ಥಗಳಿಂದ ಭೀಮಾ ನದಿ ಒಡಲು ಮಲಿನಗೊಂಡಿತ್ತು. ವಿಪರ್ಯಾಸವೆಂದರೆ, ಭೀಮಾ ನದಿಯಿಂದಲೇ ಯಾದಗಿರಿ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ನಾವು ಪುಣ್ಯಕ್ಕಾಗಿ ಮಾಡಿದ ಆಚರಣೆಯೇ ನಮ್ಮ ಕುಡಿಯುವ ನೀರನ್ನು ಕಲುಷಿತಗೊಳಿಸಿತು.

ಭೀಮೆಯೊಡಲ ಮಲಿನಗೊಂಡ ಹಿನ್ನೆಲೆಯಲ್ಲಿ, ಯಾದಗಿರಿ ನಗರಸಭೆಯ ಪೌರಾಯುಕ್ತ ಉಮೇಶ್ ಚವ್ಹಾಣ ನೇತೃತ್ವದಲ್ಲಿ ಸಿಬ್ಬಂದಿ ನದಿ ದಡಕ್ಕೆ ಇಳಿದು ಸ್ವಚ್ಛತಾ ಕಾರ್ಯ ಆರಂಭಿಸಿತು. ನದಿಯಲ್ಲಿ ಬಿದ್ದಿದ್ದ ಬಟ್ಟೆ, ಪೂಜಾ ವಸ್ತು, ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಪೌರಾಯುಕ್ತ ಚವ್ಹಾಣ್‌ ಭೇಟಿ ನೀಡಿ, ನದಿಯಲ್ಲಿ ಸ್ನಾನ, ಪೂಜೆಗೆ ವಿರೋಧವಿಲ್ಲ. ಆದರೆ ಬಟ್ಟೆ, ಪ್ಲಾಸ್ಟಿಕ್, ಸಾಬೂನು, ಶಾಂಪು, ಹಾರವನ್ನು ನದಿಗೆ ಹಾಕಬೇಡಿ. ತ್ಯಾಜ್ಯವನ್ನು ನಗರಸಭೆಯ ಕಸದ ವಾಹನದಲ್ಲೇ ಹಾಕಿ. ನದಿ ನೀರನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ನಿಯಮ ಉಲ್ಲಂಘಿಸಿದರೆ ಪರಿಸರ ಇಲಾಖೆ ಮೂಲಕ ಕಾನೂನು ಕ್ರಮ

ಎಂದು ಎಚ್ಚರಿಕೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರಾಬಿ ಹೊಳೆಗೆ ಒಳಚರಂಡಿ ನೀರು: ಅಧಿಕಾರಿಗಳ ಪರಿಶೀಲನೆ
ಸಾಂಪ್ರದಾಯಿಕ ದಿರಿಸು ಸಂಸ್ಕೃತಿಯ ಪ್ರತಿಬಿಂಬ: ರಿತಿಕಾ ಕಿಣಿ