ಕನ್ನಡಪ್ರಭ ವಾರ್ತೆ ಚವಡಾಪುರ:
ಅಫಜಲ್ಪುರ ತಾಲೂಕಿನ ನಿಲೂರ ಗ್ರಾಮದಲ್ಲಿ ಕೃಷಿ ಇಲಾಖೆ, ಕೃಷಿ ವಿಜ್ಞಾನಿಗಳ ತಂಡದೊಂದಿಗೆ ನೆಟೆ ರೋಗದಿಂದ ಹಾಳಾದ ತೊಗರಿ ಬೆಳೆ ವಿಕ್ಷಣೆ ಮಾಡಿ ಮಾತನಾಡಿ, ತಾಲೂಕಿನ ರೈತರ ಪ್ರಮುಖ ಬೆಳೆಯಾಗಿರುವ ತೊಗರಿ ಈ ಭಾರಿ ನೆಟೆ ರೋಗಕ್ಕೆ ತುತ್ತಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ತಾಲೂಕಿನಾದ್ಯಂತ ಬೆಳೆ ಹಾನಿಯ ಸಮಗ್ರ ಸರ್ವೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಸಲ್ಲಿಸಿದ ಬಳಿಕ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪೂರ ಮಾತನಾಡಿ, ರೈತರು ಪ್ರತಿ ಬೆಳೆ ಬಿತ್ತನೆಯಿಂದ ರಾಶಿ ಮಾಡುವವರೆಗೆ ವೈಜ್ಞಾನಿಕವಾಗಿ ಕೃಷಿ ಮಾಡಬೇಕು. ತೊಗರಿಗೆ ನೆಟೆ ರೋಗ ಬಂದಾಗ ಎಲೆಗಳಿಗೆ ಕೀಟನಾಶಕ ಸಿಂಪಡಿಸಿದರೆ ಪರಿಹಾರವಾಗುವುದಿಲ್ಲ. ಬೇರಿಗೆ ಪೋಷಕಾಂಶಗಳು ಬೇಕಾಗುತ್ತವೆ. ಇದನ್ನು ಕೃಷಿ ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಂಡು ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು ಎಂದರು.ಮುಂದಿನ ವಾರ ಸಿಎಂ ಸಿದ್ದರಾಮಯ್ಯನವರಿಗೆ ಭೇಟಿಯಾಗಿ ಕಲಬುರಗಿ ಜಿಲ್ಲೆಯ ರೈತರಿಗೆ ಹೆಚ್ಚಿನ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್ ಗಡಗಿಮನಿ ಮಾತನಾಡಿ, ತಾಲೂಕಿನಲ್ಲಿ ಒಣ ಬೇಸಾಯದ ಭೂಮಿಯಲ್ಲಿ ತೇವಾಂಶದ ಕೊರತೆಯಿಂದ ಸಾಕಷ್ಟು ರೈತರ ತೊಗರಿ ಬೆಳೆ ಹಾಳಾಗಿದೆ. ನೀರಾವರಿ ಅನುಕೂಲ ಇರುವವರು ನೀರು ಹರಿಸಿ ಬೆಳೆ ಉಳಿಸಿಕೊಂಡಿದ್ದಾರೆ. ಬೆಳೆ ಹಾನಿಯ ಕುರಿತು ಕಂದಾಯ ಇಲಾಖೆ, ಕೃಷಿ ಇಲಾಖೆಗೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.