ರೈತರು ಸಾವಯವ ಕೃಷಿಗೆ ಪ್ರಥಮ ಆದ್ಯತೆ ನೀಡಿ: ಡಾ.ರವೀಂದ್ರ ಬೆಳ್ಳಿ

KannadaprabhaNewsNetwork |  
Published : Jan 16, 2025, 12:48 AM IST
ಕೃಷಿ ಇಲಾಖೆ, ಜಮಖಂಡಿ ಮತ್ತು ಶ್ರೀ ಅಡವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಸಮಿತಿ, ಮರೇಗುದ್ದಿ ಇವರ ಸಹಯೋಗದಲ್ಲಿ ಆತ್ಮ ಯೋಜನೆಯಡಿ ನಡೆದ “ಸಾವಯವ ಕೃಷಿ ಪದ್ಧತಿಗಳ ಕುರಿತು” ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮದ ದೃಶ್ಯ. | Kannada Prabha

ಸಾರಾಂಶ

ಪ್ರಸ್ತುತ ಕೃಷಿಯಲ್ಲಿ ರೈತರು ಹೆಚ್ಚಿನ ಇಳುವರಿ ಪಡೆಯುವ ನಿಟ್ಟಿನಲ್ಲಿ ಶಿಫಾರಸ್ಸಿಗಿಂತ ಹೆಚ್ಚು ರಾಸಾಯನಿಕಗಳ ಬಳಕೆ ಮಾಡುತ್ತಿರುವುದರಿಂದ ಭೂಮಿಯು ಫಲವತ್ತತೆ ಕಳೆದುಕೊಳ್ಳುತ್ತಿದೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ರೈತರು ತಮ್ಮ ಜಮೀನಿನಲ್ಲಿ ಸಿಗುವ ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಸುಸ್ಥಿರ ಇಳುವರಿ ಪಡೆದುಕೊಳ್ಳುವಂತಾಗಬೇಕು. ಎರೆಹುಳು, ಜೈವಿಕ ಹಾಗೂ ಹಸಿರೆಲೆ ಗೊಬ್ಬರಗಳ ಬಳಕೆ ಹೆಚ್ಚಾಗಿ, ಸಾವಯವ ಕೃಷಿ ರೈತರ ಪ್ರಥಮ ಆದ್ಯತೆಯಾಗಬೇಕೆಂದು ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ತಿಳಿಸಿದರು.

ಕೃಷಿ ಇಲಾಖೆ, ಜಮಖಂಡಿ ಮತ್ತು ಶ್ರೀ ಅಡವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಸಮಿತಿ, ಮರೇಗುದ್ದಿ ಸಹಯೋಗದಲ್ಲಿ ಆತ್ಮ ಯೋಜನೆಯಡಿ ನಡೆದ ಸಾವಯವ ಕೃಷಿ ಪದ್ಧತಿಗಳ ಕುರಿತ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಕೃಷಿಯಲ್ಲಿ ರೈತರು ಹೆಚ್ಚಿನ ಇಳುವರಿ ಪಡೆಯುವ ನಿಟ್ಟಿನಲ್ಲಿ ಶಿಫಾರಸ್ಸಿಗಿಂತ ಹೆಚ್ಚು ರಾಸಾಯನಿಕಗಳ ಬಳಕೆ ಮಾಡುತ್ತಿರುವುದರಿಂದ ಭೂಮಿಯು ಫಲವತ್ತತೆ ಕಳೆದುಕೊಳ್ಳುತ್ತಿದೆ. ಮನುಷ್ಯನ ಆರೋಗ್ಯದ ಮೇಲೂ ಸಹ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ಬಹಳಷ್ಟು ರೈತರು ವಿವಿಧ ರೋಗಗಳಿಗೆ ತುತ್ತಾಗಿ ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಎಲ್ಲ ರೈತಬಾಂಧವರು ಶಿಫಾರಸ್ಸಿನಂತೆ ರಾಸಾಯನಿಕಗಳ ಬಳಸಿ, ಸಾವಯವ ಕೃಷಿ ಪ್ರಥಮ ಆದ್ಯತೆಯಾಗಬೇಕೆಂದರು.

ನಿಪ್ಪಾಣಿ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಸಂಜಯ ಪಾಟೀಲ, ಕಬ್ಬು ನಾಟಿ ಮಾಡುವ ಮುನ್ನ ವಿವಿಧ ಪ್ರದೇಶಗಳಿಗೆ ಸೂಕ್ತವಾಗುವ ತಳಿಗಳ ಬಗ್ಗೆ ಮಾಹಿತಿ ನೀಡಿದರು. ನಾಟಿ ಮಾಡುವ 8-9ತಿಂಗಳುಳ್ಳ ಕಬ್ಬನ್ನು ಆಯ್ಕೆ ಮಾಡಿ ತುಂಡು ಬೀಜೋಪಚಾರ ಮಾಡಿ ನಾಟಿ ಮಾಡಬೇಕೆಂದರು.

ಮಹಾಲಿಂಗಪೂರದ ರೋಹಿಣಿ ಸಂಸ್ಥೆ ಸಂಸ್ಥಾಪಕ ಡಾ.ಮಲ್ಲಪ್ಪಕಟ್ಟಿ ಮಾತನಾಡಿ, ಆಧ್ಯಾತ್ಮಿಕವಾಗಿ ಕೃಷಿ ಕೈಗೊಳ್ಳುವ ಅವಶ್ಯಕತೆ ಇದೆ. ಮಣ್ಣಿನ ಗುಣಧರ್ಮ ಅರಿತು, ಪೋಷಕಾಂಶಗಳ ಅವಶ್ಯಕತೆಗೆ ತಕ್ಕಂತೆ ರಸಗೊಬ್ಬರಗಳ ಬಳಕೆ ಮಾಡುವುದು. ಹೆಚ್ಚು ಇಳುವರಿ ಪಡೆಯಲು ಉತ್ತಮವಾಗಿ ಭೂಮಿ ತಯಾರಿಸುವುದು. ಹಸಿರೆಲೆಗೊಬ್ಬರಗಳನ್ನು ಬೆಳೆದ ನಂತರಕಬ್ಬು ನಾಟಿ ಮಾಡುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ ಎಂದರು.

ಗೋಕಾಕ ತಾಲೂಕಿನ ಕಲ್ಲೊಳ್ಳಿ ಗ್ರಾಮದ ಸಾವಯವ ಕೃಷಿಕ, ಕೃಷಿ ಪಂಡಿತರಾದ ರಮೇಶ ಖನಗೌಡರ, ಸಾವಯವ ಕೃಷಿಕರು ದೇಸಿ ತಳಿಗಳಾದ ಕಾಂಕ್ರೇಜ್, ಗಿರ್, ಖಿಲಾರಿ ಸಾಹಿವಾರ್ ಆಕಳುಗಳ ಸಾಕಾಣಿಕೆ ಮಾಡಬೇಕು. ಗೋ ಉತ್ಪನ್ನಗಳ ತಯಾರಿಕೆ, ಸಾವಯವ ಉತ್ಪನ್ನಗಳ ಉತ್ಪಾದನೆ ಮೌಲ್ಯ ವರ್ಧನೆಗೆ ಹೆಚ್ಚು ಒತ್ತುಕೊಡಬೇಕು. ನಮ್ಮ ತೋಟದಲ್ಲಿ ಎರೆಹುಳುಗೊಬ್ಬರ ತಯಾರಿಸಿಕೊಂಡು, ಹೈನುಗಾರಿಕೆ, ಬಾತುಕೋಳಿ, ಪಾರಿವಾಳ ಮತ್ತು ಮೊಲ ಸಾಕಾಣಿಕೆ ಮಾಡುತ್ತಿದ್ದು, ಕೃಷಿಯೊಂದಿಗೆ ವಿವಿಧ ಹಣ್ಣು ಹಂಪಲು ಬೆಳೆದುಕೊಂಡು ಉತ್ತಮ ಕೃಷಿ ಕೈಗೊಳ್ಳುತ್ತಿದ್ದೇನೆಂದರು.

ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿದ ಗುರುಪಾದ ಮಹಾಸ್ವಾಮೀಜಿ ಮಾತನಾಡಿ, ರೈತರು ಮೊದಲು ಸಾವಯವ ಕೃಷಿ ಕುರಿತು ತಿಳಿದುಕೊಂಡು ಎರೆಹುಳುಗೊಬ್ಬರ ಘಟಕ, ಜೀವಸಾರಘಟಕ, ಗೋಕೃಪಾಮೃತಂ, ಜೀವಾಮೃತ, ಬೀಜಾಮೃತ ಘಟಕಗಳನ್ನು ಅಳವಡಿಸಿಕೊಳ್ಳಬೇಕು. ದೇಸಿ ಹಸುಗಳ ಸಾಕಾಣಿಕೆಯಿಂದ ಸಿಗುವ ಗಂಜಲು ಮತ್ತು ಸಗಣಿ ಉಪಯೋಗಿಸಿ ಬೇಸಾಯ ವೆಚ್ಚ ಕಡಿಮೆ ಮಾಡಿ ಆರೋಗ್ಯಯುತ ಆಹಾರ ಮತ್ತು ಸುಸ್ಥಿರ ಆದಾಯ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಯಾರು ಎಷ್ಟೇ ಶ್ರೀಮಂತನಾದರೂ ಸಹ ಪ್ರತಿನಿತ್ಯ ರೈತರನ್ನು ನೆನೆಸಿಕೊಂಡು ಉಣ್ಣಬೇಕು. ತೋಟದಲ್ಲಿ ಸಿಗುವ ಕಸಕಡ್ಡಿ, ಬೆಳೆಗಳ ತ್ಯಾಜ್ಯ ಬಳಸಿಕೊಂಡು ಉತ್ಕೃಷ್ಟ ಗೊಬ್ಬರ ತಯಾರಿಸಿಕೊಳಬೇಕು. ವಿಷಕಾರಿ ರಾಸಾಯನಿಕ ತ್ಯಜಿಸಿ ಸಾವಯವ ಕೃಷಿಯ ಕಡೆಗೆ ಹೆಚ್ಚಿನ ಒಲವು ನೀಡವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಮಟ್ಟ ಆತ್ಮ ಯೋಜನೆಯಡಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ರೈತ ಪರಗೌಡ ಶೇಗುಣಸಿ, ಗಿರೀಶ ದಾನಗೊಂಡ, ಡಾ.ಭರತ ಶೇಗುಣಸಿ, ವಾಸುದೇವ ಶಿಂಧೆ, ಶ್ರೀಮತಿ ರಾಜೇಶ್ವರಿ ಕೋಟ್ಯಾಗೋಳ, ಈಶ್ವರ ಕರಬಸನವರ ಹಾಗೂ ಮುತ್ತು ಕೋಟಿಮನಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕೃಷಿ ಅಧಿಕಾರಿ ಶಂಕರ ಪವಾರ, ರಾಜಕುಮಾರ ಕುಂಚನೂರ, ಎಂ.ಎಸ್.ಬುಜರುಖ್ ಇದ್ದರು. ಕೃಷಿ ಪಂಡಿತ ಬಸಪ್ಪ ಗಿರಗಾಂವಿ, ಸದಾಶಿವ ಬಂಗಿ, ಪ್ರಗತಿಪರ ರೈತ ಶಿವನಗೌಡ ಪಾಟೀಲ, ರಾಜು ಪಾಟೀಲ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ನಜೀರ ಜಮಖಂಡಿ, ಪ್ರವೀಣ ಕೊಪ್ಪದ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು, ರೈತ ಮಹಿಳೆಯರು ಭಾಗವಹಿಸಿ ಮಾಹಿತಿ ಪಡೆದರು.

ಪ್ರಗತಿಪರ ರೈತರಾದ ಸಂಗನಗೌಡ ಪಾಟೀಲ ನಿರೂಪಿಸಿ, ಆತ್ಮ ಯೋಜನೆ ತಾಲೂಕು ತಾಂತ್ರಿಕ ವಸ್ಥಾಪಕ ಕೆ.ಎ. ಜಮಖಂಡಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿವ್‌-ಇನ್‌ ಸಂಬಂಧಕ್ಕೆ ಜನಿಸಿದ ಮಗುವಿಗೆ ತಾಯಿ ಸರ್‌ನೇಮ್‌!
ಪಿಎಂ ಹೇಳ್ತಿರೋ ಆರೆಂಜ್‌ ಆರ್ಥಿಕತೆ ರಾಜ್ಯದಲ್ಲಿ 2016ಲ್ಲೇ ನೀತಿ ಜಾರಿ: ಡಿಕೆ