ಕೆರೆಗಳನ್ನು ತುಂಬಿಸಲು ರೈತರು ಸಹಕರಿಸಬೇಕು-ಶಾಸಕ ಶಿವಣ್ಣನವರ

KannadaprabhaNewsNetwork |  
Published : Aug 18, 2026, 02:30 AM IST
ಬ್ಯಾಡಗಿ ತಹಸೀಲ್ದಾರ್ ಕಚೇರಿಯಲ್ಲಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿದರು. | Kannada Prabha

ಸಾರಾಂಶ

ಆಣೂರು ಬುಡಪನಹಳ್ಳಿ ಏತ ನೀರಾವರಿ ಯೋಜನೆ ಸಾಕಾರಗೊಳ್ಳಬೇಕಾದರೆ ನಿಮ್ಮ ಸಹಕಾರಬೇಕು. ರೈತರು ಸ್ವಾರ್ಥ ಬಿಟ್ಟು ಮುಂದಿನ ಕೆರೆಗಳನ್ನು ತುಂಬಿಸಲು ಸಹಕರಿಸಬೇಕು, ಇಲ್ಲದಿದ್ದರೇ ಕಾನೂನು ಕ್ರಮ ಅನಿವಾರ್ಯ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಬ್ಯಾಡಗಿ: ಆಣೂರು ಬುಡಪನಹಳ್ಳಿ ಏತ ನೀರಾವರಿ ಯೋಜನೆ ಸಾಕಾರಗೊಳ್ಳಬೇಕಾದರೆ ನಿಮ್ಮ ಸಹಕಾರಬೇಕು. ರೈತರು ಸ್ವಾರ್ಥ ಬಿಟ್ಟು ಮುಂದಿನ ಕೆರೆಗಳನ್ನು ತುಂಬಿಸಲು ಸಹಕರಿಸಬೇಕು, ಇಲ್ಲದಿದ್ದರೇ ಕಾನೂನು ಕ್ರಮ ಅನಿವಾರ್ಯ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಇತ್ತೀಚೆಗೆ ಕೆಲ ಗ್ರಾಮಗಳ ರೈತರು ಮುಂದಿನ ಕೆರೆಗಳಿಗೆ ನೀರು ಹೋಗದಂತೆ ನೀರಾವರಿ ಇಲಾಖೆ ಪೈಪಲೈನ್ ವಾಲ್ ಗಳನ್ನು ಸ್ಥಗಿತಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಅಧಿಕಾರಿಗಳ ಹಾಗೂ ರೈತ ಮುಖಂಡರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ನೀರು ಎಲ್ಲರ ಸ್ವತ್ತು: ಏತ ನೀರಾವರಿ ಹರಿದು ಬರುವ ನೀರು ಯಾರೊಬ್ಬರ ಸ್ವತ್ತಲ್ಲ, ಯೋಜನೆಯಡಿ ಸಂಬಂಧಿಸಿದ 32 ಕೆರೆಗಳ ಪಾತ್ರದ ಜನರ ಸ್ವತ್ತಾಗಿದೆ, ಇದಕ್ಕಾಗಿಯೇ ಕೆರೆಗಳನ್ನು ತುಂಬುವಂತೆ ಸಮಗ್ರ ಯೋಜನೆ ರೂಪಿಸಲಾಗಿದೆ. ಹೀಗಿರುವಾಗ ನೀರು ಮುಂದಕ್ಕೆ ಹರಿಯದಂತೆ ತಡೆಯುವ ಅಧಿಕಾರ ಯಾರಿಗೂ ಇಲ್ಲ ಹೊರತು, ಒಂದೇ ಊರಿನ ಕೆರೆ ತುಂಬಿಸುವ ಉದ್ದೇಶದಿಂದಲ್ಲ, ತಮ್ಮೂರಿನ ಕೆರೆಗಳಷ್ಟೇ ತುಂಬಬೇಕೆನ್ನವುದು ಸ್ವಾರ್ಥದ ಪರಮಾವಧಿ. ತಡೆದು ನಿಲ್ಲಿಸಲು ಮುಂದಾಗುವುದು ನ್ಯಾಯಸಮ್ಮತವಲ್ಲ ಎಂದರು.

ಅಧಿಕಾರಿಗಳೇ ಹೊಣೆ: ನೀರಿನ ಹರಿವಿಗೆ ಅಡ್ಡಿಪಡಿಸುವಂತಹ ಘಟನೆ ನಡೆದಾಗ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಳ್ಳಬಾರದು, ಎಲ್ಲಾ ಗ್ರಾಮಗಳ ಕೆರೆಗಳಿಗೂ ಸಮಾನವಾಗಿ ತಲುಪುವಂತೆ ಸಮರ್ಪಕ ವ್ಯವಸ್ಥೆ ಮಾಡಬೇಕು, ತಮ್ಮ ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳು ನಡೆದರೆ ಸಂಬಂಧಪಟ್ಟ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳೇ ನೇರ ಹೊಣೆ, ಸಾರ್ವಜನಿಕ ಆಸ್ತಿಯಾಗಿರುವ ನೀರನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಯಾವುದೇ ಕಾರಣಕ್ಕೂ ಅವಕಾಶ ನೀಡದಂತೆ ಕ್ರಮವಹಿಸಲು ಖಡಕ್ ಸೂಚನೆ ನೀಡಿದರು.

ಹೋರಾಟ ಮಾಡಿದವರಿಗೇ ನೀರಿಲ್ಲ:ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಆಣೂರು ಹಾಗೂ ಬುಡಪನಹಳ್ಳಿ ಕೆರೆ ತುಂಬಿಸುವ ಯೋಜನೆ ಜಾರಿಗೊಳ್ಳಲು ಬಹುತೇಕ ಗ್ರಾಮಗಳ ರೈತರು ಕೈಜೋಡಿಸಿದ್ದಾರೆ, ಹಲವು ವರ್ಷ ಹೋರಾಟದ ಫಲದಿಂದ ಯೋಜನೆ ಜಾರಿಗೆ ಬಂದಿದೆ. ಇದರಿಂದ ಆಣೂರು ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಆದರೆ ಯೋಜನೆ ಜಾರಿಗೆ ಬಂದ ಬಳಿಕ ಆಣೂರು, ಕೊಲ್ಲಾಪುರ, ಶಿಡೇನೂರು, ಕೆರೂಡಿ ಸೇರಿದಂತೆ ಕೆಲ ಪ್ರದೇಶಗಳ ಕೆಲವರು ನೀರು ತಡೆ ಹಿಡಿಯುತ್ತಿರುವುದು ಸಮಸ್ಯೆ ಉದ್ಭವವಾಗಿದೆ, ಇದರಿಂದ ಹೋರಾಟ ಮಾಡಿ ಯೋಜನೆ ತಂದವರಿಗೆ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ನೋವಿನ ಸಂಗತಿ ಎಂದರು.

ಮುಖ್ಯ ವಾಲ್ ಸ್ಥಗಿತಗೊಳಿಸಿ: ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ನೀರಿನ ಹರಿವಿಗೆ ಅಡ್ಡಿಪಡಿಸುವ ಧೋರಣೆ ಕೂಡಲೇ ಕೈಬಿಡಬೇಕು, ಇಲ್ಲವಾದಲ್ಲಿ ಆಣೂರಿಗೆ ನೀರು ಬರುವ ಮುಖ್ಯವಾಲ್ ಸ್ಥಗಿತಗೊಳಿಸಲು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಭೆಯಲ್ಲಿ ಟಿಈಓ ಕೆ.ಎಂ.ಮಲ್ಲಿಕಾರ್ಜುನ, ತಹಸೀಲ್ದಾರ್‌ ಚಂದ್ರಶೇಖರ ನಾಯಕ್ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳು, ಗ್ರಾಮಲೆಕ್ಕಾಧಿಕಾರಿಗಳು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್‌ಎಲ್‌ಸಿ–ಎಚ್‌ಎಲ್‌ಸಿ ಕಾಲುವೆಗಳಿಗೆ ಜಂಟಿ ನೀರು ಹರಿಸಲು ಆಗ್ರಹ
ಪೊಲೀಸ್‌ ಸರ್ಪಗಾವಲಿನಲ್ಲಿ ಬಸವರಾಜ ರೆಡ್ಡಿ ಅಂತ್ಯಸಂಸ್ಕಾರ