ಸಂಕ್ರಾಂತಿ ವೇಳೆ ಪುಂಡರ ಪಟಾಕಿ ಚೆಲ್ಲಾಟ: ಜನರ ಪ್ರಾಣಸಂಕಟ

KannadaprabhaNewsNetwork |  
Published : Jan 16, 2025, 12:48 AM IST
೧೫ಕೆಎಂಎನ್‌ಡಿ-೧ಮಂಡ್ಯದ ಸ್ವರ್ಣಸಂದ್ರದಲ್ಲಿ ಸಂಕ್ರಾಂತಿ ಕಿಚ್ಚನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿರುವುದು. | Kannada Prabha

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಸ್ವರ್ಣಸಂದ್ರದಲ್ಲಿ ಹಿಂದೆ ಇದ್ದ ಹಿರಿಯ ಮುಖಂಡರು ಈಗಿಲ್ಲ. ಹಾಲಿ ಇರುವವರಿಗೆ ಕಿಚ್ಚನ್ನು ಸರಿಯಾದ ಕ್ರಮದಲ್ಲಿ ಮುನ್ನಡೆಸುವ ಆಸಕ್ತಿ ಇಲ್ಲ. ಒಮ್ಮೆ ಆಸಕ್ತಿ ಇದ್ದರೂ ಅವರ ಮಾತನ್ನು ಕೇಳುವವರು ಯಾರೂ ಇಲ್ಲ. ಹೀಗಾಗಿ ಪುಂಡು ಹುಡುಗರ ಆರ್ಭಟ, ಅತಿರೇಕ ಎಲ್ಲೆ ಮೀರಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಮಂಡ್ಯ

ಸಂಕ್ರಾಂತಿ ವೇಳೆ ಜಾನುವಾರುಗಳ ಕಿಚ್ಚು ಹಾಯಿಸುವ ಸಂಸ್ಕೃತಿ ಇತ್ತೀಚಿನ ದಿನಗಳಲ್ಲಿ ಪುಂಡು ಹುಡುಗರು, ಪಡ್ಡೆ ಹೈಕಳ ಪ್ರತಿಷ್ಠೆಯ ಮೆರೆದಾಟವಾಗಿ ಪರಿವರ್ತನೆಗೊಂಡಿದೆ. ಬೀಡಾಡಿ ದನಗಳನ್ನು ಹಿಡಿದು ತಂದು ಅವುಗಳನ್ನು ಹಿಂಸಿಸುವುದು. ಕಿಚ್ಚು ಹಾಯಿಸುವುದಕ್ಕೆ ಒಂದು ಗಂಟೆ ಮುಂಚಿತವಾಗಿ ಪಟಾಕಿಗಳ ಮೊರೆತ, ಅಪಾಯದ ಅರಿವಿಲ್ಲದೆ ಸಾವಿರಾರು ಜನರ ನಡುವೆ ಸರಣಿಯಾಗಿ ಪಟಾಕಿ ಸಿಡಿಸುವುದು. ಹತ್ತಾರು ದನಗಳನ್ನು ಹಿಡಿದು ತಂದು ಪಡ್ಡೆ ಹುಡುಗರು ಕೊಡುವ ಭಯಂಕರ ಬಿಲ್ಡಪ್ ಜನರನ್ನು ಹೈರಾಣಾಗುವಂತೆ ಮಾಡಿದೆ.

ಇವು ನಗರದ ಸ್ವರ್ಣಸಂದ್ರದಲ್ಲಿ ಮಂಗಳವಾರ ನಡೆದ ಕಿಚ್ಚು ಹಾಯಿಸುವುದಕ್ಕೂ ಮುನ್ನ ಕಂಡುಬಂದ ದೃಶ್ಯಗಳು.

ಸ್ವರ್ಣಸಂದ್ರದಲ್ಲಿ ಹಲವು ದಶಕಗಳಿಂದ ಸಂಕ್ರಾಂತಿ ಕಿಚ್ಚನ್ನು ನಡೆಸಿಕೊಂಡು ಬರಲಾಗುತ್ತಿದೆ. ಹಿಂದೆಲ್ಲಾ ನಿಗದಿತ ಸಮಯದೊಳಗೆ ಕಿಚ್ಚು ಹಾಯಿಸುವ ಪ್ರಕ್ರಿಯೆ ಮುಗಿಯುತ್ತಿತ್ತು. ಆಗೆಲ್ಲಾ ಬಡಾವಣೆಯ ಹಿರಿಯ ಮುಖಂಡರೇ ಮುಂದೆ ನಿಂತು ಕಿಚ್ಚು ಹಾಯಿಸುವ ಪ್ರಕ್ರಿಯೆ ನಡೆಸುತ್ತಿದ್ದರು.

ಪಡ್ಡೆ ಹುಡುಗರ ಅತಿರೇಕದಾಟ:

ಪ್ರಸ್ತುತ ದಿನಗಳಲ್ಲಿ ಸ್ವರ್ಣಸಂದ್ರದಲ್ಲಿ ಹಿಂದೆ ಇದ್ದ ಹಿರಿಯ ಮುಖಂಡರು ಈಗಿಲ್ಲ. ಹಾಲಿ ಇರುವವರಿಗೆ ಕಿಚ್ಚನ್ನು ಸರಿಯಾದ ಕ್ರಮದಲ್ಲಿ ಮುನ್ನಡೆಸುವ ಆಸಕ್ತಿ ಇಲ್ಲ. ಒಮ್ಮೆ ಆಸಕ್ತಿ ಇದ್ದರೂ ಅವರ ಮಾತನ್ನು ಕೇಳುವವರು ಯಾರೂ ಇಲ್ಲ. ಹೀಗಾಗಿ ಪುಂಡು ಹುಡುಗರ ಆರ್ಭಟ, ಅತಿರೇಕ ಎಲ್ಲೆ ಮೀರಿದೆ. ಹದಿನೈದರಿಂದ ಇಪ್ಪತ್ತು ರಾಸುಗಳು ಕಿಚ್ಚು ಹಾಯುವುದನ್ನು ನೋಡುವುದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವುದು. ಮಹಿಳೆಯರು, ಮಕ್ಕಳು, ವೃದ್ಧರು ಎಲ್ಲರೂ ಸ್ವರ್ಣಸಂದ್ರ ಬಡಾವಣೆಯ ಪ್ರವೇಶ ದ್ವಾರದ ಬಳಿ ಜಮಾಯಿಸುವುದು ಸಾಮಾನ್ಯವಾಗಿದ್ದರೂ ರಾಸುಗಳು ಕಿಚ್ಚು ಹಾಯುವ ಕ್ಷಣಗಳನ್ನು ಕಣ್ತುಂಬಿಕೊಳ್ಳುವುದಕ್ಕಿಂತ ಪಡ್ಡೆ ಹುಡುಗರ ಅತಿರೇಕದಾಟ ಜನರಲ್ಲಿ ಅಸಹನೆ ಮೂಡಿಸುವಂತೆ ಮಾಡಿದೆ.

ಅನಾಥ ಗೋವುಗಳನ್ನು ಹಿಡಿದು ಹಿಂಸೆ:

ಹಾಗೇ ನೋಡಿದರೆ ಸ್ವರ್ಣಸಂದ್ರ ಬಡಾವಣೆಯಲ್ಲಿರುವುದು ಕೇವಲ ಬೆರಳೆಣಿಕೆಯಷ್ಟು ಗೋವುಗಳು ಮಾತ್ರ. ಸಂಕ್ರಾಂತಿ ಕಿಚ್ಚು ಹಾಯಲು ಬರುವ ರಾಸುಗಳೆಲ್ಲವೂ ಅನಾಥ ಗೋವುಗಳೇ. ಬೀದಿ ಬೀದಿಯಲ್ಲಿ ಓಡಾಡುವ ದನಗಳನ್ನು ಹಿಡಿದು ತರುವ ಪುಂಡರು ಅವುಗಳಿಗೆ ಅಲಂಕಾರ ಮಾಡಿ ರಾಣಾ, ಡಿ-ಬಾಸ್, ಕಿಚ್ಚ ಎಂಬೆಲ್ಲಾ ಚಿತ್ರ-ವಿಚಿತ್ರ ಹೆಸರುಗಳನ್ನಿಟ್ಟು ಮೆರವಣಿಗೆಯಲ್ಲಿ ಕರೆತರುತ್ತಾರೆ. ಒಂದು ರಾಸನ್ನು ಏಳೆಂಟು ಜನ ಹಗ್ಗ ಹಿಡಿದುಕೊಂಡು ಮುನ್ನಡೆಯುತ್ತಾರೆ. ಗುತ್ತಲು ಕಡೆಯಿಂದ ಬರುವಾಗಲೇ ರಾಸುಗಳಿಗೆ ಪುಷ್ಪವೃಷ್ಟಿ ಮಾಡುತ್ತಾ, ಪಟಾಕಿ ಸಿಡಿಸುತ್ತಾ ಕಿಚ್ಚು ಹಾಯಿಸುವ ಸ್ಥಳಕ್ಕೆ ಕರೆತರುವರು.

ಈ ಹತ್ತಿಪ್ಪತ್ತು ದನಗಳನ್ನು ಕಿಚ್ಚು ಹಾಯಿಸುವ ಸಮಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಅಲ್ಲಿ ನೆರೆದಿದ್ದರು. ಜನರಿರುವ ಜಾಗದಲ್ಲೇ ಕಿವಿಗಡಚ್ಚಿಕ್ಕುವ ಪಟಾಕಿಗಳನ್ನು ಸರಣಿಯಾಗಿ ಸಿಡಿಸುತ್ತಾ ಮೂಕ ಪ್ರಾಣಿಗಳನ್ನು ಹಿಂಸಿಸುವುದಲ್ಲದೇ, ಕಿಚ್ಚನ್ನು ನೋಡಲು ಬರುವ ಜನರಿಗೆ ನರಕಯಾತನೆ ಉಂಟುಮಾಡುತ್ತಿದ್ದಾರೆ. ಸಾವಿರಾರು ಜನರಿರುವ ಕಡೆ ಅಪಾಯದ ಅರಿವಿಲ್ಲದೆ ನಿರಂತರವಾಗಿ ಪಟಾಕಿ ಸಿಡಿಸುತ್ತಿದ್ದರೂ ಅದನ್ನು ನಿಯಂತ್ರಿಸುವ ಧೈರ್ಯವಿಲ್ಲದೆ ಹಿರಿಯರು, ಕೆಲವು ಮುಖಂಡರು ಮೂಕ ಪ್ರೇಕ್ಷಕರಂತೆ ನಿಂತಿರುತ್ತಾರೆ.

ಪಟಾಕಿಗಳಿಂದ ಇಡೀ ವಾತಾವರಣ ಕಲುಷಿತ:

ಕಿಚ್ಚು ನೋಡುವುದಕ್ಕೆ ಮಕ್ಕಳನ್ನು ಕರೆತಂದ ತಾಯಂದಿರು ಸೆರಗು, ಕೈಯಿಂದ ಮಕ್ಕಳ ಮುಖವನ್ನು ಮುಚ್ಚಿಕೊಂಡು ಪಟಾಕಿಯಿಂದ ರಕ್ಷಿಸಿಕೊಳ್ಳುವುದಕ್ಕೆ ಹೆಣಗಾಡುತ್ತಿದ್ದರು. ಆದರೂ ಪಟಾಕಿಗಳ ಸುರಿಮಳೆಯಾಯಿತು. ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಪಟಾಕಿಗಳನ್ನು ಸಿಡಿಸಿ ಇಡೀ ವಾತಾವರಣವನ್ನು ಕಲುಷಿತಗೊಳಿಸಿದರೂ ಯಾರೂ ಕೂಡ ಪ್ರಶ್ನಿಸುವ ಗೋಜಿಗೆ ಹೋಗದಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ.

ಪಟಾಕಿಗಳ ಆರ್ಭಟದಿಂದ ಬೇಸತ್ತ ಹಲವಾರು ಮಂದಿ ಕಿಚ್ಚನ್ನು ನೋಡುವ ಆಸಕ್ತಿಯನ್ನೇ ಕಳೆದುಕೊಂಡು ಮನೆಗಳ ಕಡೆಗೆ ಮುಖ ಮಾಡಿದ್ದರು. ಪಟಾಕಿಗಳ ಸ್ಫೋಟದ ಶಬ್ಧಕ್ಕೆ ಮಕ್ಕಳು, ಮಹಿಳೆಯರು ಬೆದರಿಹೋದರು. ಶಬ್ಧಕ್ಕೆ ಹೆದರಿ ಆ ಸ್ಥಳದಿಂದ ಅನೇಕರು ಕಾಲ್ಕಿತ್ತರು. ಸಂಜೆ ೬.೩೦ಕ್ಕೆ ಶುರುವಾಗಬೇಕಿದ್ದ ಕಿಚ್ಚು ೭ ಗಂಟೆಗೆ ಆರಂಭಗೊಂಡಿತು. ಕಿಚ್ಚು ಹಾಯಿಸುವ ಪ್ರಕ್ರಿಯೆ ಕೇವಲ ಹತ್ತು ನಿಮಿಷದಲ್ಲಿ ಮುಕ್ತಾಯಗೊಂಡಿತು. ಅಷ್ಟಕ್ಕೇ ಇಷ್ಟೆಲ್ಲಾ ಬಿಲ್ಡಪ್, ಪಟಾಕಿಗಳ ಮೊರೆತ ಸೃಷ್ಟಿಸುವ ಅಗತ್ಯವಿತ್ತೇ ಎನ್ನುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

ಪುಂಡರು, ಪಡ್ಡೆ ಹುಡುಗರ ಅತಿರೇಕದಾಟಕ್ಕೆ ಸ್ವರ್ಣಸಂದ್ರ ಬಡಾವಣೆಯ ಸ್ಥಳೀಯ ನಿವಾಸಿಗಳು ತೀವ್ರ ಅಸಮಾಧಾನ, ಬೇಸರವನ್ನು ಹೊರಹಾಕಿದ್ದಾರೆ. ಪುಂಡು ಹುಡುಗರ ಅಟಾಟೋಪಗಳಿಗೆ ಜನರು ರೋಸಿಹೋಗಿದ್ದಾರೆ. ಆದರೆ, ಯಾರೊಬ್ಬರೂ ಪ್ರಶ್ನೆ ಮಾಡುವುದಿಲ್ಲ. ಮೌನದಿಂದಲೇ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಾರೆ. ಇದು ವರ್ಷದಿಂದ ವರ್ಷಕ್ಕೆ ಮಿತಿ ಮೀರುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಇದ್ದರೂ ಪ್ರಯೋಜನವಿಲ್ಲ..!

ಸ್ವರ್ಣಸಂದ್ರದಲ್ಲಿ ಸಂಕ್ರಾಂತಿ ಕಿಚ್ಚು ನಡೆಯುವ ಸಮಯದಲ್ಲಿ ಪೊಲೀಸರು ಸ್ಥಳದಲ್ಲಿದ್ದರೂ ಅವರನ್ನು ಪುಂಡರು ಲೆಕ್ಕಕ್ಕೇ ತೆಗೆದುಕೊಳ್ಳದೆ ಪಟಾಕಿ ಸಿಡಿಸುವುದರಲ್ಲೇ ನಿರತರಾಗಿದ್ದರು. ಬೆರಳೆಣಿಕೆಯಷ್ಟಿರುವ ಪೊಲೀಸರು ಯಾರನ್ನೂ ನಿಯಂತ್ರಿಸಲು ಸಾಧ್ಯವಾಗದೆ ಅಸಹಾಯಕರಾಗಿದ್ದರು. ಸ್ಥಳೀಯರಲ್ಲಿ ಕೆಲವರು ಪಟಾಕಿ ಸಿಡಿಸುವುದನ್ನು ನಿಲ್ಲಿಸಿ ಕಿಚ್ಚು ಹಾಯಿಸುವ ಪ್ರಕ್ರಿಯೆ ಮುಗಿಸುವಂತೆ ಪೊಲೀಸರಲ್ಲಿ ಕೇಳಿಕೊಂಡರು. ಆದರೂ ಪೊಲೀಸರು ತಲೆಯಾಡಿಸುತ್ತಾ ಮುಂದೆ ಸಾಗಿದರೇ ವಿನಃ ಸಂಕ್ರಾಂತಿ ಕಿಚ್ಚಿನ ಹೆಸರಿನಲ್ಲಿ ಪುಂಡರ ಪುಂಡಾಟಕ್ಕೆ ಬ್ರೇಕ್ ಹಾಕುವುದಕ್ಕೆ ಖಾಕಿಧಾರಿಗಳು ಮುಂದಾಗಲೇ ಇಲ್ಲ.

ಮುಂಜಾಗ್ರತೆ ಇಲ್ಲದೆ ಹೊಸಹಳ್ಳಿಯಲ್ಲಿ ಅನಾಹುತ

ಕಿಚ್ಚು ಹಾಯಿಸುವ ಸಮಯದಲ್ಲಿ ಯಾವುದೇ ಮುಂಜಾಗ್ರತೆ ವಹಿಸದ ಹಿನ್ನೆಲೆಯಲ್ಲಿ ಹೊಸಹಳ್ಳಿ ಬಡಾವಣೆಯಲ್ಲಿ ಗೂಳಿಯೊಂದು ಇಬ್ಬರಿಗೆ ಗುದ್ದಿ ಗಾಯಗೊಳಿಸಿದೆ. ಇಂತಹ ಅನಾಹುತಗಳು ಸಂಭವಿಸದಂತೆ ತಡೆಯಬೇಕಾದರೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತುರ್ತು ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ರಾಸುಗಳ ಕಿಚ್ಚು ಹಾಯಿಸುವ ದಿನ ಮನಸೋಇಚ್ಛೆ ಪಟಾಕಿ ಸಿಡಿಸುವುದಕ್ಕೆ ಕಡಿವಾಣ ಹಾಕಬೇಕಿದೆ. ಜಾನುವಾರುಗಳನ್ನು ಸಾಕಿರುವವರು ಮಾತ್ರ ಕಿಚ್ಚು ಹಾಯಿಸಲು ಅವಕಾಶ ನೀಡಬೇಕು. ಅನಾಥ ಮೂಕ ಪ್ರಾಣಿಗಳನ್ನು ಹಿಡಿಯುವುದು, ಅವುಗಳನ್ನು ಬೆದರಿಸಿ ಹಿಂಸಿಸುವುದಕ್ಕೆ ಕಡಿವಾಣ ಹಾಕಬೇಕಿದೆ. ಪುಂಡರು-ಪಡ್ಡೆ ಹುಡುಗರು ಅನಾಥ ಗೋವುಗಳನ್ನು ಹಿಡಿದು ಕಿಚ್ಚು ಹಾಯಿಸುವುದನ್ನು ನಿಷೇಧಿಸಬೇಕು. ನಿಗದಿತ ಸಮಯದೊಳಗೆ ಕಿಚ್ಚು ಹಾಯಿಸಿ ಮುಗಿಸುವುದರೊಂದಿಗೆ ಸಂಕ್ರಾಂತಿ ಕಿಚ್ಚು ಅರ್ಥ ಕಳೆದುಕೊಳ್ಳದಂತೆ ಎಲ್ಲರ ಮನಸ್ಸಿನಲ್ಲಿ ಉಳಿಯುವಂತೆ ಮಾಡಬೇಕಿದೆ.ಸ್ವರ್ಣಸಂದ್ರ ಬಡಾವಣೆಯಲ್ಲಿ ಎಲ್ಲೋ ಬೆರಳೆಣಿಕೆಯಷ್ಟು ಹಾಲು ಕೊಡುವ ಹಸುಗಳನ್ನು ಹಲವರು ಸಾಕಿಕೊಂಡಿದ್ದಾರೆ. ದಶಕಗಳ ಹಿಂದೆ ಇದ್ದಷ್ಟು ಸಂಖ್ಯೆಯಲ್ಲಿ ಜಾನುವಾರುಗಳಿಲ್ಲ. ಬೀಡಾಡಿ (ಅನಾಥ) ಗೋವುಗಳನ್ನು ಹಿಡಿದು ತರುವ ಪುಂಡು ಹುಡುಗರು ರಾಸುಗಳ ಕಿಚ್ಚು ಸಂಸ್ಕೃತಿಯನ್ನೇ ಹಾಳುಗೆಡವುತ್ತಿದ್ದಾರೆ.

- ರಾಮಕೃಷ್ಣ, ಸ್ಥಳೀಯರು

ಸಂಕ್ರಾಂತಿಯ ದಿನಕ್ಕಷ್ಟೇ ಗೋವುಗಳನ್ನು ಕರೆತರುವ ಪುಂಡು ಹುಡುಗರು ಅವುಗಳಿಗೆ ಒಂದು ಹಿಡಿ ಹುಲ್ಲನ್ನೂ ಹಾಕಿರುವುದಿಲ್ಲ. ಕಿಚ್ಚು ಮುಗಿದ ಬಳಿಕ ಅವುಗಳನ್ನು ಇನ್ನೊಂದು ವರ್ಷ ಕೇಳುವವರೇ ದಿಕ್ಕಿರುವುದಿಲ್ಲ. ಇದು ಸಂಕ್ರಾಂತಿ ಸಂಸ್ಕೃತಿಯೇ. ಜಾನುವಾರುಗಳ ರೋಗ ದೂರ ಮಾಡಲು ಆರಂಭಗೊಂಡ ಕಿಚ್ಚು ಸಂಸ್ಕೃತಿ ಪುಂಡರ ಪ್ರತಿಷ್ಠೆಯ ಮೆರೆದಾಟಕ್ಕೆ ಸೀಮಿತವಾಗಿದೆ.

- ಕೃಷ್ಣ, ಸ್ಥಳೀಯರು

ಕಿಚ್ಚಿನಲ್ಲಿ ಹಾಯ್ದ ದನಗಳ ಸಂಖ್ಯೆಯನ್ನು ಪರಿಗಣಿಸುವುದರಿಂದ ಹದಿನೈದರಿಂದ ಇಪ್ಪತ್ತು. ಕಿಚ್ಚಿನಲ್ಲಿ ಹಾಯುವ ರಾಸುಗಳಿಗಿಂತ ಜನರೇ ಅಧಿಕ ಸಂಖ್ಯೆಯಲ್ಲಿರುತ್ತಾರೆ. ಪಟಾಕಿಗೆ ಖರ್ಚು ಮಾಡುವ ಲಕ್ಷಾಂತರ ರು. ಹಣವನ್ನು ದನಗಳಿಗೆ ಉತ್ತಮ ಆಹಾರ ನೀಡುವುದಕ್ಕೆ ವಿನಿಯೋಗಿಸಿದರೆ ಸಂಕ್ರಾಂತಿ ಸಾರ್ಥಕತೆ ಪಡೆಯುವುದಿಲ್ಲವೇ?.

- ಶ್ವೇತಾ, ಸ್ಥಳೀಯರು

ಈ ರೀತಿಯ ಸಂಕ್ರಾಂತಿ ಕಿಚ್ಚಿನಿಂದ ಬಡಾವಣೆಗೆ ಒಳ್ಳೆಯ ಹೆಸರು ಬರುವುದಿಲ್ಲ. ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪಟಾಕಿಯನ್ನು ಸಿಡಿಸಲಾಯಿತು. ಮಹಿಳೆಯರು, ಮಕ್ಕಳು, ವಯೋವೃದ್ದರಿದ್ದಾರೆ ಎನ್ನುವುದನ್ನು ಲೆಕ್ಕಿಸದೆ ಪಟಾಕಿ ಮೊರೆತ ಹೆಚ್ಚಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.

- ಪಾಪಣ್ಣ, ಸ್ಥಳೀಯರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ