ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕಾರ್ಖಾನೆ ರೈತರ ಆಶೋತ್ತರಗಳನ್ನು ಈಡೇರಿಸುವತ್ತ ಕೆಲಸ ಮಾಡುತ್ತಿದೆ. ತಾಲೂಕಿನ ರೈತರು ಹೆಚ್ಚು ಕಬ್ಬನ್ನು ಸರಬರಾಜು ಮಾಡಬೇಕು ಎಂದು ಕೋರಮಂಡಲ ಕಾರ್ಖಾನೆ ಹಿರಿಯ ಉಪಾಧ್ಯಕ್ಷ ವಿ.ಜಿ.ರವಿ ತಿಳಿಸಿದರು. ತಾಲೂಕಿನ ಮಾಕವಳ್ಳಿ ಬಳಿಯ ಕೋರಮಂಡಲ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಕಬ್ಬು ಕಟಾವಿಗೆ ಆಳುಗಳ ಕೊರತೆಯಾಗದಂತೆ ಕಾರ್ಖಾನೆ ಮುಂಗಡ ಹಣ ನೀಡಿ ಹೊರ ವ್ಯಾಪ್ತಿಯ ಹಾಗೂ ಸ್ಥಳೀಯ ಕಬ್ಬು ಕಟಾವು ಗುಂಪುಗಳ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದರು.ಕಳೆದ ಜು.12 ರಂದು ಬಾಯ್ಲರ್‌ಗೆ ಆಗ್ನಿಸ್ಪರ್ಶ ಮಾಡಲಾಗಿತ್ತು. ಜು.31ರ ನಂತರ ಕಬ್ಬುಅರೆಯಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ರಸಕ್ತವಾಗಿ 8 ಲಕ್ಷ ಟನ್ ಕಬ್ಬು ಅರೆಯುವ ಗುರಿ ಇದೆ. ಕೇವಲ 4.5 ಲಕ್ಷ ಟನ್ ಕಬ್ಬು ಮಾತ್ರ ಲಭ್ಯವಿದೆ. ಕಬ್ಬಿನ ಕೊರತೆ ನೀಗಿಸಲು ರೈತರು ಸಹಕಾರ ನೀಡಬೇಕು ಎಂದು ಕೋರಿದರು.
ಕಳೆದ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ಎಲ್ಲಾ ರೈತರಿಗೆ ಸರ್ಕಾರ ನಿಗಧಿಪಡಿಸಲಾಗಿದ್ದ ನ್ಯಾಯಯುತ ಮತ್ತು ಲಾಭದಾಯಕ ಪ್ರತಿ ಟನ್ ಗೆ 2944 ರು. ಗಳನ್ನು ಪೂರ್ತಿಯಾಗಿ ಸಕಾಲದಲ್ಲಿ ಪಾವತಿಸಲಾಗಿದೆ. ಪ್ರಸಕ್ತ ಸಾಲಿಗೆ ಕೇಂದ್ರ ಸರ್ಕಾರವು ನ್ಯಾಯಯುತ ಮತ್ತು ಲಾಭದಾಯಕ ಬೆಲೆಯಾಗಿ ನಮ್ಮ ಕಾರ್ಖಾನೆಗೆ 3154 ರು. ಗಳನ್ನು ನಿಗಧಿಮಾಡಿದೆ. ಕಬ್ಬು ಸರಬರಾಜು ಮಾಡಿದ 21 ದಿನಗಳೊಳಗೆ ರೈತರಿಗೆ ಹಣ ಪಾವತಿ ಮಾಡಲಾಗುತ್ತದೆ ಎಂದು ತಿಳಿಸಿದರು.ಕಬ್ಬು ವಿಭಾಗ ವ್ಯವಸ್ಥಾಪಕ ಬಾಬುರಾಜ್ ಮಾತನಾಡಿ, ತಾಲೂಕಿನಲ್ಲಿ ಉತ್ತಮ ಕಬ್ಬು ಬೆಳೆಗಾರರಿದ್ದು, ಎಕರೆಗೆ 125 ರಿಂದ 140 ಟನ್ ಇಳುವರಿ ಪಡೆದಿದ್ದಾರೆ. ರೈತರಿಗೆ ಕಬ್ಬಿನ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಬಡ್ಡಿರಹಿತವಾಗಿ ನೀಡಲಾಗುತ್ತಿದೆ. ಈ ಸಾಲಿನಲ್ಲಿ 8 ಲಕ್ಷ ಟನ್ ಕಬ್ಬನ್ನು ಆರೆಯಬೇಕಿದೆ ಎಂದರು.
ಕಬ್ಬಿನ ಪ್ರಮಾಣವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸುವ ಸಲುವಾಗಿ ಕಬ್ಬಿನ ಇಳುವರಿ ಹೆಚ್ಚಿಸಲು ಕಾರ್ಖಾನೆಯು ಅನೇಕ ಕಬ್ಬು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಕಬ್ಬು ಅಭಿವೃದ್ಧಿ ಕುರಿತು ರೈತರಿಗೆ ತಿಳುವಳಿಕೆಗೆ ಕರಪತ್ರವನ್ನು ನೀಡಲಾಗಿದೆ ಎಂದು ತಿಳಿಸಿದರು.ಇದಕ್ಕೂ ಮುನ್ನ ಶೃಂಗೇರಿ ಶಾರದಾಪೀಠದ ವಿದ್ಯಾಶಂಕರಶರ್ಮ ನೇತೃತ್ವದಲ್ಲಿ ದುರ್ಗಾಹೋಮ, ಗಣಹೋಮ ನಡೆಸಿ ಕಾರ್ಖಾನೆ ಹಿರಿಯ ಉಪಾಧ್ಯಕ್ಷ ವಿ.ಜೆ.ರವಿ ದಂಪತಿ ಕೇನ್ ಟ್ರೇಲರ್‌ಗೆ ಅಗ್ರ ಪೂಜೆಯನ್ನು ಸಲ್ಲಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಕಾರ್ಖಾನೆ ಹಿರಿಯ ಅಧಿಕಾರಿಗಳಾದ ಪಿ.ಎಸ್.ಮೇಯನ್, ಅಶೋಕ್ ಕುಮಾರ್, ಆರ್.ಇ.ಕುಮಾರ್, ಮೋಹನ್, ನವೀನ್, ರವಿಚಂದ್ರನ್, ವಕೀಲರಾದ ರವಿಶಂಕರ್, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುಮಾರ್, ಕಾಯಿ ಮಂಜೇಗೌಡ, ವಡಕಹಳ್ಳಿ ಮಂಜೇಗೌಡ, ರಾಮೇಗೌಡ, ಕೃಷ್ಣೇಗೌಡ ಹಾಗೂ ಕಾರ್ಖಾನೆ ಇತರೆ ಸಿಬ್ಬಂದಿ ವರ್ಗ ಮತ್ತು ನೂರಾರು ರೈತ ಬಾಂಧವರು, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಲಾರಿ ಹಾಗೂ ಟ್ರ್ಯಾಕ್ಟರ್ ಮಾಲೀಕರು ಸಂಘಗಳ ಪದಾಧಿಕಾರಿಗಳು ಹಾಗೂ ಕಬ್ಬು ವಿಭಾಗಗಳ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.