ರೈತರು ಕೃಷಿ ಉತ್ಪನ್ನ ಎಪಿಎಂಸಿಯಲ್ಲಿ ಮಾರಾಟ ಮಾಡಲಿ: ಶಾಸಕ ಕೃಷ್ಣನಾಯ್ಕ

KannadaprabhaNewsNetwork |  
Published : Mar 11, 2025, 12:45 AM IST
ಹೂವಿನಹಡಗಲಿಯ ಎಪಿಎಂಸಿಯಲ್ಲಿ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿ ಶಾಸಕ ಕೃಷ್ಣನಾಯ್ಕ ಮಾತನಾಡಿದರು. | Kannada Prabha

ಸಾರಾಂಶ

ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಎಪಿಎಂಸಿಯಲ್ಲಿ ಮಾರಾಟ ಮಾಡುವುದರಿಂದ ಮಧ್ಯವರ್ತಿ ಹಾವಳಿ ತಪ್ಪಿಸಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಎಪಿಎಂಸಿಯಲ್ಲಿ ಮಾರಾಟ ಮಾಡುವುದರಿಂದ ಮಧ್ಯವರ್ತಿ ಹಾವಳಿ ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತಾಲೂಕು ಕೃಷಿ ಉತ್ಪನ್ನ ಮಾರಾಟ ಮಂಡಳಿ ಸಹಯೋಗದಲ್ಲಿ ಆರಂಭಿಸಿದ ಬೆಂಬಲ ಬೆಲೆಯ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.

ರೈತರ ಉತ್ಪನ್ನ ಖರೀದಿ ಮಾಡುವ ಮಧ್ಯವರ್ತಿಗಳು ಸುಲಿಗೆ ದಂಧೆ ಮಾಡಿಕೊಂಡಿದ್ದಾರೆ. ಇದರಿಂದ ರೈತ ಸಾಲಗಾರನಾಗಿದ್ದಾನೆ, ವರ್ತಕರು ಶ್ರೀಮಂತರಾಗಿದ್ದಾರೆ. ರೈತರು ಪ್ರತಿವರ್ಷ ನಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಎಪಿಎಂಸಿಯಲ್ಲಿ ಅಧಿಕಾರಿಗಳು ವರ್ತಕರಿಂದ ಕಡ್ಡಾಯವಾಗಿ ಕೃಷಿ ಉತ್ಪನ್ನಗಳ ಹರಾಜು ನಡೆಸಬೇಕಿದೆ ಎಂದರು.

ನೇರವಾಗಿ ರೈತರು ಎಪಿಎಂಸಿ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳನ್ನು ತಂದು ಮಾರಾಟ ಮಾಡುವುದರಿಂದ ಮಧ್ಯವರ್ತಿ ಹಾವಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಇದು ಸಾಧ್ಯವಾಗದಿದ್ದರೆ ತಾವೇ ಸ್ವತಃ ವರ್ತಕರನ್ನು ಮಾರುಕಟ್ಟೆಗೆ ಕರೆಸಿ ಹರಾಜು ನಡೆಸುವುದಾಗಿ ಎಚ್ಚರಿಸಿದರು.

ಸರ್ಕಾರ ಮಧ್ಯವರ್ತಿಗಳ ಕಡಿವಾಣಕ್ಕೆ ಮತ್ತು ಬೆಂಬಲ ಬೆಲೆ ನಿಗದಿಗೊಳಿಸಿ ಖರೀದಿ ಕೇಂದ್ರಗಳನ್ನು ಆರಂಭಿಸಿದೆ. ರೈತರು ನೇರವಾಗಿ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿ, ಬ್ಯಾಂಕ್ ದಾಖಲೆಗಳನ್ನು ನೀಡಿದರೆ ಹಣ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಆದ್ದರಿಂದ ಎಲ್ಲ ರೈತರು ಖರೀದಿ ಕೇಂದ್ರವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.

ರೈತರು ಪ್ರತಿವರ್ಷ ತಮ್ಮ ಬೆಳೆಗಳಿಗೆ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು. ಇತ್ತೀಚೆಗೆ ಅತಿವೃಷ್ಟಿ, ಅನಾವೃಷ್ಟಿ ಹೆಚ್ಚಾಗುತ್ತಿದೆ. ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಬೆಳೆವಿಮೆ ನೆರವಿಗೆ ಬರುತ್ತದೆ. ಹಿಂದಿನ ವರ್ಷ ತಾವು ರೈತರ ಮನವೊಲಿಸಿ ಬೆಳೆವಿಮೆ ಮಾಡಿಸಿದ್ದರಿಂದ, ತಾಲೂಕಿನಲ್ಲಿ ಕನಿಷ್ಠ ಶೇ.50ರಷ್ಟು ರೈತರಿಗೆ ವಿಮೆ ಮಂಜೂರಾಗಿದೆ ಎಂದರು.

ಮಧ್ಯವರ್ತಿಗಳ ಕಾಟ ತಪ್ಪಿಸಲು ವಾರದ ಸಂತೆ ಮಾರುಕಟ್ಟೆಯಲ್ಲಿ, ತರಕಾರಿ ಮಾರುಕಟ್ಟೆ ಆರಂಭಿಸಿದ್ದು, ಇದೀಗ ದಿನವಹಿ ಮಾರುಕಟ್ಟೆಯಾಗಿದೆ ಬೆಳೆಗಾರರಿಗೆ ಒಂದಷ್ಟು ಹಣ ಸಿಗುತ್ತಿದೆ. ಆದರೂ ಇಲ್ಲಿಯೂ ಮೋಸ ನಡೆಯುತ್ತಿರುವುದು ತಮ್ಮ ಗಮನಕ್ಕೆ ಬ೦ದಿದ್ದು, ವ್ಯಾಪಾರಸ್ಥರು ಮತ್ತು ಮಧ್ಯವರ್ತಿಗಳು ಪರಸ್ಪರ ಒಪ್ಪಂದ ಮಾಡಿಕೊ೦ಡು ಹರಾಜಿನಲ್ಲಿ ಬೆಲೆ ಏರಿಕೆ ಮಾಡದೇ ತಟಸ್ಥವಾಗಿ ಉಳಿಯುವಂತಹ ಆಟ ಆಡುತ್ತಿದ್ದಾರೆ. ರೈತ ಸಂಘಟನೆಗಳು, ನಾನಾ ಸಂಘಟನೆಗಳು ಇಂತಹ ದಂಧೆಯನ್ನು ಖಂಡಿಸಬೇಕು ಎಂದರು.

ಬೆಂಗಳೂರಿನಂತಹ ತರಕಾರಿ ಮಾರಾಟ ಉದ್ಯಮವಾಗಿ ಮಾರ್ಪಟ್ಟಿದೆ. ಐಟಿ-ಬಿಟಿ ಕಂಪನಿಗಳ ಮಾಲೀಕರು ಸಾವಯವ ತರಕಾರಿ ಬೆಳೆದು ಸಾವಿರಾರು ಕೋಟಿ ವಹಿವಾಟು ನಡೆಸುತ್ತಿದ್ದಾರೆ. ಹಾಗಾಗಿ ಹಳ್ಳಿಗಳಿಗಿಂತ ನಗರ ಪ್ರದೇಶಗಳಲ್ಲಿ ತರಕಾರಿ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ಅಧಿಕಾರಿಗಳು ರೈತರಿಗೆ ಉತ್ತೇಜನ ನೀಡುವ ಜತೆಗೆ ಅವರ ಬೆನ್ನಿಗೆ ನಿಲ್ಲಬೇಕು. ಯಾವುದೇ ದೂರು ಬಾರದಂತೆ ಕ್ರಮ ವಹಿಸಬೇಕೆಂದು ತಾಕೀತು ಮಾಡಿದರು.

ತಹಸೀಲ್ದಾರ್ ಜಿ.ಸಂತೋಷ್ ಕುಮಾರ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಗೋಳ ಚಿದಾನಂದ, ಪುರಸಭೆ ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ, ಸದಸ್ಯ ವಾರದ ಗೌಸ್ ಮೊದ್ದೀನ್, ಎನ್‌.ಕೋಟೆಪ್ಪ, ಎಂ.ಪರಮೇಶ್ವರಪ್ಪ, ದೀಪದ ಕೃಷ್ಣಪ್ಪ, ಸೊಪ್ಪಿನ ಪ್ರಕಾಶ, ಎ.ಜೆ. ವೀರೇಶ, ಟಿಎಪಿಸಿಎಂಎಸ್ ಜಿಲ್ಲಾ ವ್ಯವಸ್ಥಾಪಕ ಸಂಗಮೇಶ, ಎಪಿಎಂಸಿ ಕಾರ್ಯದರ್ಶಿ ತಿಮ್ಮಪ್ಪನಾಯ್ಕ ಇತರರಿದ್ದರು. ವ್ಯವಸ್ಥಾಪಕ ಸೊಪ್ಪಿನ ವೀರಣ್ಣ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ