ಲಕ್ಷ್ಮೇಶ್ವರ:ತಾಲೂಕಿನಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ರೈತರು ಕೈಯಲ್ಲಿ ಜೀವ ಹಿಡಿದುಕೊಂಡು ಬದುಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ತಾಲೂಕಿನ ಶಾಸಕ ಡಾ.ಚಂದ್ರು ಲಮಾಣಿ ಹಾಗೂ ಸಂಸದ ಶಿವಕುಮಾರ ಉದಾಸಿ ಅವರು ರೈತರಿಗೆ ಸಾಂತ್ವನ ಹೇಳುವ ಕಾರ್ಯ ಮಾಡುವ ಬದಲು ತಾಲೂಕಿನಿಂದ ಕಾಣೆಯಾಗಿದ್ದಾರೆ ಎಂದು ಪಕ್ಷಾತೀತ ರೈತಪರ ಹೋರಾಟ ವೇದಿಕೆಯ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಆರೋಪಿಸಿದರು. ಶನಿವಾರ ಹಾವಳಿ ಹನಮಪ್ಪನ ದೇವಸ್ಥಾನದಿಂದ ಶಾಸಕರು, ಸಂಸದರು ಕಾಣೆಯಾಗಿದ್ದಾರೆ ಎನ್ನುವ ಭಿತ್ತಿಪತ್ರ ಹಿಡಿದುಕೊಂಡು ಮೆರವಣಿಗೆಯ ಮೂಲಕ ಸಾಗಿ ಹೊಸ ಬಸ್ ನಿಲ್ದಾಣದ ಎದುರು ಮಾತನಾಡಿ, ನಂತರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.ಮುಂಗಾರು ಹಂಗಾಮಿನ ಮಳೆ ಇಲ್ಲದೆ ರೈತರ ಬಿತ್ತನೆ ಮಾಡಿದ ಬೆಳೆಗಳು ಒಣಗಿ ಹೋಗಿವೆ. ತಾಲೂಕಿನ ರೈತರು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಕೇಂದ್ರದ ಬರ ಅಧ್ಯಯನ ತಂಡ ತಾಲೂಕಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿರುವ ವೇಳೆ ತಾಲೂಕಿನ ಶಾಸಕರು ರೈತರ ಬಗ್ಗೆ ಕಾಳಜಿ ಇಲ್ಲದೆ ಬೇರೆ ಎಲ್ಲೋ ಹೋಗಿ ಕುಳಿತಿದ್ದಾರೆ. ತಾಲೂಕಿನ ರೈತರು ಕನ್ನಡ ಭಾಷೆಯಲ್ಲಿ ಅಧ್ಯಯನ ತಂಡದೊಂದಿಗೆ ಸಂವಹನ ನಡೆಸಲು ಹೋದರೆ ಅವರಿಗೆ ಕನ್ನಡ ಭಾಷೆಯ ಜ್ಞಾನ ಇಲ್ಲ. ರೈತರಿಗೆ ಆ ಭಾಷೆಗಳು ಗೊತ್ತಿಲ್ಲ. ಹೀಗಾಗಿ ಬರ ಅಧ್ಯಯನ ತಂಡದೊಂದಿಗೆ ತಮ್ಮ ಅಳಲನ್ನು ತೋಡಿಕೊಳ್ಳಲು ಸಾಧ್ಯವಾಗದೆ ಹೋಗಿದ್ದರಿಂದ ರೈತರು ನಿರಾಸೆಯಾಗಿದ್ದಾರೆ. ಬಹು ಭಾಷಾ ಪಂಡಿತರಾಗಿರುವ ಶಾಸಕರು ಈ ವೇಳೆ ಶಾಸಕರು ಇದ್ದು ಬರ ಅಧ್ಯಯನ ತಂಡಕ್ಕೆ ರೈತರ ಸಮಸ್ಯೆ ತಿಳಿಸಿಕೊಂಡು ಕಾರ್ಯ ಮಾಡಬಹುದಾಗಿತ್ತು. ಆದರೆ ಶಾಸಕರು ಇದ್ಯಾವುದನ್ನು ಮಾಡದೆ ರೈತ ವಿರೋಧಿ ಧೋರಣೆ ಅನುಸರಿಸುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರೈತರು ಮನಸ್ಸು ಮಾಡಿದರೆ ಶಾಸಕರಿಗೆ ಬುದ್ಧಿ ಕಲಿಸದೆ ಇರಲಾರರು ಎಂದು ಆರೋಪಿಸಿದರು. ಈ ವೇಳೆ ಶಿವಾನಂದ ಲಿಂಗಶೆಟ್ಟಿ, ಚನ್ನಪ್ಪ ಷಣ್ಮುಖಿ, ಖಾನಸಾಬ ಸೂರಣಗಿ ಸೇರಿದಂತೆ ಅನೇಕರು ಇದ್ದರು.