12ರಿಂದ ಚಾರ್ಟರ್ಡ್ ಅಕೌಂಟೆಂಟ್‌ಗಳ ಪ್ರಾದೇಶಿಕ ಸಮ್ಮೇಳನ

KannadaprabhaNewsNetwork |  
Published : Oct 08, 2023, 12:00 AM IST
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಭಾರತೀಯ ಲೆಕ್ಕ ಪರಿಶೋಧಕರ ದಕ್ಷಿಣ ಪ್ರಾಂತೀಯ ಪರಿಷತ್ತಿನ ಅಧ್ಯಕ್ಷ ಸಿರಿಗೇರಿ ಪನ್ನರಾಜ್ ಅವರು ಹೊಸಪೇಟೆಯಲ್ಲಿ ಹಮ್ಮಿಕೊಂಡಿರುವ 55ನೇ ಪ್ರಾದೇಶಿಕ ಸಮ್ಮೇಳನ ಕುರಿತು ಮಾಹಿತಿ ನೀಡಿದರು.  | Kannada Prabha

ಸಾರಾಂಶ

"ಅರಿವಿನಿಂದ ವಿಕಾಸದೆಡೆಗೆ " ಘೋಷಣೆಯಡಿ ಸಮ್ಮೇಳನ ಸಂಘಟಿಸಲಾಗಿದೆ. ಬಳ್ಳಾರಿ ಶಾಖೆಯ ಆಶ್ರಯದಲ್ಲಿ ಸಮ್ಮೇಳನ ನಡೆಯಲಿದೆ. ದಕ್ಷಿಣಭಾರತದ ಮೂರು ಸಾವಿರಕ್ಕೂ ಹೆಚ್ಚು ಚಾರ್ಟರ್ಡ್ ಅಕೌಂಟೆಂಟ್‌ಗಳು ಭಾಗವಹಿಸಲಿದ್ದಾರೆ

ಕನ್ನಡಪ್ರಭ ವಾರ್ತೆ ಬಳ್ಳಾರಿ ಭಾರತೀಯ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಸಂಸ್ಥೆಯ(ಐಸಿಎಐ) ದಕ್ಷಿಣ ಭಾರತ ಪ್ರಾಂತೀಯ ಪರಿಷತ್ತಿನ(ಎಸ್ಐಆರ್‌ಸಿ) ವತಿಯಿಂದ ಅ.1 2 ಮತ್ತು 13ರಂದು ಹೊಸಪೇಟೆಯ ಬೈಪಾಸ್ ರಸ್ತೆಯ ನಂದಗೋಕುಲ ಲೇಔಟ್ ಎದುರುಗಿನ ಭಟ್ಟರ ಆಂಜನೇಯಸ್ವಾಮಿ ದೇವಸ್ಥಾನ ಬಳಿ 55ನೇ ಪ್ರಾದೇಶಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಲೆಕ್ಕ ಪರಿಶೋಧಕರ ದಕ್ಷಿಣ ಪ್ರಾಂತೀಯ ಪರಿಷತ್ತಿನ ಅಧ್ಯಕ್ಷ ಸಿರಿಗೇರಿ ಪನ್ನರಾಜ್ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಅರಿವಿನಿಂದ ವಿಕಾಸದೆಡೆಗೆ " ಘೋಷಣೆಯಡಿ ಸಮ್ಮೇಳನ ಸಂಘಟಿಸಲಾಗಿದೆ. ಬಳ್ಳಾರಿ ಶಾಖೆಯ ಆಶ್ರಯದಲ್ಲಿ ಸಮ್ಮೇಳನ ನಡೆಯಲಿದೆ. ದಕ್ಷಿಣಭಾರತದ ಮೂರು ಸಾವಿರಕ್ಕೂ ಹೆಚ್ಚು ಚಾರ್ಟರ್ಡ್ ಅಕೌಂಟೆಂಟ್‌ಗಳು ಭಾಗವಹಿಸಲಿದ್ದಾರೆ ಎಂದರು. ಅ. 12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನ ಉದ್ಘಾಟಿಸುವರು. ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್, ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಚಿವರಾದ ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ, ಐಸಿಎಐ ಅಧ್ಯಕ್ಷ ಅನಿಕೇತ್ ಎಸ್. ತಲಾಟೆ, ಉಪಾಧ್ಯಕ್ಷ ರಂಜಿತ್ ಅಗರವಾಲ್ ಭಾಗಹಿಸುವರು. ಹೊಸಪೇಟೆ ಶಾಸಕ ಗವಿಯಪ್ಪ ಅವರು ಅಧ್ಯಕ್ಷತೆ ವಹಿಸುವರು. ಬೆಳಗ್ಗೆಯಿಂದಲೇ ಸಮ್ಮೇಳನದ ಅಧಿವೇಶನಗಳು ಶುರುಗೊಳ್ಳುತ್ತವೆ. ಸಂಜೆಯವರೆಗೆ ಮುಂದುವರಿಯುತ್ತವೆ ಎಂದರು. ದಕ್ಷಿಣ ಭಾರತ ಪ್ರಾಂತೀಯ ಪರಿಷತ್ತಿನಿಂದ ಪ್ರತಿವರ್ಷ ಸಮ್ಮೇಳನ ಆಯೋಜಿಸಲಾಗುತ್ತದೆ. ಈ ಬಾರಿ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಆಯೋಜಿಸಲು ಅವಕಾಶ ಸಿಕ್ಕಿದೆ. ಬಳ್ಳಾರಿಯ ಶಾಖೆಯು ಇದರ ಜವಾಬ್ದಾರಿ ಹೊತ್ತುಕೊಂಡಿದೆ. ಸಮ್ಮೇಳನದಲ್ಲಿ 3 ಸಾವಿರ ಜನರು ಭಾಗವಹಿಸುವುದರ ಜತೆಗೆ ವರ್ಚವಲ್ ನಲ್ಲಿ ಏಳು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಜಿಎಸ್‌ಟಿ, ಫೆಮಾ, ಆದಾಯ ತೆರಿಗೆ, ಮಾಹಿತಿತಂತ್ರಜ್ಞಾನ, ಕಂಪನಿ ಕಾಯ್ದೆ, ನೇರ ತೆರಿಗೆ ಸೇರಿದಂತೆ ಇತರೆ ವಿಷಯಗಳ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುತ್ತದೆ. ದೇಶದ ವಿವಿಧೆಡೆಗಳಿಂದ ಆಗಮಿಸುವ ವಿಷಯ ತಜ್ಞರು ಉಪನ್ಯಾಸಗಳನ್ನು ನೀಡಲಿದ್ದಾರೆ. ಲೆಕ್ಕ ಪರಿಶೋಧಕರ ಸಂಘದ ಬಳ್ಳಾರಿ ಶಾಖೆಯ ಅಧ್ಯಕ್ಷ ಕೆ. ನಾಗನಗೌಡ, ಉಪಾಧ್ಯಕ್ಷ ವೆಂಕಟನಾರಾಯಣ, ಕಾರ್ಯದರ್ಶಿ ಪುರುಷೋತ್ತಮರೆಡ್ಡಿ ದಮ್ಮೂರು, ಖಜಾಂಚಿ ಕೆ.ವಿ. ಸ್ವಪ್ನಾಪ್ರಿಯಾ, ಡಿ. ಗಜರಾಜ್, ವಿಶ್ವನಾಥ್ ವಿ. ಆಚಾರ್ಯ, ರಾಜಶೇಖರ್, ಸಿದ್ಧರಾಮೇಶ್ವರಗೌಡ ಕರೂರು, ಭರತ್, ಎರಿಸ್ವಾಮಿ, ಹೊನ್ನೂರಸ್ವಾಮಿ, ಎಚ್.ಎಸ್. ಪ್ರಸನ್ನಕುಮಾರ್ ಹಂದ್ಯಾಳು, ಎಂ. ಲಕ್ಷ್ಮಿನಾರಾಯಣ, ಭರತ್ ಗುಪ್ತಾ, ಕಿರಣ್ ಕುಮಾರ್, ಜಗದೀಪ್ ಹಾಗೂ ಎಸ್ಐಆರ್‌ಸಿ ಕಾರ್ಯದರ್ಶಿ ಎ.ವಿ. ಅರುಣ್ ಸುದ್ದಿಗೋಷ್ಠಿಯಲ್ಲಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ