ಆರ್ಥಿಕ ಪ್ರಗತಿಗೆ ರೈತರು ವಾಣಿಜ್ಯ ಬೆಳೆ ಬೆಳೆಯಬೇಕು: ಕೆವಿಕೆ ಮುಖ್ಯಸ್ಥ ಡಾ.ಜಿ.ಎಸ್‌. ಯೋಗೇಶ್‌

KannadaprabhaNewsNetwork |  
Published : Oct 14, 2024, 01:16 AM IST
ಜಾಯಿಕಾಯಿ, ಬೆಣ್ಣೆ ಹಣ್ಣು, ಡ್ರ್ಯಾಗನ್ ಹಣ್ಣಿನ ಬೇಸಾಯ ಮಾಡಲು | Kannada Prabha

ಸಾರಾಂಶ

ರೈತರು ಅಧಿಕ ಲಾಭ ಗಳಿಸಲು ವಾಣಿಜ್ಯ ಬೆಳೆಗಳಾದ ಜಾಯಿಕಾಯಿ, ಬೆಣ್ಣೆ ಹಣ್ಣು ಮತ್ತು ಡ್ರ್ಯಾಗನ್ ಹಣ್ಣಿನ ಬೇಸಾಯವನ್ನು ಕೈಗೊಳ್ಳಲು ಮುಂದಾಗಬೇಕು ಎಂದು ಕೆವಿಕೆ ಮುಖ್ಯಸ್ಥ ಡಾ.ಜಿ.ಎಸ್‌.ಯೋಗೇಶ್‌ ಸಲಹೆ ನೀಡಿದರು. ಚಾಮರಾಜನಗರದಲ್ಲಿ ವಾಣಿಜ್ಯ ಅಂತರ ಬೆಳೆಗಳ ಬೇಸಾಯ ಕುರಿತಾದ ಬೆಳೆ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರೈತರು ಅಧಿಕ ಲಾಭ ಗಳಿಸಲು ವಾಣಿಜ್ಯ ಬೆಳೆಗಳಾದ ಜಾಯಿಕಾಯಿ, ಬೆಣ್ಣೆ ಹಣ್ಣು ಮತ್ತು ಡ್ರ್ಯಾಗನ್ ಹಣ್ಣಿನ ಬೇಸಾಯವನ್ನು ಕೈಗೊಳ್ಳಲು ಮುಂದಾಗಬೇಕು ಎಂದು ಕೆವಿಕೆ ಮುಖ್ಯಸ್ಥ ಡಾ.ಜಿ.ಎಸ್‌.ಯೋಗೇಶ್‌ ಸಲಹೆ ನೀಡಿದರು.

ಕೃಷಿ ವಿಜ್ಞಾನ ಕೇಂದ್ರಗಳ ಸುವರ್ಣ ಮಹೋತ್ಸವ ಮತ್ತು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನ ವಜ್ರ ಮಹೋತ್ಸವದ ಅಂಗವಾಗಿ ಹರದನಹಳ್ಳಿ ಫಾರಂ ಕೆವಿಕೆಯಲ್ಲಿ ತೆಂಗು ಮತ್ತು ಅಡಿಕೆ ತೋಟಗಳಲ್ಲಿ ಲಾಭದಾಯಕ ವಾಣಿಜ್ಯ ಅಂತರ ಬೆಳೆಗಳ ಬೇಸಾಯ ಕುರಿತಾದ ಬೆಳೆ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಪ್ರಸ್ತುತ ರೈತರು ತೆಂಗು ಹಾಗೂ ಅಡಿಕೆ ಬೆಳೆಗಳ ನಡುವೆ ರೈತರು ಅರಿಶಿನ ಬಿಟ್ಟು ಇನ್ನಾವುದೇ ವಾಣಿಜ್ಯ ಬೆಳೆಯನ್ನು ಬೆಳೆಯುತ್ತಿಲ್ಲದಿರುವ ಕಾರಣ ಆರ್ಥಿಕವಾಗಿ ಉನ್ನತೀಕರಣಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜಾಯಿಕಾಯಿ, ಬೆಣ್ಣೆ ಹಣ್ಣು, ಡ್ರ್ಯಾಗನ್ ಹಣ್ಣಿನ ವೈಜ್ಞಾನಿಕ ಬೇಸಾಯ ಕ್ರಮಗಳ ಬಗ್ಗೆ ಹಾಗೂ ಇವುಗಳ ಮಾರುಕಟ್ಟೆ ಕುರಿತಾದ ಮಾಹಿತಿಯನ್ನು ಒದಗಿಸಲಾಗುತ್ತಿದೆ, ಹೊಸ ಬೆಳೆಗಳ ಪರಿಚಯ ಮಾಡುವುದಕ್ಕಾಗಿ ಈ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಹಲವು ರೈತ ಬಾಂಧವರು ಕೃಷಿ ವಿಜ್ಞಾನ ಕೇಂದ್ರಕ್ಕೆ ಈ ಬೆಳೆಗಳ ವೈಜ್ಞಾನಿಕ ಬೇಸಾಯ ಮಾಹಿತಿ ನೀಡಬೇಕಾಗಿ ಮನವಿ ಮಾಡಿದ್ದರಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮಡಿಕೇರಿ ಜಿಲ್ಲೆಯ ಅಪ್ಪಂಗಳ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ಶಿವಕುಮಾರ್ ಎಂ.ಎಸ್. ಮಾತನಾಡಿ, ಜಾಯಿಕಾಯಿ ಬೆಳೆಯ ಪ್ರಾಮುಖ್ಯತೆ, ಮಹತ್ವ, ಸುಧಾರಿತ ತಳಿಗಳು, ಅವುಗಳ ಆಯ್ಕೆ, ವೈಜ್ಞಾನಿಕ ಬೇಸಾಯ ಕ್ರಮಗಳು, ನಿರ್ವಹಣೆ ಹಾಗೂ ಮಾರುಕಟ್ಟೆಯ ಬಗ್ಗೆ ಮಾಹಿತಿಯನ್ನು ಒದಗಿಸಿ, ಅದರ ಸಸ್ಯೋತ್ಪಾದನೆಯಲ್ಲಿ ಕಸಿ ಸಸಿಗಳು ಹಾಗೂ ಬೀಜದಿಂದ ಉತ್ಪಾದಿಸಿದ ಸಸಿಗಳ ವ್ಯತ್ಯಾಸ ಹಾಗೂ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು.

ಸಸ್ಯಗಳ ಆಯ್ಕೆಗೆ ಹೆಚ್ಚು ಒತ್ತು ನೀಡಬೇಕು. ಜಾಯಿಕಾಯಿಯ ತಿರುಳಿನಿಂದ ಆಗುವ ಅನುಕೂಲವನ್ನು ತಿಳಿಸಿ ಅದರ ಸಿಪ್ಪೆಯಿಂದ ತಯಾರಿಸಬಹುದಾದ ಮೌಲ್ಯವರ್ಧಿತ ಉತ್ಪನ್ನಗಳು ಮತ್ತು ಅದರ ಮಾರುಕಟ್ಟೆಯ ಬಗ್ಗೆ ವಿವರ ಒದಗಿಸಿದರು.

ಚೆಟ್ಟಳ್ಳಿಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ಮುರುಳೀಧರ್ ಮಾತನಾಡಿ, ಬೆಣ್ಣೆ ಹಣ್ಣಿನ ಸುಧಾರಿತ ತಳಿಗಳು, ಅಂತರ, ಅವುಗಳ ಬೇಸಾಯ ಕ್ರಮಗಳು ಹಾಗೂ ಮನುಷ್ಯರಲ್ಲಿ ಬೆಣ್ಣೆ ಹಣ್ಣಿನ ಸೇವನೆಯಿಂದ ಆಗುವ ಅನುಕೂಲಗಳು ಮತ್ತು ಬೆಣ್ಣೆ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಮಾಹಿತಿ ಒದಗಿಸಿದರು.

ಕೇಂದ್ರದ ವಿಜ್ಞಾನಿ ಡಾ.ಮೋಹನ್ ಕುಮಾರ್ ಎ.ಬಿ.ಲಾಭದಾಯಕ ವಾಣಿಜ್ಯ ಬೆಳೆಗಳ ಸಸ್ಯಗಳ ಲಭ್ಯತೆ ಮತ್ತು ಅವುಗಳ ಅಳವಡಿಕೆ ಕುರಿತು ಮಾಹಿತಿ ಒದಗಿಸಿದರು. ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಡಾ.ಬಿ.ಪಂಪನಗೌಡ ಜಾಯಿಕಾಯಿ, ಬೆಣ್ಣೆ ಹಣ್ಣು ಮತ್ತು ಡ್ರ್ಯಾಗನ್ ಹಣ್ಣು ಬೆಳೆಗಳ ಸಸ್ಯ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು. ಕೇಂದ್ರದ ಗೃಹ ವಿಜ್ಞಾನಿ ಡಾ.ದೀಪ ಹಣ್ಣುಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಬಗ್ಗೆ ತಿಳಿಸಿಕೊಟ್ಟರು. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಹಾಗೂ ನೆರೆಯ ಜಿಲ್ಲೆ ಮೈಸೂರಿನಿಂದ ೭೫ಕ್ಕೂ ಅಧಿಕ ರೈತರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದ ಪ್ರಯುಕ್ತ ಜಾಯಿಕಾಯಿ, ಬೆಣ್ಣೆ ಹಣ್ಣು ಮತ್ತು ಡ್ರ್ಯಾಗನ್ ಹಣ್ಣಿನ ವಿವಿಧ ತಳಿಯ ಸಸ್ಯಗಳು, ವಿವಿಧ ತಳಿಯ ಜಾಯಿಕಾಯಿ, ಬೆಣ್ಣೆ ಹಣ್ಣು ಮತ್ತು ಡ್ರ್ಯಾಗನ್ ಹಣ್ಣುಗಳನ್ನು ಪ್ರದರ್ಶಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!