ಕನ್ನಡಪ್ರಭ ವಾರ್ತೆ ಹಲಗೂರು
ದೇವಿರಹಳ್ಳಿಯಲ್ಲಿ ವಿದ್ಯುತ್ ಕಂಬ ಏರಿ ಬಲ್ಬ್ ಅಳವಡಿಸಲು ಹೋಗುವ ಮುನ್ನ ಪಿಡಿಒ ಚೆಸ್ಕಾಂಗೆ ಮಾಹಿತಿ ನೀಡಿ ಸಂಪರ್ಕ ಕಡಿತಗೊಳಿಸಬೇಕಿತ್ತು. ಆದರೆ, ಗ್ರಾಪಂ ಪಿಡಿಒ ವಿಜಯ್ ಕುಮಾರ್ ಅವರ ಬೇಜವಾಬ್ದಾರಿಯಿಂದಾಗಿ ಕೆಂಚೇಗೌಡರ ಸಾವು ಸಂಭವಿಸಿದೆ. ಕೆಂಚೇಗೌಡ ಸಾವಿಗೆ ಪರೋಕ್ಷವಾಗಿ ಪಿಡಿಒ ವಿಜಯ್ ಕುಮಾರ್ ಕಾರಣ. ಅವರನ್ನು ತಕ್ಷಣ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಕೆಂಚೇಗೌಡರು ಮೃತಪಟ್ಟಿದ್ದು, ಕುಟುಂಬಕ್ಕೆ ಅತಂತ್ರ ಸ್ಥಿತಿ ಎದುರಾಗಿದೆ. ಕುಟುಂಬದ ಸದಸ್ಯರಿಗೆ ಪಂಚಾಯ್ತಿಯಲ್ಲಿ ತಾತ್ಕಾಲಿಕ ಉದ್ಯೋಗ ನೀಡಬೇಕು ಮತ್ತು ಗ್ರಾಪಂನಿಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.ಮಂಡ್ಯ ಜಿಪಂ ಕಾರ್ಯದರ್ಶಿ ಬಾಬು, ತಾಪಂ ಇಒ ಎಚ್.ಜಿ.ಶ್ರೀನಿವಾಸ್, ಗ್ರಾಪಂ ಅಧ್ಯಕ್ಷ ಶಿವಣ್ಣ ನೇತೃತ್ವದಲ್ಲಿ ಜಂಟಿ ಸಭೆ ನಡೆಸಿ ಕುಟುಂಬಕ್ಕೆ 3 ಲಕ್ಷ ರು. ಪರಿಹಾರ ನೀಡುವುದಾಗಿ ಒಪ್ಪಿಕೊಂಡರು. ತನಿಖೆಯ ವರದಿ ಬಂದ ನಂತರ ಪಿಡಿಒ ವಿಜಯ್ ಕುಮಾರ್ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಬೀದಿ ದೀಪ ಅಳವಡಿಸುವಾಗ ವಿದ್ಯುತ್ ಸ್ಪರ್ಶ: ವ್ಯಕ್ತಿ ಸಾವು
ಬೀದಿ ದೀಪ ಅಳವಡಿಸುವಾಗ ವಿದ್ಯುತ್ ಸ್ಪರ್ಶಿಸಿ ಕಂಬದಿಂದ ಬಿದ್ದು ತೀವ್ರ ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಸಮೀಪದ ದೇವಿರಹಳ್ಳಿಯಲ್ಲಿ ನಡೆದಿದೆ.ಹಲಗೂರು ಸಮೀಪದ ಕೆಂಪಯ್ಯನದೊಡ್ಡಿ ಗ್ರಾಮದ ಕೆಂಚೇಗೌಡ (62) ಮೃತ ವ್ಯಕ್ತಿ.
ದೇವಿರಹಳ್ಳಿಯಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆಗೆ ವಾಟರ್ ಮ್ಯಾನ್ ಬಸವಲಿಂಗೇಗೌಡರು ಕೆಂಚೇಗೌಡರಿಗೆ ಕರೆ ಮಾಡಿ ಬಲ್ಬ್ ಅಳವಡಿಸಲು ಕರೆದುಕೊಂಡು ಹೋಗಿದ್ದಾರೆ. ಗ್ರಾಮದ ಬೀದಿ ದೀಪ ಅಳವಡಿಸುವಾಗ ವಿದ್ಯುತ್ ಸ್ಪರ್ಶಿಸಿ ಅಯತಪ್ಪಿ ಕೆಳಗೆ ಬಿದ್ದಿದ್ದಾನೆ. ತೀವ್ರ ಗಾಯಗೊಂಡ ಕೆಂಚೇಗೌಡರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.