ಸಂಸ್ಕೃತ ವಿಶ್ವ ವಿದ್ಯಾಲಯ ಲೋಕಾರ್ಪಣೆಗೆ ಸಜ್ಜು

KannadaprabhaNewsNetwork | Published : Oct 14, 2024 1:16 AM

ಸಾರಾಂಶ

ಕುದೂರು: ನೂರು ಎಕರೆ ಸುಂದರ ಪರಿಸರದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣಗೊಂಡಿದ್ದು, ಲೋಕಾರ್ಪಣೆಗೆ ದಿನಗಣನೆ ಶುರುವಾಗಿದೆ. 2022ರಲ್ಲಿ 25 ಕೋಟಿ ರು. ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಆರಂಭವಾಗಿ 2024ರಲ್ಲಿ ಸುಸಜ್ಜಿತ ಕಟ್ಟಡವಾಗಿ ಪೂರ್ಣಗೊಂಡಿದೆ.

ಕುದೂರು: ನೂರು ಎಕರೆ ಸುಂದರ ಪರಿಸರದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣಗೊಂಡಿದ್ದು, ಲೋಕಾರ್ಪಣೆಗೆ ದಿನಗಣನೆ ಶುರುವಾಗಿದೆ. 2022ರಲ್ಲಿ 25 ಕೋಟಿ ರು. ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಆರಂಭವಾಗಿ 2024ರಲ್ಲಿ ಸುಸಜ್ಜಿತ ಕಟ್ಟಡವಾಗಿ ಪೂರ್ಣಗೊಂಡಿದೆ.

ಸಂಸ್ಕೃತ ವಿಶ್ವ ವಿದ್ಯಾಲಯ ಮಾಗಡಿ ತಾಲೂಕು ತಿಪ್ಪಸಂದ್ರ ಹೋಬಳಿ ವ್ಯಾಪ್ತಿಯ ಮರಡಿಗುಡ್ಡೆ ಅರಣ್ಯ ಪ್ರದೇಶ ಬಿಸ್ಕೂರು, ತಿಪ್ಪಸಂದ್ರ ಮತ್ತು ನಾರಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಿಸ್ತರಿಸಿಕೊಂಡಿದೆ. ಅದರಲ್ಲಿ ತಿಪ್ಪಸಂದ್ರ ಹೋಬಳಿಯ ಒಂದು ಭಾಗದಲ್ಲಿ 201 ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೂರು ಎಕರೆ ಪ್ರದೇಶವನ್ನು ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಮಂಜೂರು ಮಾಡಿಕೊಡಲಾಗಿತ್ತು.

ಜಾಗ ಸಂಸ್ಕೃತ ವಿವಿದ್ದು, ಕಟ್ಟಡ ಮುಕ್ತ ವಿವಿದ್ದು:

ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ನೂರು ಎಕರೆ ಜಾಗ ಮಂಜೂರು ಮಾಡಿಕೊಟ್ಟ ನಂತರ ಅಲ್ಲಿ ಕಟ್ಟಡ ನಿರ್ಮಾಣವಾಗಲು ಸರ್ಕಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮೂಲಕ ೨೫ ಕೋಟಿ ರು.ಗಳನ್ನು ಅಂದಿನ ಉನ್ನತ ಶಿಕ್ಷಣ ಸಚಿವರಾಗಿದ್ದ ಅಶ್ವತ್ಥನಾರಾಯಣ ಮಂಜೂರು ಮಾಡಿಸಿದ್ದರು.

ಇದಕ್ಕೆ ಸಂಬಂಧಸಿದಂತೆ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ರಾಜ್ಯ ಮುಕ್ತ ವಿಶ್ವವಿದ್ಯಾಲಯದೊಂದಿಗೆ ಒಂದು ಒಪ್ಪಂದವಾಯಿತು. ಕಟ್ಟಡ ನಿರ್ಮಾಣವಾಗುವ ಜಾಗವನ್ನು ಸಂಸ್ಕೃತ ವಿಶ್ವವಿದ್ಯಾಲಯ ನೀಡಬೇಕು. ಅಲ್ಲಿ ನಿರ್ಮಾಣವಾಗುವ ಕಟ್ಟಡದ ವೆಚ್ಚವನ್ನು ರಾಜ್ಯ ಮುಕ್ತ ವಿಶ್ವವಿದ್ಯಾಲಯದವರು ವಹಿಸಿಕೊಳ್ಳುವುದು. ಈ ಒಪ್ಪಂದದ ಪ್ರಕಾರ ಆಡಳಿತ ಕಚೇರಿಯ ಒಂದು ಭಾಗದಲ್ಲಿ ಮುಕ್ತ ವಿಶ್ವವಿದ್ಯಾಲಯದ ರಾಮನಗರ ಶಾಖೆ ಈ ಕಟ್ಟಡದಲ್ಲಿ ಕಚೇರಿ ಆರಂಭಿಸುತ್ತದೆ.

ಮಹಿಳಾ ಮತ್ತು ಪುರುಷ ವಿದ್ಯಾರ್ಥಿನಿಲಯ:

15 ತರಗತಿ ಕೊಠಡಿಗಳನ್ನು ಒಳಗೊಂಡ ಈ ಕಟ್ಟಡಕ್ಕೆ ಹೊಂದಿಕೊಂಡಂತೆ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ. 150 ಮಹಿಳೆಯರು ಮತ್ತು 150 ಪುರುಷ ವಿದ್ಯಾರ್ಥಿಗಳು ವಸತಿ ಸೌಲಭ್ಯ ಪಡೆದು ವಿದ್ಯಾಭ್ಯಾಸ ಮಾಡಬಹುದಾಗಿದೆ. ರಾಜ್ಯದ 29 ಪದವಿ ಕಾಲೇಜುಗಳು ಇದರ ವ್ಯಾಪ್ತಿಗೆ ಬರುತ್ತವೆ. ಇದರೊಂದಿಗೆ 400ಕ್ಕೂ ಹೆಚ್ಚು ಪಾಠಶಾಲೆಗಳು ನಿರ್ದೇಶಕರ ವ್ಯಾಪ್ತಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಒಳಪಡುತ್ತವೆ.

50ಕ್ಕೂ ಹೆಚ್ಚು ವಿವಿಧ ವಿಷಯಗಳ ಶಿಕ್ಷಣ:

ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಭಾಷೆಯನ್ನೊಂದನ್ನೇ ಅಭ್ಯಾಸ ಮಾಡಿಸುತ್ತಾರೆ ಎಂಬುದಷ್ಟೇ ಅಲ್ಲ. ಇಲ್ಲಿನ ಪ್ರಾದೇಶಿಕ ಭಾಷೆಯ ಅಧ್ಯಯನದ ಪರಿಚಯದೊಂದಿಗೆ ಸಂಖ್ಯಾಶಾಸ್ತ್ರ, ಯೋಗಶಾಸ್ತ್ರ, ಭವಿಷ್ಯ, ತರ್ಕ, ಜ್ಯೋತಿಷ್ಯ, ಅಲಂಕಾರ, ವ್ಯಾಕರಣ, ದ್ವೈಶ, ಅದ್ವೈತ, ವಿಶಿಷ್ಟಾದ್ವೈತ, ಶಕ್ತಿ ವಿಶಿಷ್ಟಾದ್ವೈತ, ವೇದಶಾಸ್ತ್ರ ಹೀಗೆ ಹಲವಾರು ವಿಭಾಗಗಳಲ್ಲಿ ಶಿಕ್ಷಣ ನೀಡಲಾಗುತ್ತದೆ.

ವಿಶ್ವವಿದ್ಯಾಲಯದ ಮುಂಭಾಗದಿಂದ ಎರಡು ಕಿಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ-75 ಬೆಂಗಳೂರು ಹಾಸನ ಹೆದ್ದಾರಿ. ವಿಶ್ವವಿದ್ಯಾಲಯದ ಹಿಂಭಾಗದಲ್ಲಿ ಎರಡು ಕಿಮೀ ಕ್ರಮಿಸಿದರೆ ಭಾರತೀಯ ರೈಲ್ವೆ ನಿಲ್ದಾಣ ಸಿಗುತ್ತದೆ. ಈ ಎರಡೂ ಅನುಕೂಲಗಳನ್ನು ಒಳಗೊಂಡಿರುವ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಎಲ್ಲಾ ಲಕ್ಷಣಗಳನ್ನು ಕಂಡು ಬರುತ್ತಿದೆ ಎಂದು ರಾಜ್ಯ ಸಂಸ್ಕೃತ ಪಾಠಶಾಲೆಗಳ ಉಪಾಧ್ಯಕ್ಷ ಕಣನೂರು ರಾಜಣ್ಣ ಅಭಿಪ್ರಾಯ ಪಟ್ಟಿದ್ದಾರೆ.

ವಿಶ್ವವಿದ್ಯಾಲಯದ ಹತ್ತು ಎಕರೆ ಪ್ರದೇಶದಲ್ಲಿ ವಿವಿಧ ರೀತಿಯ ಔಷಧೀಯ ಗುಣಗಳನ್ನು ಒಳಗೊಂಡಿರುವ ಮತ್ತು ಪಕ್ಷಿಗಳು ಗೂಡು ಕಟ್ಟಲು ಅನುಕೂಲವಾಗಲೆಂದು ಬಿದಿರಿನ ನೂರಾರು ಗಿಡಗಳನ್ನು ಹಾಕಿ ಪೋಷಣೆ ಮಾಡಲಾಗುತ್ತಿದೆ.

ಕೋಟ್ ...............

ಸುಂದರ ಹಸಿರು ಪರಿಸರದಲ್ಲಿ ವಿಶ್ವವಿದ್ಯಾಲಯ ನಿರ್ಮಾಣಗೊಂಡಿದೆ. ಅದನ್ನು ಸರ್ಕಾರ ಯಾವಾಗ ನಮಗೆ ವರ್ಗಾವಣೆ ಮಾಡಿಕೊಡುತ್ತದೆಯೋ ಆ ಕೂಡಲೆ ಬೆಂಗಳೂರಿನ ಕಚೇರಿ ಮತ್ತು ವಿದ್ಯಾರ್ಥಿಗಳನ್ನು ಇಲ್ಲಿಗೆ ವರ್ಗಾಯಿಸಲಾಗುತ್ತದೆ. ಈ ಕೆಲಸಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.

- ಡಾ.ಎಸ್.ಅಹಲ್ಯ, ಉಪಕುಲಪತಿ, ಸಂಸ್ಕೃತ ವಿವಿ

ಕೋಟ್............

ಮಾಗಡಿ ತಾಲೂಕಿನಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಆಗಿರುವುದು ಸಂತೋಷದ ವಿಷಯ. ಚನ್ನಪಟ್ಟಣ ಉಪ ಚುನಾವಣೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಲೋಕಾರ್ಪಣೆ ಮಾಡಲಾಗುವುದು.

- ಎಚ್.ಸಿ.ಬಾಲಕೃಷ್ಣ, ಶಾಸಕ, ಮಾಗಡಿ ಕ್ಷೇತ್ರ

ಕೋಟ್ .............

ಆಗಿರುವ ಒಪ್ಪಂದದಂತೆ ರಾಜ್ಯ ಮುಕ್ತ ವಿವಿ ರಾಮನಗರ ಶಾಖೆ ಇನ್ನು ಮುಂದೆ ಸಂಸ್ಕೃತ ವಿಶ್ವವಿದ್ಯಾಲಯದ ಕಟ್ಟಡದಲ್ಲೆ ತೆರೆಯಲಾಗುತ್ತದೆ. ಇನ್ನು ಯಾವುದೇ ಪದವಿ, ಸ್ನಾತಕೋತ್ತರ ವಿಷಯಗಳ ಪರೀಕ್ಷೆ ತೆಗೆದುಕೊಳ್ಳಲು ಇದೇ ವಿಶ್ವವಿದ್ಯಾಲಯದ ಕಟ್ಟಡದಲ್ಲಿ ಕಚೇರಿ ಆರಂಭಿಸುತ್ತಿದ್ದೇವೆ.

-ಭಾಸ್ಕರ್, ಎಕ್ಸಿಕ್ಯುಟಿವ್ ಎಂಜಿನಿಯರ್, ರಾಜ್ಯ ಮುಕ್ತ ವಿವಿ

13ಕೆಆರ್ ಎಂಎನ್ 3,4.ಜೆಪಿಜಿ

3.ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯ ಮರಡಿಗುಡ್ಡೆ ಅರಣ್ಯದ ಸುಂದರ ಪರಿಸರದಲ್ಲಿ ನಿರ್ಮಾಣಗೊಂಡಿರುವ ಸಂಸ್ಕೃತ ವಿಶ್ವವಿದ್ಯಾಲಯ ಕಟ್ಟಡ.

4. ಸಂಸ್ಕೃತ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯ ಕಟ್ಟಡ.

Share this article