ಕನ್ನಡಪ್ರಭ ವಾರ್ತೆ ಮಧುಗಿರಿ
ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾನು ಈ ಹಿಂದೆ ಮಧುಗಿರಿಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸಿದ್ದು ಮಧುಗಿರಿ ತಾಲೂಕಿನ ಜನರ ನಾಡಿ ಮಿಡಿತ ಅರಿತಿದ್ದೇನೆ. ಇಲ್ಲಿ ಮತ್ತೆ ನನಗೆ ಡಿವೈಎಸ್‌ಪಿ ಆಗಿ ಕೆಲಸ ಮಾಡಲು ಅವಕಾಶ ದೊರೆತಿರುವುದು ಸಂತಸ ತಂದಿದೆ. ತಾಲೂಕಿನಲ್ಲಿ ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಉದ್ಧೇಶ, ಇದಕ್ಕೆ ಪೂರಕವಾಗಿ ನಾಗರಿಕರಿಂದ ಬಂದ ದೂರುಗಳನ್ನು ಆಲಿಸಿ ಅವರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಮಧುಗಿರಿಯಲ್ಲಿ ಟ್ರಾಫಿಕ್ ಸಮಸ್ಯೆ, ಬೈಪಾಸ್ ರಸ್ತೆಯಲ್ಲಿ ಪಡ್ಡೆ ಹುಡುಗರ ಬೈಕ್ ವೀಲಿಂಗ್, ಸರಗಳ್ಳತನ, ರಸ್ತೆ ಸುರಕ್ಷತಾ ಬಗ್ಗೆ ಹಾಗೂ ವಿದ್ಯಾರ್ಥಿನಿಯರನ್ನು ಪಡ್ಡೆ ಹುಡುಗರು ಚುಡಾಯಿಸುವುದರ ಬಗ್ಗೆ ಹಾಗೂ ಹಲವು ಇಲಾಖೆಗಳಿಂದ ಸಾರ್ವಜನಿಕರಿಗೆ ಆಗಬೇಕಾದ ಕೆಲಸಗಳ ವಿಳಂಬದ ಬಗ್ಗೆಯೂ ಕೇಳಿ ಬಂದಿದ್ದು ಈ ಎಲ್ಲ ಸಮಸ್ಯೆಗಳಿಗೆ ಸಹ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಹಿರಿಯ ಪತ್ರಕರ್ತ ಜಿ.ನಾರಾಯಣರಾಜು ಮಾತನಾಡಿ, ರಾಘವೇಂದ್ರ ಸ್ವಾಮಿ ದೇವಸ್ಥಾನದ ಸಮೀಪ ವಾಹನ ದಟ್ಟಣೆ ಜ್ಯಾಸ್ತಿಯಾಗಿದ್ದು, ಇಲ್ಲಿ ವಿದ್ಯಾರ್ಥಿಗಳು ಅತಿ ಹೆಚ್ಚು ಓಡಾಡುವ ಕಾರಣ ರಸ್ತೆ ನಿಯಮಾವಳಿಗಳ ಜಾರಿ ಮಾಡುವ ಬಗ್ಗೆ ಮತ್ತು ಆಯಾ ಕಟ್ಟಿನ ಪ್ರದೇಶಗಳಲ್ಲಿ ಸೂಕ್ತ ಸಿಸಿ ಕ್ಯಾಮರಾ ಅಳವಡಿಕೆ , ಶ್ರೀ ವೆಂಕಟರಮಣಸ್ವಾಮಿ ದೇಗುಲದ ರಸ್ತೆ ಹಾಗೂ ಕೆಎಸ್‌ಆರ್‌ಟಿಸಿ ನಿಲ್ದಾಣದ ಹಿಂಭಾಗ ವಿದ್ಯಾರ್ಥಿನಿಯರಿಗೆ ತೊಂದರೆ ಕೊಡುತ್ತಿರುವ ರೋಡ್ ರೋಮಿಯೋಗಳ ಬಗ್ಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹುಟ್ಟುಹಬ್ಬ ಆಚರಿಸುವುದನ್ನು ನಿಷೇಧಿಸಬೇಕು. ಇತಿಹಾಸ ಪ್ರಸಿದ್ಧ ದಂಡಿಮಾರಮ್ಮ ದೇಗುಲದ ಬಳಿ ವಾರದ ಎರಡು ದಿನ ಪೋಲಿಸರನ್ನು ನೇಮಿಸುವ ಬಗ್ಗೆ ವಿವರಿಸಿದರು.
ಮುಖಂಡ ಎಸ್‌ಬಿಟಿ ರಾಮು ಮಾತನಾಡಿ, ಇತ್ತಿಚೆಗೆ ನಡೆದ ಸರಗಳ್ಳತನದ ಬಗ್ಗೆ ಪೊಲೀಸರು ತೆಗೆದುಕೊಂಡ ಕ್ರಮದಿಂದಾಗಿ ವೃದ್ಧೆಗೆ ಚಿನ್ನದ ಸರ ವಾಪಸ್ ಆಗಿರುವ ಕುರಿತು ಪೋಲಿಸರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಗ್ರಾಮೀಣ ಭಾಗದಲ್ಲಿ ಮದ್ಯ ಮಾರಾಟ ನಿಯಂತ್ರಣ ಹಾಗೂ ಪ್ರಮುಖ ರಸ್ತೆಗಳಲ್ಲಿ ರಸ್ತೆ ಉಬ್ಬು ತಗ್ಗುಗಳನ್ನು ನಿರ್ಮಿಸುವ ಬಗ್ಗೆ ಗ್ರಾಮಾಂತರ ಪ್ರದೇಶಕ್ಕೆ ಸಕಾಲಕ್ಕೆ ಕೆಎಸ್‌ಆರ್ ಟಿಸಿ ಬಸ್ ಗಳನ್ನುಓಡಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡುವಂತೆ ತಿಳಿಸಿದರು. ಈ ಸಭೆಯಲ್ಲಿ ಸಿಪಿಐ ಹನುಮಂತರಾಯಪ್ಪ, ಪಿಎಸ್‌ಐ ವಿಜಯ್ ಕುಮಾರ್, ಮುತ್ತುರಾಜ್ ಮ್ತತು ಪೊಲೀಸ್ ಸಿಬ್ಬಂದಿ ಇದ್ದರು.