ಕನ್ನಡಪ್ರಭ ವಾರ್ತೆ ಮಂಡ್ಯ
ಬೆಂಗಳೂರಿನ ಮಹಾತ್ಮ ಗಾಂಧಿ ಕೃಷಿ ವಿಶ್ವವಿದ್ಯಾಲಯದಿಂದ ಬೇರ್ಪಟ್ಟಿರುವ ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಆಡಳಿತ ಚಟುವಟಿಕೆಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸುವ ಕುರಿತು ಸಭೆ ನಡೆಸಿದ ಸಚಿವರು ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಇರುವ ಜಿಕೆವಿಕೆ ಮತ್ತು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಬೇರ್ಪಡಿಸಲಾಗಿರುವ ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಕಾಲೇಜುಗಳು, ಸಂಶೋಧನಾ ಕೇಂದ್ರಗಳ ಕಟ್ಟಡ, ಬೋಧಕ-ಬೋಧಕೇತರ ಸಿಬ್ಬಂದಿಯೊಂದಿಗೆ ಮಂಡ್ಯ ಕೃಷಿ ವಿಶ್ವವಿದ್ಯಾನಿಲಯಕ್ಕೆ ನಿಯಮಾನುಸಾರ ವರ್ಗಾಯಿಸುವಂತೆ ಸಚಿವರು ತಿಳಿಸಿದರು.ಮಂಡ್ಯ ಕೃಷಿ ವಿವಿ ಕನಸಿನ ಕೂಸಾಗಿದ್ದು ಇದನ್ನೂ ಸಹ ಇತರ ಕೃಷಿ ವಿಶ್ವವಿದ್ಯಾಲಯಗಳಷ್ಟೇ ಮೌಲ್ಯಯುತ, ಆಡಳಿತಾತ್ಮಕ, ಶೈಕ್ಷಣಿಕವಾಗಿ ಬಲವರ್ಧನೆಗೊಳಿಸಲು ಎರಡು ವಿಶ್ವವಿದ್ಯಾಲಯದ ಅಧಿಕಾರಿಗಳು ಶ್ರಮಿಸಬೇಕಿದೆ ಎಂದು ಸಲಹೆನೀಡಿದರು.
ಹೊಸದಾಗಿ ಸೃಜನೆಯಾಗಬೇಕಾಗಿರುವ ಹುದ್ದೆಗಳನ್ನ ಪಟ್ಟಿ ಮಾಡಿ ಹಣಕಾಸು ಇಲಾಖೆಗೆ ಅನುಮೋದನೆಗೆ ಕಳುಹಿಸಿಕೊಡುವಂತೆ ಸೂಚಿಸಿದ ಸಚಿವ ಎನ್.ಚಲುವರಾಯಸ್ವಾಮಿಯವರು, ಒಟ್ಟಾರೆ ರಾಜ್ಯದ ಕೃಷಿ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಣೆಗೆ ಮೊದಲ ಆದ್ಯತೆ ನೀಡುವಂತೆ ಹೇಳಿದರು..
ಜಿಕೆವಿಕೆ ಉಪ ಕುಲಪತಿ ಡಾ.ಸುರೇಶ್ ,ಶಿವಮೊಗ್ಗ ಕೃಷಿ ವಿವಿ. ಉಪ ಕುಲಪತಿ ಡಾ ಜಗದೀಶ್, ಕೃಷಿ ಆಯುಕ್ತ ವೈ.ಎಸ್. ಪಾಟೀಲ್, ಕೃಷಿ ನಿರ್ದೇಶಕ ಡಾ. ಜಿ.ಟಿ. ಪುತ್ರ. ಅಪರ ಕೃಷಿ ನಿರ್ದೇಶಕ ವೆಂಕಟರಮಣರೆಡ್ಡಿ, ಮಂಡ್ಯ ಕೃಷಿ ವಿವಿ ವಿಶೇಷಾಧಿಕಾರಿ ಡಾ. ಹರಿಣಿಕುಮಾರ, ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಉಪಸ್ಥಿತರಿದ್ದರು.