ನಾಳೆ ದೆಹಲಿ ಗಡಿ ಕನೂರಿಯಲ್ಲಿ ರೈತರ ರ್‍ಯಾಲಿ

KannadaprabhaNewsNetwork | Published : Feb 11, 2025 12:49 AM

ಸಾರಾಂಶ

ಕೇರಳ ರಾಜ್ಯದ ಮಾದರಿಯಲ್ಲಿ ಎಲ್ಲ ತರಕಾರಿಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿ, ಸರ್ಕಾರವೇ ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಖರೀದಿ ಮಾಡುವ ವ್ಯವಸ್ಥೆ ಜಾರಿಗೆ ಬರಲಿ. ಕರ್ನಾಟಕ ರಾಜ್ಯ ಸರ್ಕಾರ ಅದೇ ಕೆಲಸ ರಾಜ್ಯದಲ್ಲಿ ಮಾಡಲಿ ಈ ಬಗ್ಗೆ ಬಜೆಟ್ ಅಲ್ಲಿ ಘೋಷಣೆ ಮಾಡಲಿ. ಆಂಧ್ರದಲ್ಲಿ ಇಂತಹ ಪ್ರಸ್ತಾಪಕ್ಕೆ ಸರ್ಕಾರ ಅನುಮೋದಿಸಿತ್ತು. ಆದರೆ ಜಾರಿಯಾಗಿಲ್ಲ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದೇಶದ ರೈತರ ಹಿತಕ್ಕಾಗಿ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಗ್ಯಾರಂಟಿ ಕಾನೂನಿಗಾಗಿ ದೆಹಲಿ ಗಡಿ ಕನೂರಿಯಲ್ಲಿ ಹೋರಾಟ ನಡೆಸುತ್ತಿರುವ ರೈತ ನಾಯಕ ದಲೈವಾಲಾ ಉಪವಾಸ ಸತ್ಯಾಗ್ರಹ 77ನೇ ದಿನಕ್ಕೆ ಮುಂದುವರೆದಿದ್ದು, ಫೆ. 12 ರಂದು ಕನೂರಿಯಲ್ಲಿ ನಡೆಯಲಿರುವ ರೈತರ ಬೃಹತ್‌ ರ್‍ಯಾಲಿಯಲ್ಲಿ ಕರ್ನಾಟಕದಿಂದಲೂ ನೂರಾರು ರೈತರು ಭಾಗವಹಿಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನೂತನ ಜಿಲ್ಲಾ ಪಧಾಧಿಕಾರಿಗಳ ನೇಮಕ ಮಾಡಿದ ನಂತರ ಮಾತನಾಡಿ, ರಾಜ್ಯದಲ್ಲಿ ಹೈನುಗಾರ ರೈತರ ಹಾಲಿನ ಪ್ರೋತ್ಸಾಹಧನ ಲೀ.ಗೆ ಐದು ರುಪಾಯಿಗಳನ್ನು ಕಳೆದ 8 ತಿಂಗಳಿಂದ ಬಿಡುಗಡೆ ಮಾಡಿಲ್ಲ. ಸುಮಾರು 1,000 ಕೋಟಿ ರು.ಗಳನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಲಿ. ಮುಂದಿನ ಬಜೆಟ್ ನಲ್ಲಿ ಪ್ರೋತ್ಸಾಹಧನವನ್ನು ಲೀಟರ್ ಗೆ 10 ರು.ಗಳಿಗೆ ಏರಿಕೆ ಮಾಡುವಂತೆ ಒತ್ತಾಯಿಸಿದರು.

ತರಕಾರಿಗೆ ಬೆಂಬಲ ಬೆಲೆ ನೀಡಲಿ

ಕೇರಳ ರಾಜ್ಯದ ಮಾದರಿಯಲ್ಲಿ ಎಲ್ಲ ತರಕಾರಿಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿ, ಸರ್ಕಾರವೇ ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಖರೀದಿ ಮಾಡುವ ವ್ಯವಸ್ಥೆ ಜಾರಿಗೆ ಬರಲಿ. ಆಂಧ್ರಪ್ರದೇಶದಲ್ಲಿ ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾಯಿದೆ ಮಸೂದೆ ಅನುಮೋದನೆ ನೀಡಲಾಗಿತ್ತು. ಆದರೆ ಸರ್ಕಾರ ಬದಲಾದ ಪರಿಸ್ಥಿತಿಯಲ್ಲಿ ಜಾರಿ ಮಾಡಲಿಲ್ಲ. ಕರ್ನಾಟಕ ರಾಜ್ಯ ಸರ್ಕಾರ ಅದೇ ಕೆಲಸ ರಾಜ್ಯದಲ್ಲಿ ಮಾಡಲಿ ಈ ಬಗ್ಗೆ ಬಜೆಟ್ ಅಲ್ಲಿ ಘೋಷಣೆ ಮಾಡಲಿ ಎಂದರು.

ಜಿಲ್ಲಾಧ್ಯಕ್ಷರಾಗಿ ಶ್ರೀನಿವಾಸಲು ನೇಮಕಬಗರಹುಕುಂ ಸಾಗುವಳಿ ಪತ್ರ ವಿತರಣೆಗೆ ನಿಯಮಾವಳಿ ಬದಲಾಯಿಸಬೇಕು ಎಂದು ಸಭೆಯಲ್ಲಿದ್ದ ವರು ಒತ್ತಾಯಿಸಿದರು. ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಜಿಲ್ಲಾ ರೈತ ಸಂಘದ ಅಧ್ಯಕ್ಷರಾಗಿ ಶ್ರೀನಿವಾಸಲು, ಗೌರವದ್ಯಕ್ಷರಾಗಿ ಟಿ.ಆರ್. ಕೃಷ್ಣಪ್ಪ, ಪ್ರಧಾನಕಾರ್ಯದರ್ಶಿಯಾಗಿ ಕೆ.ಭೈರಾರೆಡ್ಡಿಯವರನ್ನು ನೇಮಕ ಮಾಡಲಾಯಿತು.

ಸಭೆಯಲ್ಲಿ ರೈತ ಮುಖಂಡರುಗಳಾದ ಪ್ರಭಾವತಮ್ಮ. ಚಂದ್ರಮೋಹನ್, ಜಿ.ವಿ.ರಾಜಣ್ಣ, ಎನ್.ಪುಟ್ಟರಂಗಯ್ಯ, ಅಶ್ವಥ್ ನಾರಾಯಣಗೌಡ, ಪಿ.ವಿ. ಕೃಷ್ಣ, ಹಿತ್ತಲಹಳ್ಳಿ ದೇವರಾಜ್,ಮತ್ತಿತರ ರೈತರು ಸಭೆಯಲ್ಲಿದ್ದರು.

Share this article