ಮೆಕ್ಕೆಜೋಳ ದರ ಕುಸಿತದಿಂದ ಸಂಕಷ್ಟದಲ್ಲಿರುವ ರೈತರು

KannadaprabhaNewsNetwork |  
Published : Nov 25, 2025, 02:15 AM IST
24ಎಚ್‌ವಿಆರ್2- | Kannada Prabha

ಸಾರಾಂಶ

ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅಧಿಕವಾಗಿ ಬೆಳೆಯುವ ಮೆಕ್ಕೆಜೋಳ ದರ ಕುಸಿತದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಅವರ ಆತಂಕ ನಿವಾರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮಕ್ಕೆ ಮುಂದಾಗಬೇಕು ಎಂದು ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ನಗರದ ಮೈಲಾರ ಮಹಾದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಹಾವೇರಿ: ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅಧಿಕವಾಗಿ ಬೆಳೆಯುವ ಮೆಕ್ಕೆಜೋಳ ದರ ಕುಸಿತದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಅವರ ಆತಂಕ ನಿವಾರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮಕ್ಕೆ ಮುಂದಾಗಬೇಕು ಎಂದು ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ನಗರದ ಮೈಲಾರ ಮಹಾದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.ಸಂಘಟನೆ ಜಿಲ್ಲಾಧ್ಯಕ್ಷ ರಾಮು ತಳವಾರ ಮಾತನಾಡಿ, ಗೋವಿನ ಜೋಳ ಬಹು ಉಪಯೋಗಿ ವಾಣಿಜ್ಯ ಬೆಳೆಯಾಗಿದೆ. ಇದನ್ನು ಪಶುಆಹಾರ, ಕೋಳಿ ಫಾರಂ, ಹಂದಿ ಸಾಕಾಣಿಕೆ ಹಾಗೂ ಎಥೆನಾಲ್ ತಯಾರಿಕೆ ಸೇರಿದಂತೆ ಅನೇಕ ಕಡೆಗಳಲ್ಲಿ ಉಪಯೋಗಿಸಲ್ಪಡುತ್ತದೆ. ಇಂತಹ ಬಹುಉಪಯೋಗಿ ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ 2400 ರು. ಎಂಎಸ್‌ಪಿ ಘೋಷಣೆ ಮಾಡಿದೆ. ಆದರೆ ಮಾರುಕಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 1600ರಿಂದ 1800 ರುಪಾಯಿಗೆ ಖರೀದಿಸಲಾಗುತ್ತಿದೆ. ಮಧ್ಯವರ್ತಿಗಳು ಕಡಿಮೆ ಬೆಲೆಗೆ ಖರೀದಿಸಿ ಸಂಗ್ರಹ ಮಾಡಿ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ರೈತರು ನಷ್ಟವನ್ನು ಅನುಭವಿಸುತ್ತಿದ್ದಾರೆ. ಅತಿವೃಷ್ಟಿಯಿಂದ ಮೊದಲೇ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಬರಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಮಾ ಪುರದ ಮಾತನಾಡಿ, ಕೇಂದ್ರ ಸರ್ಕಾರ ಕೂಡಲೆ ಖರೀದಿ ಕೇಂದ್ರಗಳನ್ನು ತೆರೆಯಬೇಕು, ಅಲ್ಲದೇ ರೈತರಿಗೆ ಪ್ರತಿ ಕ್ವಿಂಟಲ್‌ಗೆ 3 ಸಾವಿರ ರು. ದರ ನಿಗದಿ ಮಾಡಬೇಕು. ಆಗ ರೈತರು ತಮ್ಮ ವೆಚ್ಚವನ್ನು ಸರಿದೂಗಿಸಬಹುದು. ಕೂಡಲೇ ರಾಜ್ಯ ಸರ್ಕಾರ ಕೇಂದ್ರದ ದಾರಿಯನ್ನು ಕಾಯದೆ, ರೈತರ ಗೋವಿನಜೋಳ ಖರೀದಿಗೆ ಮುಂದಾಗಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಎಂ.ಕೆ. ತಿಮ್ಮಾಪುರ, ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ ದಾನಪ್ಪನವರ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ಹಬೀಬುಲ್ಲಾ ಮುಲ್ಲಾ, ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಕೋಲಕಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವಣ್ಣಯ್ಯ ಬಸಾಪುರ, ಪದಾಧಿಕಾರಿಗಳಾದ ಗೌರಮ್ಮ ಕುಲಕರ್ಣಿ, ಪ್ರೇಮಾ ಮುದಿಗೌಡ್ರ, ನಾಗರಾಜ ಯರಬಾಳ, ಉಮೇಶ ಮುದಿಗೌಡ್ರ, ಲೋಹಿತಾಶ್ವ ಓಲೇಕಾರ, ಪ್ರಕಾಶ ಅರಳಹಳ್ಳಿ, ಪ್ರವೀಣ ಕಾಗದ, ಶಿವಪ್ಪ ಬೆಳಲಕೊಪ್ಪ, ಎಸ್.ಎಸ್. ಭರಮಣ್ಣನವರ, ರೇಣುಕಾ ಗಡಿಯಣ್ಣನವರ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಮಂತ್ರಿ
ಮುಂಬೈ ಮೇಯರ್‌ ಹುದ್ದೆಗೆ ಶಿಂಧೆ ಲಡಾಯಿ?