ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿರುವ ನೂರಾರು ರೈತರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೆಲ ರೈತರು ರಸ್ತೆ ಮಧ್ಯದಲ್ಲೇ ಅರೆಬೆತ್ತಲೆಯಾಗಿ ಕುಳಿತು ವಿನೂತನ ಪ್ರತಿಭಟನೆ ಮಾಡಿದರು.
ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಕಬ್ಬು ಸೇರಿದಂತೆ ಹಲವು ಬೆಳೆಗಳು ನೀರಿಲ್ಲದೆ ಕಣ್ಣೆದುರೇ ಒಣಗುತ್ತಿವೆ. ಇದರಿಂದ ಕಂಗಾಲಾಗಿರುವ ರೈತರು ಬೀದಿಗಿಳಿಯುವಂತಾಗಿದೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಪ್ರಸ್ತುತ ೯೨ ಅಡಿ ನೀರಿದ್ದರೂ ಸಹ ಸರ್ಕಾರ ನಾಲೆಗಳಿಗೆ ನೀರು ಹರಿಸುತ್ತಿಲ್ಲ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.ಸ್ಥಳದಲ್ಲೇ ಅಡುಗೆ ಮಾಡಿ ಹೆದ್ದಾರಿ ಮಧ್ಯದಲ್ಲೇ ಕುಳಿತ ರೈತರು ಅಲ್ಲಿಯೇ ರೈಸ್ ಬಾತ್ ತಿಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಅನ್ನದಾತನ ಗೋಳು ಕೇಳದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಧಿಕ್ಕಾರ ಎಂಬ ಘೋಷಣೆ ಕೂಗಿದರು. ಸರ್ಕಾರ ಇನ್ನಾದರೂ ಮೊಂಡುತನ ಬಿಟ್ಟು ತಕ್ಷಣವೇ ಮಂಡ್ಯದ ಎಲ್ಲ ನಾಲೆಗಳಿಗೆ ನೀರನ್ನು ಹರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಕುರಿತು ಹೇಳಿಕೆ ನೀಡಿರುವ ಅವರು, ಸರ್ಕಾರ ಕೂಡಲೇ ರೈತರ ರಕ್ಷಣೆಗೆ ಧಾವಿಸಬೇಕು. ಕೆಆರ್‌ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸಿ ಬೆಳೆಗಳ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಅಣೆಕಟ್ಟೆಗೆ ಇನ್ನೂ ಸಾಕಷ್ಟು ನೀರು ಹರಿದು ಬರುವ ಸೂಚನೆ ಇದೆ. ಹೀಗಾಗಿ ಈಗ ಅಣೆಕಟ್ಟೆಯಲ್ಲಿ 92 ಅಡಿ ನೀರು ಸಂಗ್ರಹವಾಗಿದೆ. ಇರುವ ನೀರನ್ನು ಕಬ್ಬಿನ ಬೆಳೆಗೆ 8 ದಿನಗಳ ಕಾಲ ನೀರು ಹರಿಸುವ ಅಗತ್ಯವಿದೆ. ಇಲ್ಲದಿದ್ದರೆ ಬೆಳೆ ಒಣಗಿ ಕೋಟ್ಯಾಂತರ ರು. ನಷ್ಟವಾಗಲಿದೆ ಎಂದು ಹೇಳಿದ್ದಾರೆ.