ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮ ಆಯೋಜನೆಯ ಅಂತರ್ ಇಲಾಖಾ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿ, ಜಿಲ್ಲೆಯಲ್ಲಿ 2022ರಲ್ಲಿ 192, 2023ರಲ್ಲಿ 812 ಜನರು ಹಾಗೂ ಪ್ರಸಕ್ತ ವರ್ಷದ ಸೆ.16ರವರೆಗೆ 87 ಜನರು ಹಾವು ಕಡಿತಕ್ಕೆ ಒಳಗಾಗಿದ್ದಾರೆ. ಹೀಗಾಗಿ ರೈತರು ತಮ್ಮ ಜಮೀನುಗಳಲ್ಲಿ ಕೆಲಸ ಮಾಡುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಒಡಾಡುವಾಗ ಶೂಗಳನ್ನು ಧರಿಸುವಂತದ್ದು, ಕೋಲು ಬಳಕೆ ಮೂಲಕ ಶಬ್ದ ಮಾಡಿಕೊಂಡು ನಡೆಯುವಂತದ್ದು ಸೇರಿ ಇನ್ನಿತರ ಮುಂಜಾಗ್ರತಾ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಇಷ್ಟೆಲ್ಲ ಕ್ರಮಗಳ ಮಧ್ಯಯೂ ಹಾವು ಕಡಿತಕ್ಕೆ ಒಳಪಟ್ಟರೆ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಔಷಧೋಪಚಾರ ಮಾಡಿಸಿಕೊಳ್ಳಬೇಕು. ಈ ಚಿಕಿತ್ಸೆಗೆ ಚುಚ್ಚು ಮದ್ದು ಹಾಗೂ ಆರೋಗ್ಯ ಸೇವೆಯು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಔಷಧದ ದಾಸ್ತಾನು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸದಾಕಾಲ ಲಭ್ಯವಿರುತ್ತದೆ. ನಾಟಿ ಔಷಧಿ ಬಳಸುವುದು ಹಾಗೂ ಸ್ವ ಚಿಕಿತ್ಸೆ ಮಾಡಿಕೊಳ್ಳುವುದನ್ನು ಬಿಟ್ಟು ಆರೋಗ್ಯ ಇಲಾಖೆಯ ಮಾರ್ಗಸೂಚಿ ಕ್ರಮಗಳನ್ನು ಪಾಲಿಸುವುದರಿಂದ ಪ್ರಾಣಾಪಾಯದಿಂದ ಪಾರಾಗಬಹುದು ಎಂದು ಅವರು ತಿಳಿಸಿದರು.
ರೇಬಿಸ್ ಗೆ ಚುಚ್ಚುಮದ್ದು ಕಡ್ಡಾಯ:ರೇಬಿಸ್ ಕಾಯಿಲೆಯು ಮಾರಾಣಾಂತಿಕ ಕಾಯಿಲೆಯಾಗಿದ್ದು, ನಾಯಿ ಕಡಿತಕ್ಕೆ ಒಳಗಾದ ಕೂಡಲೇ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಚುಚ್ಚುಮದ್ದು ಪಡೆಯುವುದು ಕಡ್ಡಾಯವಾಗಿರುತ್ತದೆ. ಅಲ್ಲದೇ ವೈದ್ಯರು ಸೂಚಿಸಿದ ಪ್ರಕಾರವೇ ಆರೋಗ್ಯ ಚಿಕಿತ್ಸೆ ಪಡೆಯುವುದು ಅತಿ ಮುಖ್ಯವಾಗುತ್ತದೆ. ಒಮ್ಮೆ ರೇಬಿಸ್ ಕಾಯಿಲೆ ಬಂದರೆ ಗುಣಪಡಿಸಲು ಸಾಧ್ಯವಿಲ್ಲ. ಇದನ್ನು ಅರಿತು ಯಾವುದೇ ವ್ಯಕ್ತಿಗಳು ನಾಯಿ ಕಡಿತಕ್ಕೆ ಒಳಗಾದರೆ ಕೂಡಲೇ ಆರೋಗ್ಯ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ 2024ರಲ್ಲಿ ಈವರೆಗೆ 3 ತಾಯಿ ಸಾವು ಪ್ರಕರಣಗಳು ವರದಿಯಾಗಿವೆ. ಯಾವುದೇ ಕಾರಣಕ್ಕೂ ವೈದ್ಯಕೀಯ ಆರೋಗ್ಯ ಸೇವೆಗಳ ಕೊರತೆ ಹಾಗೂ ನಿರ್ಲಕ್ಷ್ಯತೆಯಿಂದ ಇಂತಹ ಪ್ರಕರಣಗಳು ಜರುಗಬಾರದು. ಹೈ ರಿಸ್ಕ್ ಪ್ರಕರಣಗಳಲ್ಲಿ ಹೆಚ್ಚಿನ ನಿಗಾವಹಿಸಿ ಆರೋಗ್ಯ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್ ಮಹೇಶ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕೃಷ್ಣ ಪ್ರಸಾದ್, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಸಂತೋಷ್ ಬಾಬು, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಉಮಾ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಕಾಶ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ಶಿವಕುಮಾರ್, ಡಾ ರವಿ ಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.