ಕನಕಗಿರಿಯಲ್ಲಿ ರೈತರಿಂದ ತಡರಾತ್ರಿ ವರೆಗೆ ಉಪವಾಸ ಸತ್ಯಾಗ್ರಹ

KannadaprabhaNewsNetwork |  
Published : Sep 11, 2026, 02:30 AM IST
ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಸಹಾಯಕ ಆಯುಕ್ತ ಮಹ್ಮದ್‌ ಜಿಲಾನಿ ಹಾಗೂ ತಹಸೀಲ್ದಾರ್‌ ಚಂದ್ರಶೇಖರ ಭೇಟಿ ನೀಡಿ ತಡರಾತ್ರಿ ರೈತರಿಂದ ಮನವಿ ಸ್ವೀಕರಿಸಿದರು. | Kannada Prabha

ಸಾರಾಂಶ

ವಿವಿಧ ಭೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ ಬಣ)ದ ಕಾರ್ಯಕರ್ತರು ಇಲ್ಲಿನ ತಹಸೀಲ್ ಕಚೇರಿ ಎದುರು ಬುಧವಾರ ತಡರಾತ್ರಿ ವರೆಗೂ ಉಪವಾಸ ಸತ್ಯಾಗ್ರಹ ನಡೆಸಿದರು.

ಕನಕಗಿರಿ: ರಾಷ್ಟ್ರೀಯ ಹಾಗೂ ರಾಜ್ಯ ಸರ್ಕಾರದ ವಿಪತ್ತು ಅಡಿಯಲ್ಲಿ ಪರಿಹಾರ, ಜಾನುವಾರುಗಳಿಗೆ ಮೇವು ಸೇರಿದಂತೆ ವಿವಿಧ ಭೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ ಬಣ)ದ ಕಾರ್ಯಕರ್ತರು ಇಲ್ಲಿನ ತಹಸೀಲ್ ಕಚೇರಿ ಎದುರು ಬುಧವಾರ ತಡರಾತ್ರಿ ವರೆಗೂ ಉಪವಾಸ ಸತ್ಯಾಗ್ರಹ ನಡೆಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ ಮಾತನಾಡಿ, ತಾಲೂಕಿನಲ್ಲಿ ಕೃಷ್ಣ ಬಿ-ಸ್ಕೀಮ್ ಯೋಜನೆಯಡಿ ನಡೆಸಿದ ಕಾಮಗಾರಿಗಳು ಅವೈಜ್ಞಾನಿಕವಾಗಿದೆ. ಕೃಷ್ಣ ಜಲಭಾಗ್ಯ ನಿಗಮದ ಯೋಜನೆಗಳು ಕಳಪೆ ಮಟ್ಟದಿಂದ ಕೂಡಿವೆ. ಇದರಿಂದ ತಾಲೂಕಿನ ಅನೇಕ ಕೆರೆಗಳು ತುಂಬಲು ಸಾಧ್ಯವಾಗಿಲ್ಲ. ರೈತರ ಬಗ್ಗೆ ಸಚಿವರಿಗಾಗಲಿ, ಸರ್ಕಾರಕ್ಕೆ ಆಗಲಿ ಕಿಂಚಿತ್ತು ಕಾಳಜಿ ಇಲ್ಲ. ಇನ್ನೂ ತಾಲೂಕಿನಾದ್ಯಂತ ಅಕ್ರಮ ಮದ್ಯದಂಗಡಿಗಳು ನಾಯಿಕೊಡೆಯಂತೆ ಹುಟ್ಟಿಕೊಂಡಿದ್ದು, ಇವುಗಳ ನಿಯಂತ್ರಣಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಜಿಲ್ಲಾ ಕೇಂದ್ರದ ಹಾಗೂ ಗ್ರಾಮೀಣ ಭಾಗದ ರಸ್ತೆಗಳ ಸ್ಥಿತಿ ಅಧೋಗತಿಗೆ ಹೋಗಿದೆ. ಕಾಮಗಾರಿ ಆರಂಭಗೊಂಡು ಆರು ತಿಂಗಳಾದರೂ ತ್ವರಿತಗತಿಯ ಅಭಿವೃದ್ಧಿ ಗುತ್ತಿಗೆದಾರರು ಮುಂದಾಗುತ್ತಿಲ್ಲ. ಇದರಿಂದ ಅನೇಕ ಅಪಘಾತಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ. ಕೆಆರ್‌ಐಡಿಎಲ್‌ನಿಂದ ವಿವಿಧ ಅಭಿವೃದ್ಧಿ ತಾಲೂಕು ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳು ತೀರಾ ಕಳಪೆ ಮಟ್ಟದಿಂದ ಕೂಡಿವೆ. ಗುಣಮಟ್ಟ ಕಾಪಾಡದೆ ಇರುವುದರಿಂದ ಸರ್ಕಾರದ ಅನುದಾನ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.

ಆನಂತರ ತಾಲೂಕು ಘಟಕದ ಅಧ್ಯಕ್ಷ ಭೀಮನಗೌಡ ಮಾತನಾಡಿ, ರಾಷ್ಟ್ರ ಮತ್ತು ರಾಜ್ಯ ವಿಪತ್ತಿನ ಅಡಿಯಲ್ಲಿ ರೈತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು. ಜಾನುವಾರುಗಳಿಗೆ ಮೇವು, ನೀರು ಒದಗಿಸುವ ನಿಟ್ಟಿನಲ್ಲಿ ಗೋಶಾಲೆ ಆರಂಭಿಸಬೇಕು. ಗ್ರಾಮೀಣ ಭಾಗದ ಜನ ಬಸ್ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿದ್ದು, ಕೂಡಲೇ ಬಸ್ ಡಿಪೋ ಆರಂಭಿಸಬೇಕು. ವಿಜಯನಗರ ಸಾಮ್ರಾಜ್ಯದ ಆಳ್ವಿಕೆ ಒಳಪಟ್ಟಿರುವ ಕನಕಗಿರಿಯನ್ನು ಪ್ರವಾಸಿ ತಾಣವನ್ನಾಗಿ ಘೋಷಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸತ್ಯಾಗ್ರಹ ಸ್ಥಳಕ್ಕೆ ಸಹಾಯಕ ಆಯುಕ್ತ ಮಹ್ಮದ್‌ ಜಿಲಾನಿ, ತಹಸೀಲ್ದಾರ್‌ ಚಂದ್ರಶೇಖರ ಗಾಳಿ, ಪಿಐ ವೀರಣ್ಣ ಹಳ್ಳಿ ಭೇಟಿ ನೀಡಿ ರೈತರಿಂದ ಮನವಿ ಸ್ವೀಕರಿಸಿ, ಬೇಡಿಕೆಗಳ ಈಡೇರಿಸುವ ಭರವಸೆ ನೀಡಿದ್ದರಿಂದ ಚಳವಳಿಯನ್ನು ವಾಪಸ್ ಪಡೆಯಲಾಯಿತು. ರೈತರಾದ ವೆಂಕಟೇಶ ಮಲ್ಲಿಗೆವಾಡ, ತಿಮ್ಮನಗೌಡ, ಯಮನೂರ ಮಲ್ಲಿಗೆವಾಡ, ರಾಮಲಿಂಗಪ್ಪ ಗದ್ದಿ, ಸೋಮನಾಥ ಮಲ್ಲಾಪುರ, ಹನುಮೇಶ ನಾಗಲಾಪುರ, ಶಿವಕುಮಾರ ಹಿರೇಖೇಡ, ಯಂಕಪ್ಪ ಉಮಳಿ ಕಾಟಾಪುರ, ಸತ್ಯಪ್ಪ ಕೆ., ಸೋಮಣ್ಣ ಗುಡದೂರು, ತಿಮ್ಮಣ್ಣ ಹಿರೇಖೇಡ ಇದ್ದರು.

ಸೌಲಭ್ಯ ಒದಗಿಸಬೇಕು: ಬಸವರೆಡ್ಡಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು. ಸರ್ಕಾರದಿಂದ ಕುಟುಂಬದ ಓರ್ವರಿಗೆ ನೌಕರಿ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ತ್ವರಿತವಾಗಿ ಸೌಲಭ್ಯ ಒದಗಿಸಬೇಕು ಎಂದು ರೈತ ಮುಖಂಡ ಹನುಮಂತ ಬಂಡ್ರಾಳ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

80 ಡೆಸಿಬಲ್‌ ಮೀರಿದರೆ ಡಿಜೆ ಬಾಕ್ಸ್‌ ವಶ, ಪ್ರಕರಣ ದಾಖಲು
ಜನಾರ್ದನ ಪೂಜಾರಿ ಆಪ್ತ ಪದ್ಮರಾಜ್‌ ಪೂಜಾರಿ ದ.ಕ. ಕಾಂಗ್ರೆಸ್‌ ಅಧ್ಯಕ್ಷ