ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಲಿ: ಚೇತನಾ ಪಾಟೀಲ

KannadaprabhaNewsNetwork |  
Published : Apr 08, 2026, 03:30 AM IST
ಕಾರ್ಯಕ್ರಮದಲ್ಲಿ ಚೇತನಾ ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ, ರಸಗೊಬ್ಬರದ ದರ ಹಾಗೂ ದಾಸ್ತಾನನ್ನು ಸಾರ್ವಜನಿಕರಿಗೆ ಕಾಣುವ ಹಾಗೆ ಪ್ರದರ್ಶಿಸಬೇಕು.

ಗದಗ: ರೈತರು ರಸಗೊಬ್ಬರ ಖರೀದಿಸಲು ಇನ್ನು ಮುಂದೆ ಎಫ್‌ಐಡಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಅಲ್ಲದೇ, ತಮ್ಮ ಎಲ್ಲ ಜಮೀನುಗಳನ್ನು ಸಹ ಎಫ್‌ಐಡಿಗೆ ಕಡ್ಡಾಯವಾಗಿ ಜೋಡಿಸಿರಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದರು.

ನಗರದ ಕೃಷಿ ಸಂಶೋಧನಾ ಕೇಂದ್ರದಲ್ಲಿ ಮುಂಗಾರುಪೂರ್ವ ಕೃಷಿ ಪರಿಕರ ಮಾರಾಟಗಾರರ ಸಭೆ ಹಾಗೂ ಯೂರಿಯಾ ವಿತರಣಾ ತಂತ್ರಾಂಶದ ಕುರಿತು ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕುರಿತು ರಾಜ್ಯ ಸರ್ಕಾರದ ಕೃಷಿ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ರೈತನ ಹಿಡುವಳಿ ಹಾಗೂ ಬೆಳೆ ಆಧಾರದ ಮೇಲೆ ರಸಗೊಬ್ಬರವನ್ನು ಕೆ- ಕಿಸಾನ್ ತಂತ್ರಜ್ಞಾನ ಹಾಗೂ ಪಿಒಎಸ್ ಮಷಿನ್ ಮೂಲಕವೇ ವಿತರಣೆ ಮಾಡಲಾಗುವುದು. ಇದರಿಂದ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕಲು ಹಾಗೂ ರೈತರು ಅನವಶ್ಯಕವಾಗಿ ಹೆಚ್ಚುವರಿ ರಸಗೊಬ್ಬರ ಬಳಸದಂತೆ ನಿಯಂತ್ರಿಸಿ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಲು ಸಹಾಯವಾಗುತ್ತದೆ ಎಂದರು.ಪ್ರತಿಯೊಬ್ಬ ರಸಗೊಬ್ಬರ ವ್ಯಾಪಾರಸ್ಥರು ಒಬ್ಬ ಕೃಷಿ ವಿಜ್ಞಾನಿಯಂತೆ ರೈತರಿಗೆ ತಿಳಿವಳಿಕೆ ನೀಡಿ ದ್ರವರೂಪದ ರಸಗೊಬ್ಬರಗಳನ್ನು ಹಾಗೂ ಕಾಂಪ್ಲೆಕ್ಸ್ ರೂಪದ ರಸಗೊಬ್ಬರಗಳನ್ನು ಬಳಸಲು ಮನವರಿಕೆ ಮಾಡಿಕೊಡುವಂತೆ ಸೂಚಿಸಿದರು. ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ, ರಸಗೊಬ್ಬರದ ದರ ಹಾಗೂ ದಾಸ್ತಾನನ್ನು ಸಾರ್ವಜನಿಕರಿಗೆ ಕಾಣುವ ಹಾಗೆ ಪ್ರದರ್ಶಿಸುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. ತಪ್ಪಿದ್ದಲ್ಲಿ ಪರವಾನಗಿ ಅಮಾನತು ಅಥವಾ ರದ್ದು ಮಾಡುವ ಎಚ್ಚರಿಕೆ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರ ಪ್ರಸ್ತಾವಿಕವಾಗಿ ಮಾತನಾಡಿ, ಈ ಹಿಂದಿನ 2025ರ ಮುಂಗಾರು ಹಂಗಾಮಿನ ಅತಿವೃಷ್ಟಿ ಸಮಯದಲ್ಲಿ ರಸಗೊಬ್ಬರಗಳ ಅಧಿಕ ಬೇಡಿಕೆ ಎದುರಾದಾಗ ತಾಲೂಕಿನ ರಸಗೊಬ್ಬರ ವ್ಯಾಪಾರಸ್ಥರು ಇಲಾಖೆಯೊಂದಿಗೆ ಸಹಕರಿಸಿ ಪರಿಸ್ಥಿತಿ ನಿಭಾಯಿಸುವಲ್ಲಿ ಬಹಳ ಸಹಕಾರ ನೀಡಿದ್ದಾರೆ. ಪ್ರಸಕ್ತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳ ಪರಿಣಾಮವಾಗಿ ರಸಗೊಬ್ಬರ ತಯಾರಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಕೃಷಿ ಇಲಾಖೆಯು ಗೊಬ್ಬರ ತಯಾರಿಕಾ ಕಂಪನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ತಾಲೂಕಿನ ರೈತರಿಗೆ ಗೊಬ್ಬರ ಸಿಗುವಂತೆ ಪ್ರಯತ್ನಿಸುತ್ತಿದೆ. ತಾಲೂಕಿನ ರಸಗೊಬ್ಬರ ವ್ಯಾಪಾರಸ್ಥರು ಈ ಹಂಗಾಮಿನಲ್ಲಿಯೂ ತಮಗೆ ಲಭ್ಯವಿರುವ ರಸಗೊಬ್ಬರವನ್ನು, ವಿಶೇಷವಾಗಿ ಅದರಲ್ಲೂ ಯೂರಿಯಾ ಗೊಬ್ಬರವನ್ನು ಎಫ್‌ಐಡಿ, ಆಧರಿತ ಯುರಿಯಾ ವಿತರಣಾ ತಂತ್ರಾಂಶವನ್ನು ಬಳಸಿ ಪಿಒಸ್ ಮಷಿನ್ ಮೂಲಕ ರೈತರ ದಾಖಲೆಗಳನ್ವಯ ನಿರ್ದಿಷ್ಟ ಮಿತಿಯಲ್ಲಿ ವಿತರಿಸಲು ಸಹಕರಿಸಿ ಎಲ್ಲ ರೈತರ ಹಿತ ಕಾಪಾಡಬೇಕು ಎಂದು ಸೂಚಿಸಿದರು.

ಈ ವೇಳೆ ಉಪ ಕೃಷಿ ನಿರ್ದೇಶಕಿ ಸ್ಫೂರ್ತಿ ಜಿ.ಎಸ್., ಮೇಘನಾ ನಾಡಗೇರ, ಕಲಾವತಿ, ಪ್ರಕಾಶ ಕಗದಾಳ, ಸಂಜಯ್ ರೊದ್ದಂ, ಸೌಮ್ಯ, ರಾಜೇಶ್ವರಿ, ಬಸವರಾಜೇಶ್ವರಿ ಸೇರಿದಂತೆ ಕೃಷಿ ಪರಿಕರ ಮಾರಾಟಗಾರರು, ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರು ಹಾಗೂ ರೈತ ಉತ್ಪಾದಕ ಕಂಪನಿಗಳ ಪ್ರತಿನಿಧಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯಪಾಲರ ವಜಾಕ್ಕೆ ಆಗ್ರಹಿಸಿ ಕರವೇ ಪ್ರತಿಭಟನೆ
ವಿಶೇಷಚೇತನ ಮಕ್ಕಳಿಗೆ ಜಿಲ್ಲಾಡಳಿತದಿಂದ ಸೌಲಭ್ಯ ಕಲ್ಪಿಸಲು ಕ್ರಮ: ಡಿಸಿ ಕವಿತಾ ಎಸ್‌. ಮನ್ನಿಕೇರಿ