ಬರ ಪರಿಹಾರಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದ ರೈತರು

KannadaprabhaNewsNetwork |  
Published : Jan 24, 2024, 02:05 AM IST
23ಎಚ್‌ವಿಆರ್‌1, 1ಎ, | Kannada Prabha

ಸಾರಾಂಶ

ಬರಗಾಲದಿಂದ ಹಾಳಾದ ಬೆಳೆಗೆ ಪ್ರತಿ ಎಕರೆಗೆ ₹೨೫ ಸಾವಿರ ಪರಿಹಾರ ನೀಡಬೇಕು.

ಜಿಲ್ಲಾಡಳಿತ ಭವನದ ಎದುರು ಅಹೋರಾತ್ರಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಹಾವೇರಿ

ಬರಗಾಲದಿಂದ ಹಾಳಾದ ಬೆಳೆಗೆ ಪ್ರತಿ ಎಕರೆಗೆ ₹೨೫ ಸಾವಿರ ಪರಿಹಾರ ನೀಡಬೇಕು. ರೈತರ ಹೊಸ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಸಾವಿರಾರು ರೈತರು ಜಿಲ್ಲಾಡಳಿತ ಭವನದ ಎದುರು ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದರು.

ನಗರದ ಕಾಗಿನೆಲೆ ಕ್ರಾಸ್‌ ಬಳಿಯಿಂದ ಮೆರವಣಿಗೆ ಮೂಲಕ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಆಗಮಿಸಿ ಸಮಾವೇಶಗೊಂಡು ಕೆಲ ಕಾಲ ರಸ್ತೆ ತಡೆ ನಡೆಸಿದರು. ರೈತರ ಬಗ್ಗೆ ಸ್ವಲ್ಪವೂ ಕಾಳಜಿ ತೋರದ ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತ ವಿರೋಧ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತರ ಬೇಡಿಕೆ ಈಡೇರಿಸಲು ಎರಡೂ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಹೋರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಬರಗಾಲದಿಂದಾಗಿ ರೈತರ ಬದುಕು ಕಷ್ಟಕರವಾಗಿದೆ. ಉಪವಾಸ ಕುಳಿತು ಪ್ರತಿಭಟನೆ ಮಾಡುವ ಸ್ಥಿತಿ ರೈತರಿಗೆ ಬರಬಾರದಿತ್ತು. ಸರ್ಕಾರ ರೈತರ ಕಷ್ಟಗಳಿಗೆ ಸ್ಪಂದಿಸಬೇಕು. ಬೆಳೆವಿಮೆ, ಬರ ಪರಿಹಾರ ಕೊಡಬೇಕು. ಬರಗಾಲದಿಂದ ಹಾನಿಯಾದ ಬೆಳೆಗೆ ಸರ್ಕಾರ ಎಕರೆಗೆ ₹೨ ಸಾವಿರ ನೀಡಿದರೆ ಯಾತಕ್ಕೂ ಸಾಲುವುದಿಲ್ಲ. ಸರ್ಕಾರಕ್ಕೆ ಹಣದ ಕೊರತೆಯಿದ್ದರೆ ನಾವೇ ಕೊಡುತ್ತೇವೆ. ನಾಡಿನ ಎಲ್ಲ ಮಠಾಧೀಶರ ಬೆಂಬಲ ರೈತರಿಗಿದೆ. ಓಟು ಪಡೆದ ನಾಯಕರು ನಾಲಾಯಕ್ ಆಗಬಾರದು. ಅನ್ನರಾಮಯ್ಯ ಎಂದು ಹೆಸರು ಪಡೆದ ಸಿಎಂ ಸಿದ್ದರಾಮಯ್ಯ ರೈತರ ಕಷ್ಟಗಳಿಗೆ ಸ್ಪಂದಿಸಿ, ರೈತ ರಾಮಯ್ಯ ಆಗಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಜತೆಯಾಗಿ ೨೮ ಸ್ಥಾನ ಗೆಲ್ಲಲು ಮುಂದಾಗಿದ್ದಾರೆ. ಕಾಂಗ್ರೆಸ್‌ ೨೦ ಸ್ಥಾನ ಗೆಲ್ಲಲು ತಂತ್ರ ರೂಪಿಸುತ್ತಿದೆ. ಎಲ್ಲ ಪಕ್ಷಗಳು ಚುನಾವಣೆ ಗುಂಗಿನಲ್ಲಿ ರೈತರನ್ನು ಮರೆತಿವೆ. ಈ ದೇಶಕ್ಕೆ ಅನ್ನ ನೀಡುವ ರೈತರು ಬಿಸಿಲಿನಲ್ಲಿ ರಸ್ತೆಯಲ್ಲಿ ಕುಳಿತು ಧರಣಿ ಮಾಡಿ, ಬರ ಪರಿಹಾರ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿರುವುದು ವಿಷಾದನೀಯ. ಸರ್ಕಾರ ನೀಡಿರುವ ₹2 ಸಾವಿರ ನಮಗೆ ಬೇಕಿಲ್ಲ. ಎಕರೆಗೆ ₹25 ಸಾವಿರ ಪರಿಹಾರ ನೀಡದೇ ನಾವು ಹೋರಾಟದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.

ಪ್ರಮುಖರಾದ ಮಲ್ಲಿಕಾರ್ಜುನ ಬಳ್ಳಾರಿ, ಮಾಲತೇಶ ಪೂಜಾರ, ಭುವನೇಶ್ವರ ಶಿಡ್ಲಾಪುರ, ದಿಳ್ಳೆಪ್ಪ ಕಂಬಳಿ, ಸುರೇಶ ಚಲವಾದಿ, ಕರಬಸಪ್ಪ ಅಗಸಿಬಾಗಿಲ, ಗಂಗಣ್ಣ ಎಲಿ, ಮರಿಗೌಡ ಪಾಟೀಲ, ಶಂಕರ ಶಿರಗಂಬಿ, ಪ್ರಭು ಪ್ಯಾಟಿ, ಶಿವಬಸಪ್ಪ ಗೋವಿ, ಸುರೇಶ ಹೊನ್ನಕ್ಕಳವರ, ಬಸವನಗೌಡ ಗಂಗಪ್ಪನವರ, ಸುರೇಶ ದುಳಿಹೊಳಿ, ರಮೇಶ ಕರಬಸಳ್ಳೇರ ಇತರರು ಇದ್ದರು. ಚಕ್ಕಡಿ, ಟ್ರ್ಯಾಕ್ಟರ್‌ ಮೂಲಕ ರೈತರು ಆಗಮಿಸಿದ್ದು ವಿಶೇಷವಾಗಿತ್ತು.

ಅಹೋರಾತ್ರಿ ಧರಣಿ:

ಹೊಸಮನಿ ಸಿದ್ಧಪ್ಪ ವೃತ್ತದಿಂದ ಜಿಲ್ಲಾಡಳಿತ ಭವನದ ವರೆಗೆ ಪಾದಯಾತ್ರೆ ಮೂಲಕ ತೆರಳಿದ ರೈತರು ಅಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದರು. ಸರ್ಕಾರ ಕೂಡಲೇ ಬರಪೀಡಿತ ಜಿಲ್ಲೆಯ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಬೆಳೆವಿಮೆ ನೀಡಬೇಕು. ರೈತರ ಹೊಸ ಪಂಪ್‌ಸೆಟ್‌ಗಳಿಗೆ ಕೂಡಲೇ ವಿದ್ಯುತ್ ನೀಡಬೇಕು. ಪ್ರತ್ಯೇಕ ಡಿಸಿಸಿ ಬ್ಯಾಕ್‌ ಆರಂಭಿಸಬೇಕು ಎಂಬುದೂ ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಸಬೇಕು. ಸರ್ಕಾರ ರೈತರಿಗೆ ಪರಿಹಾರ ನೀಡುವವರೆಗೂ ಜಿಲ್ಲಾಡಳಿತ ಭವನದ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಕೈಬಿಡುವುದಿಲ್ಲ ಎಂದು ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ