ರೈತರು ಮಣ್ಣಿನ ಆರೋಗ್ಯ ವೃದ್ದಿಸಲು ಮುಂದಾಗಲಿ: ಸಾವಯವ ಕೃಷಿ ತಜ್ಞ ಎಚ್.ಆರ್.ಮಂಜುನಾಥ್ ಸಲಹೆ

KannadaprabhaNewsNetwork |  
Published : Jun 10, 2025, 07:42 AM IST
ಸಾವಯವ ಕೃಷಿ ತಜ್ಞ ಎಚ್.ಆರ್.ಮಂಜುನಾಥ್ ಅವರು | Kannada Prabha

ಸಾರಾಂಶ

ಕೃಷಿ ನೀತಿ ಮತ್ತು ಕೃಷಿ ಶೈಲಿ ಬದಲಾವಣೆಯಿಂದ ಮಾತ್ರ ರೈತರು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗಬಹುದು. ಕೃಷಿ ಸಾಲ ನೀತಿಯಲ್ಲಿ ಬದಲಾವಣೆ, ಸಬ್ಸಿಡಿಯನ್ನು ನೇರವಾಗಿ ರೈತರಿಗೆ ನೀಡುವುದು, ಹೆಚ್ಚಿನ ಬಂಡವಾಳವನ್ನು ಹೂಡಿಕೆ ಮಾಡದೇ, ಕಾರ್ಮಿಕರ ಅವಲಂಬನೆ ಕಡಿಮೆ ಮಾಡುವ, ಸಣ್ಣ ಯಂತ್ರಗಳ ಮೂಲಕ ಸ್ವತಃ ಕಾರ್ಯನಿರ್ವಹಿಸುವಂತಹ ಯೋಜನೆ ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸತತ ಕೃಷಿ ರಾಸಾಯನಿಕಗಳ ಬಳಕೆಯಿಂದ ಉತ್ಪಾದನೆ ವೆಚ್ಚ ಹೆಚ್ಚಾಗುತ್ತದೆ ಮತ್ತು ಉತ್ಪಾದನೆಯ ಇಳುವರಿ ಮತ್ತು ಗುಣಮಟ್ಟ ಕುಸಿಯುತ್ತದೆ. ಮಣ್ಣು ತನ್ನ ಕೃಷಿ ಯೋಗ್ಯತೆಯನ್ನು ಕಳೆದುಕೊಳ್ಳುತ್ತದೆ. ಮಣ್ಣಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ

ರೈತರು ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳಿಗೆ ಪೋಷಕಾಂಶಗಳನ್ನು ಒದಗಿಸಿ, ಮಣ್ಣಿನ ಸಾವಯವ ಇಂಗಾಲ ಪ್ರಮಾಣವನ್ನು ವೃದ್ಧಿಸಲು ಮುಂದಾಗಬೇಕು ಎಂದು ಸಾವಯವ ಕೃಷಿ ತಜ್ಞ ಎಚ್.ಆರ್.ಮಂಜುನಾಥ್ ಸಲಹೆ ನೀಡಿದರು.

ಕೊಳ್ಳೇಗಾಲದ ಜೆಎಸ್‌ಬಿ ಪ್ರತಿಷ್ಠಾನದ ವತಿಯಿಂದ ಕಾಮಗೆರೆ ಮೈರಾಡ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸುಸ್ಧಿರ ಪರಿಸರ ಸ್ನೇಹಿ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.

ಮಣ್ಣಿನಲ್ಲಿ ಸೂಕ್ಷ್ಮ ಜೀವಿಗಳು ಕಾರ್ಯವೆಸಗಲು, ಗೊಬ್ಬರ, ಮುಚ್ಚಿಗೆ ಮತ್ತು ತೇವಾಂಶ ಬಹಳ ಪ್ರಭಾವ ಬೀರುತ್ತವೆ. ಈ ರೀತಿಯ ಸಾವಯವ ಕೃಷಿ ನಿರ್ವಹಣೆಯಿಂದ ಸೂಕ್ಷ್ಮ ಜೀವಿಗಳು ಕಾರ್ಯಪ್ರವೃತ್ತರಾದಾಗ ಮಾತ್ರ ನಮ್ಮ ಬೆಳೆಯ ಉತ್ಪಾದನೆ ಮತ್ತು ಫಸಲಿನ ಗುಣಮಟ್ಟ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.

ಸೂಕ್ಷ್ಮ ಜೀವಿಗಳು ತಮ್ಮ ನಿರ್ದಿಷ್ಟ ಕಾರ್ಯ ಚಟುವಟಿಕೆಗಳನ್ನು ಒಂದು ಕುಟುಂಬದಂತೆ ಪರಸ್ಪರ ಒಡನಾಟದಿಂದ ನಿರ್ವಹಿಸುತ್ತವೆ. ವ್ಯಾಮ್‌ ಎಂಬ ಸೂಕ್ಷ್ಮ ಜೀವಿಗಳು ಈ ಪರಸ್ಪರ ಹೊಂದಾಣಿಕೆ ಮತ್ತು ಸಸ್ಯಗಳ ಬೇರು ವಲಯದೊಂದಿಗೆ ಸಂಬಂಧ ಕಲ್ಪಿಸುತ್ತವೆ ಎಂದರು.

ಸಸ್ಯಗಳು ತಮ್ಮ ಬೇರು ವಲಯದಲ್ಲಿ ಹಿತಕರ ತೇವಾಂಶ, ಮಣ್ಣಿನ ಉಷ್ಣಾಂಶ ಮತ್ತು ಸಾವಯವ ತ್ಯಾಜ್ಯಗಳ ಆಹಾರವನ್ನು ಒದಗಿಸುತ್ತವೆ. ಇದನ್ನು ಉಪಯೋಗಿಸಿಕೊಂಡು ಸೂಕ್ಷ್ಮ ಜೀವಿಗಳು ಪೋಷಕಾಂಶಗಳನ್ನು ಒದಗಿಸಿ, ಮಣ್ಣಿನ ಸಾವಯವ ಇಂಗಾಲ ಪ್ರಮಾಣವನ್ನು ವೃದ್ಧಿಸುತ್ತವೆ. ಮಣ್ಣಿನ ಸಮತೋಲಿತ ತೇವಾಂಶವು ಸೂಕ್ಷ್ಮ ಜೀವಿಗಳ ಕಾರ್ಯಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನೀರಾವರಿ ವ್ಯವಸ್ಥೆ ಮತ್ತು ಅಗತ್ಯತೆಗನುಸಾರ ತೇವಾಂಶ ಕಾಪಾಡಿಕೊಳ್ಳುವುದು ಸಾವಯವ ಕೃಷಿಯಲ್ಲಿ ಪ್ರಮುಖಾಂಶವಾಗಿದೆ ಎಂದು ತಿಳಿಸಿದರು.

ರಾಸಾಯನಿಕ ಒಳಸುರಿಗಳ ಕೃಷಿಪದ್ದತಿಯಲ್ಲಿ ಬಳಸುವ ಗೊಬ್ಬರ ಕೇವಲ ಕೆಲವು ಸಸ್ಯಪೋಷಕಾಂಶಗಳನ್ನು ಮಾತ್ರ ಪೂರೈಸಬಲ್ಲದು. ಇದು ಸಂಪೂರ್ಣ ಕಳಿತ 16 ಸಸ್ಯಪೋಷಕಾಂಶವುಳ್ಳ ಸಾವಯವ ಗೊಬ್ಬರಕ್ಕೆ ಎಂದೂ ಸರಿಸಮಾನವಾಗದು ಎಂದು ತಿಳಿಸಿದರು.

ಕೃಷಿ ಶೈಲಿ ಬದಲಾಗಬೇಕಿದೆ:

ಕೃಷಿ ಮಾರ್ಗದರ್ಶಕರಾದ ಸತ್ತೇಗಾಲ ಪ್ರಶಾಂತ್ ಜಯರಾಂ ಮಾತನಾಡಿ, ಕೃಷಿ ಸೇರಿದಂತೆ ಕುರಿ/ ಕೋಳಿ/ ಹಸು/ ಮೀನು ಸಾಕಾಣಿಕೆ ಇವುಗಳನ್ನು ನಡೆಸುವ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ವಿನ್ಯಾಸ ಮಾಡಿ ಅದಕ್ಕೆ ತಕ್ಕಂತೆ ನೀತಿ/ ಯೋಜನೆಗಳನ್ನು ರೂಪಿಸುವ ಬದಲು ಬ್ಯಾಂಕ್, ಸರ್ಕಾರಿ ಇಲಾಖೆಗಳು, ಬೀಜ, ಗೊಬ್ಬರ, ನರ್ಸರಿ, ಸಾಗಾಟಗಾರರು, ವ್ಯಾಪಾರಿಗಳು, ದಲ್ಲಾಳಿಗಳಿಗೆ ತಮ್ಮ ಕೆಲಸಗಳು ಸುಲಭವಾಗುವ, ನಷ್ಟದ ಅಪಾಯವಿಲ್ಲದ ಮತ್ತು ಲಾಭ ಬರುವ ರೀತಿಯಲ್ಲಿ ನಮ್ಮ ಕೃಷಿ ವ್ಯವಸ್ಥೆಯನ್ನು ಮತ್ತು ನೀತಿಯನ್ನು ರೂಪಿಸಲಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ಶ್ರಮ, ವಿಪರೀತ ಖರ್ಚು, ಸೂಕ್ತ ಬೆಲೆ ಸಿಗುತ್ತಿಲ್ಲ, ನಿರೀಕ್ಷಿತ ಆದಾಯವಿಲದೇ ನಷ್ಟವಾಗಿ ಸಾಲಗಾರರಾಗುತ್ತಿದ್ದಾರೆ, ಕೃಷಿಯಿಂದ ಬೇಸತ್ತು ಜಮೀನು ಮಾರಾಟ ಮಾಡಿ ವಲಸೆ ಹೋಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಕೃಷಿ ನೀತಿ ಮತ್ತು ಕೃಷಿ ಶೈಲಿ ಬದಲಾವಣೆಯಿಂದ ಮಾತ್ರ ರೈತರು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗಬಹುದು. ಕೃಷಿ ಸಾಲ ನೀತಿಯಲ್ಲಿ ಬದಲಾವಣೆ, ಸಬ್ಸಿಡಿಯನ್ನು ನೇರವಾಗಿ ರೈತರಿಗೆ ನೀಡುವುದು, ಹೆಚ್ಚಿನ ಬಂಡವಾಳವನ್ನು ಹೂಡಿಕೆ ಮಾಡದೇ, ಕಾರ್ಮಿಕರ ಅವಲಂಬನೆ ಕಡಿಮೆ ಮಾಡುವ, ಸಣ್ಣ ಯಂತ್ರಗಳ ಮೂಲಕ ಸ್ವತಃ ಕಾರ್ಯನಿರ್ವಹಿಸುವಂತಹ ಯೋಜನೆ ಅಗತ್ಯವಿದೆ ಎಂದು ತಿಳಿಸಿದರು.

ವಿವಿಧ ಹಂತದಲ್ಲಿ ಬೆಳೆ ಆಯೋಜನೆ, ಒಂದೇ ಬಾರಿಗೆ ಕುಯ್ಲು/ ಕಟಾವು ಮಾಡುವ ಬದಲು ಹಂತಹಂತವಾಗಿ ಮಾಡುವುದು ಮತ್ತು ಅದನ್ನು ಸ್ಥಳೀಯವಾಗಿ ಮಾರಾಟ ಮಾಡುವುದರಿಂದ ರೈತರು ತಮ್ಮ ಶ್ರಮಕ್ಕೆ ಮತ್ತು ಬಂಡವಾಳಕ್ಕೆ ಸೂಕ್ತ ಪ್ರತಿಫಲವನ್ನು ಪಡೆಯಲು ಸಾಧ್ಯವಾಗುತ್ತದೆ. ಒಂದೇ ಬಾರಿಗೆ ದುಡ್ಡು ಬರುತ್ತದೆ ಎಂದು ಒಂದೇ ಬಾರಿಗೆ ಹೆಚ್ಚಿನ ಬೆಳೆ ಹಾಕಲು ಬಂಡವಾಳ ಹೂಡಿ, ವರ್ಷದ ತನಕ ಕಾಯುವ ವೇಳೆಯಲ್ಲಿ ಪ್ರಕೃತಿ ವಿಕೋಪ ಅಥವಾ ಬೆಲೆ ಕುಸಿತದಿಂದ ನಷ್ಟವಾದರೆ ಪುನಃ ಸುಧಾರಿಸಿಕೊಳ್ಳುವುದು ಸುಲಭವಲ್ಲ. ಕೃಷಿಯಲ್ಲಿ ವರ್ಷಕೊಮ್ಮೆ ಒಂದೇ ಬಾರಿಗೆ ಐದು ಲಕ್ಷ ಸಂಪಾದನೆ ಮಾಡುವ ಗುರಿಯನ್ನು, ಪ್ರತಿ ತಿಂಗಳು ಐವತ್ತು ಸಾವಿರ ಗಳಿಕೆ ಮಾಡುವ ರೀತಿಯಲ್ಲಿ ಕೃಷಿಯನ್ನು ವಿನ್ಯಾಸ ಮಾಡಿಕೊಂಡಾಗ ಕಾರ್ಮಿಕರ ಅವಲಂಬನೆ, ಆರ್ಥಿಕ ನಷ್ಟ ಹಲವು ಒತ್ತಡಗಳಿಂದ ರೈತರು ಪಾರಾಗಬಹುದು ಎಂದು ತಿಳಿಸಿದರು.

ನಿವೃತ್ತ ಎಂಜಿನಿಯರ್‌ ಚಂದ್ರಶೇಖರಯ್ಯ, ಪ್ರಗತಿಪರ ರೈತರು ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನೀತರಾಜಕುಮಾರ ಪುತ್ಥಳಿ ಅನಾವರಣ
ಬೆಂಗಳೂರು ನಗರದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ