ಕನ್ನಡಪ್ರಭ ವಾರ್ತೆ, ಶೃಂಗೇರಿ
ಕುರುಬಗೇರಿ ಬಡಾವಣೆ, ಗಾಂಧಿ ಮೈದಾನದಿಂದ ಪ್ರವಾಹ ಇಳಿದಿತ್ತು. ಆದರೆ ಭಾರತೀ ಬೀದಿ ಕೆವಿಆರ್ ಸಂಪರ್ಕ ಬೈಪಾಸ್ ರಸ್ತೆ ಮೇಲೆ ಪ್ರವಾಹ ಇದ್ದು ಸಂಪರ್ಕ ಕಡಿತವಾಗಿತ್ತು. ವಿದ್ಯಾರಣ್ಯಪುರ ಶೃಂಗೇರಿ ಸಂಪರ್ಕ ರಸ್ತೆ ಮೇಲೆ ಪ್ರವಾಹ ಇತ್ತು. ಕೊಪ್ಪ ಶೃಂಗೇರಿ ಕಾವಡಿ ರಸ್ತೆ ಮೇಲಿದ್ದ ನೀರು ಇಳಿದಿತ್ತು. ಮಾಣಿಬೈಲು ಸಿರಿಮನೆ ಕಿಗ್ಗಾ ಸಂಪರ್ಕ ರಸ್ತೆ, ನೆಮ್ಮಾರು ಹೊಳೆಹದ್ದು ಸಂಪರ್ಕ ರಸ್ತೆ ಪ್ರವಾಹದಿಂದ ಮುಕ್ತವಾಗಿತ್ತು,
ಆದರೆ ತುಂಗಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ತುಂಗಾ ನದಿಯಲ್ಲಿ ಪ್ರವಾಹದ ಇನ್ನು ಎದುರಾಗಿದೆ. ಶ್ರೀ ಮಠದ ತುಂಗಾ ನದಿ ತೀರದ ಕಪ್ಪೆ ಶಂಕರ ದೇವಾಲಯ, ಸಂದ್ಯಾವಂದನ ಮಂಟಪ ಇನ್ನೂ ಜಲಾವೃತಗೊಂಡಿದೆ. ತುಂಗಾ ನದಿ ದಡದಲ್ಲಿರುವ ತಗ್ಗು ಪ್ರದೇಶಗಳು, ಹೊಲಗೆದ್ದೆಗಳು, ಅಡಕೆ ತೋಟಗಳು ಇನ್ನೂ ಜಲಾವೃತ ಗೊಂಡಿದೆ.ಇನ್ನೂ ಗಾಳಿ ಆರ್ಭಟವಿರುವುದರಿಂದ ಮರಗಳು ಧರೆಗುರುಳಿ ಬೀಳುತ್ತಿದ್ದುಪಟ್ಟಣ ಸಹಿತ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಗಲು ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದ್ದು, ಮೊಬೈಲ್ ಸಂಪರ್ಕ ಸ್ಥಗಿತವಾಗುತ್ತಿದೆ. ವಿದ್ಯುತ್ ಮೊಬೈಲ್ ಸಂಪರ್ಕ ಕಡಿತಗೊಳ್ಳುತ್ತಿರುವುದರಿಂದ ಅಗತ್ಯ ಕೆಲಸಗಳಿಗೆ ಜನರು ಪರದಾಡುವಂತಾಗಿದೆ.