ಅನಿರೀಕ್ಷಿತ ದಾಳಿ ಎರಡು ಸ್ಕ್ಯಾನಿಂಗ್ ಸೆಂಟರ್ ಸೀಜ್

KannadaprabhaNewsNetwork | Published : Jan 24, 2024 2:05 AM

ಸಾರಾಂಶ

ಗರ್ಭಧಾರಣಾ ಮತ್ತು ಪ್ರಸವಪೂರ್ವ ಪತ್ತೆ ಕಾಯ್ದೆ ಉಲ್ಲಂಘನೆ ಬಯಲು ಮಾಡಲಾಗಿದ್ದು, ಅಲ್ಟ್ರಾಸೌಂಡ್ ಸೋನೋಗ್ರಫಿ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲಾ ಸಕ್ಷಮ ಪ್ರಾಧಿಕಾರ ಮತ್ತು ಜಿಲ್ಲಾ ತಪಾಸಣೆ ಮತ್ತು ಮೇಲ್ವಿಚಾರಣಾ ಸಮಿತಿಯ ತಂಡ ಅನಿರೀಕ್ಷಿತ ದಾಳಿ ನಡೆಸಿ, ಎರಡು ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಿ, ಅಲ್ಟ್ರಾಸೌಂಡ್ ಸೋನೋಗ್ರಫಿ ಯಂತ್ರಗಳನ್ನು ವಶಪಡಿಸಿಕೊಂಡಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾ ಸಕ್ಷಮ ಪ್ರಾಧಿಕಾರ ಮತ್ತು ಜಿಲ್ಲಾ ತಪಾಸಣೆ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಡಾ.ಡಿ.ಬಿ.ಪಟ್ಟಣಶೆಟ್ಟಿ, ಸದಸ್ಯರಾದ ಡಾ.ರುದ್ರೇಶ ಹಾಲವರ ಒಳಗೊಂಡ ತಂಡವು ಗರ್ಭಧಾರಣಾ ಮತ್ತು ಪ್ರಸವಪೂರ್ವ ಪತ್ತೆ ತಂತ್ರವಿಧಾನಗಳ (ಲಿಂಗ ಆಯ್ಕೆಯ ನಿಷೇಧ) ಅಧಿನಿಯಮ 1994ರ ಅನ್ವಯ ಜಿಲ್ಲೆಯ ನೋಂದಾಯಿತ ಹಲವು ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಅನಿರಿಕ್ಷೀತವಾಗಿ ಭೇಟಿ ನೀಡಿ ತಪಾಸಣೆ ಕೈಗೊಳ್ಳಲಾಯಿತು.

ಗಲಗಲಿ ಮತ್ತು ಮಹಾಲಿಂಗಪುರ ಸೇರಿ ಎರಡು ಸ್ಕ್ಯಾನಿಂಗ್ ಸೆಂಟರ್ ಮೇಲೆ ದಾಳಿ ನಡೆಸಿದಾಗ ಲಿಂಗ ಆಯ್ಕೆಯ ನಿಷೇಧ ಕಾಯ್ದೆ ಉಲ್ಲಂಘಿಸಿರುವುದು ಕಂಡುಬಂದಿದ್ದು, ಸ್ಕ್ಯಾನಿಂಗ್ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ಪಿ.ಸಿ & ಪಿ.ಎನ್.ಡಿ.ಟಿ. ಕಾಯ್ದೆಯಡಿ ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಲು ಮತ್ತು ಹೆಣ್ಣು ಮಕ್ಕಳ ಲಿಂಗಾನುಪಾತ ಹೆಚ್ಚಿಸುವುದು ಮತ್ತು ಹೆಣ್ಣು ಮಗುವಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಎಲ್ಲ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದು, ಹೆಣ್ಣು ಮಗುವನ್ನು ಸಮಾಜವು ನೋಡುವ ದೃಷ್ಟಿಕೋನವನ್ನು ಉತ್ತಮಪಡಿಸಲು ಪ್ರಾಮಾಣಿಕ ಮತ್ತು ಸಮಗ್ರ ಪ್ರಯತ್ನ ಮಾಡುತ್ತಾ ಬಂದಿದ್ದು, ಜಿಲ್ಲಾ ತಪಾಸಣೆ ಮತ್ತು ಮೇಲ್ವಿಚಾರಣೆ ತಂಡಗಳು ಜಿಲ್ಲೆಯ ನೋಂದಾಯಿತ ಸ್ಕ್ಯಾನಿಂಗ್ ಸೆಂಟರ್‌ ಗಳಿಗೆ ನಿರಂತರ ಭೇಟಿ ನೀಡಿ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಶಿಸ್ತುಕ್ರಮಕ್ಕೆ ಒಳಪಡಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಲು ಮತ್ತು ಹೆಣ್ಣು ಮಕ್ಕಳ ಲಿಂಗಾನುಪಾತ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹಾಗೂ ಅಕ್ರಮವಾಗಿ ಭ್ರೂಣಲಿಂಗ ಪತ್ತೆ ಮಾಡುವ ಅಥವಾ ಹತ್ಯೆ ಮಾಡುವ ವೈದ್ಯರ, ಸ್ಕ್ಯಾನಿಂಗ್ ಸೆಂಟರ್ ಗಳ, ಗರ್ಭಿಣಿಯರಿಗೆ ಒತ್ತಾಯಿಸುವ ಸಂಬಂಧಿಕರ ಬಗ್ಗೆ ಗೌಪ್ಯವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮಾಹಿತಿ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Share this article