ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ಅಂಗಾಂಗ ಕಸಿಗಾಗಿ ರಕ್ತದ ಮಾದರಿ ನೀಡಲು ಬೆಂಗಳೂರಿಗೆ ಹೋಗಬೇಕಿತ್ತು.ಈಗ ಕಿಮ್ಸ್‌ನಲ್ಲಿಯೇ ಲಭ್ಯವಿದೆ. ಮೃತ ರೋಗಿಯ ಅಂಗಾಂಗ ದಾನ ಪಡೆಯುವ ವೇಳೆ ಅವರ ಕುಟುಂಬದವರು ಹೆಚ್ಚು ಸಮಯ ಕಳೆಯುವ ಅಗತ್ಯವಿಲ್ಲದಂತಾಗಿದೆ ಎಂದು ಮೂತ್ರಪಿಂಡ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೆಂಕಟೇಶ ಮೊಗೇರ ಹೇಳಿದರು. ಅವರು ಗುರುವಾರ ಇಲ್ಲಿನ ಕಿಮ್ಸ್‌ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸ್ಥಾಪಿತ ಟ್ರಾನ್ಸ್ ಪ್ಲಾಂಟ್ ಇಮ್ಯುನೊಲಜಿ ಲ್ಯಾಬ್‌ಗೆ ಸಂಬಂಧಿಸಿದಂತೆ ಕಿಮ್ಸ್ ಆಡಳಿತ ಮಂಡಳಿ ಹಾಗೂ ಬೆಂಗಳೂರು ಮೆಡಿಕಲ್ ಸರ್ವಿಸಸ್ ಟ್ರಸ್ಟ್ (ಬಿಎಂಎಸ್‌ಟಿ), ರೋಟರಿ ಕ್ಲಬ್ ಆಫ್ ಬೆಂಗಳೂರು ಮತ್ತು ಟಿಟಿಕೆ ಪ್ರೆಸ್ಟೀಜ್ ಮಧ್ಯೆ ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಂಡು ಮಾತನಾಡಿದರು. ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಕಿಮ್ಸ್ ಆವರಣದಲ್ಲಿ ಪ್ರಯೋಗಾಲಯ ಆರಂಭಿಸಿರುವುದು ಸಂತಸ ತಂದಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಇದು ಹೆಚ್ಚು ಉಪಯುಕ್ತವಾಗಲಿದೆ. ಪ್ರತಿ ತಿಂಗಳು 100-150 ಯೂನಿಟ್ ಸ್ಕ್ರೀನ್ಡ್ ರೆಡ್ ಸೆಲ್‌ಗಳನ್ನು ಒದಗಿಸುವ ಬೆಂಬಲ ಸಿಕ್ಕಿರುವುದಕ್ಕೆ ಹೆಮ್ಮೆಯಾಗಿದೆ ಎಂದರು. ಬಿಎಂಎಸ್‌ಟಿ ವೈದ್ಯಕೀಯ ನಿರ್ದೇಶಕಿ ಡಾ.ಲತಾ ಜಗನ್ನಾಥನ್ ಮಾತನಾಡಿ, ಕಿಮ್ಸ್ ವತಿಯಿಂದ ಲ್ಯಾಬ್‌ಗೆ ಉದಾರವಾಗಿ ಜಾಗ ನೀಡಿರುವುದು ಅಭಿನಂದನಾರ್ಹ. ಪ್ರತಿ ವರ್ಷ 1 ಲಕ್ಷ ರೋಗಿಗಳು ಇದರ ಉಪಯೋಗ ಪಡೆಯಲಿದ್ದಾರೆ ಎಂದರು. ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ, ಪ್ಯಾಥಾಲಜಿ ವಿಭಾಗದ ಡಾ. ಸುನೀತಾ ವೆರ್ಣೇಕರ, ಡಾ. ಕವಿತಾ, ಟಿಟಿಕೆ ಪ್ರೆಸ್ಟೀಜ್ ಚೇರ್‌ಮನ್ ಜಗನ್ನಾಥನ್, ಸಹಾಯಕ ಔಷಧ ನಿಯಂತ್ರಣಾಧಿಕಾರಿ ರಘುರಾಮ್, ನೀಲಕಂಠ ರಾಠೋಡ, ಬಿಎಂಎಸ್‌ಟಿ ಚೇರ್‌ಮನ್ ಕೆ.ಎನ್. ಪ್ರಭಾಕರ ಸೇರಿದಂತೆ ಹಲವರಿದ್ದರು.