ಸ್ವಂತ ವೆಚ್ಚದಲ್ಲಿ ಕಾಲುವೆ ಸ್ವಚ್ಛತೆಗೆ ಮುಂದಾದ ರೈತರು

KannadaprabhaNewsNetwork |  
Published : Sep 23, 2026, 02:30 AM IST
ಕುರುಗೋಡು 02 ಸಮೀಪದ ಸೋಮಲಾಪುರ ಕ್ರಾಸ್ಬಳಿ ಹರಿಯುವ ತುಂಗಭದ್ರಾ ಕೆಳಮಟ್ಟದ ಉಪ ವಿತರಣಾ ನಾಲೆಯನ್ನು ರೈತರು ಸ್ವಚ್ಛಗೊಳಿಸಿದರು | Kannada Prabha

ಸಾರಾಂಶ

ಕಾಲುವೆಯಲ್ಲಿ ಸಂಗ್ರಹವಾಗಿರುವ ಹೂಳು ಮತ್ತು ದಟ್ಟವಾಗಿ ಬೆಳೆದಿರುವ ಮುಳ್ಳಿನ ಗಿಡ ಕಾಲಕಾಲಕ್ಕೆ ತೆರುವುಗೊಳಿಸದೆ ಇಲಾಖೆ ನಿರ್ಲಕ್ಷ್ಯ ತೋರಿರುವುದು ಒಂದು ಸಮಸ್ಯೆ

ಕುರುಗೋಡು: ಕಾಲುವೆಯಲ್ಲಿ ಬೆಳೆದಿರುವ ಮುಳ್ಳಿನ ಗಿಡ ಮತ್ತು ಹೂಳನ್ನು ರೈತರು ಸ್ವಂತ ವೆಚ್ಚದಲ್ಲಿ ತೆರುವುಗೊಳಿಸಿ ಇಲಾಖೆ ಅಧಿಕಾರಿಯ ಗಮನ ಸೆಳೆದಿದ್ದಾರೆ.

ತಾಲೂಕಿನ ಸೋಮಲಾಪುರ ಕ್ರಾಸ್ ನಿಂದ ಓರ್ವಾಯಿ ಕ್ರಾಸ್‌ಗೆ ತೆರಳುವ ಮಾರ್ಗ ಮಧ್ಯ ಹರಿಯುವ ತುಂಗಭದ್ರಾ ಕೆಳಮಟ್ಟದ ಕಾಲುವೆಯ ಉಪ ವಿತರಣಾ ನಾಲೆ 16 ಕಿಮೀ ವ್ಯಾಪ್ತಿ ಹೊಂದಿದ್ದು ತಿಮ್ಮಣ್ಣ ಕ್ಯಾಂಪ್, ರಾಮಚಂದ್ರಾಪುರ ಕ್ಯಾಂಪ್, ನಾಗಾರ್ಜುನ ಕ್ಯಾಂಪ್ ಮತ್ತು ಸೂಗೂರು ಗ್ರಾಮಗಳ ಮೂರು ಸಾವಿರ ಎಕರೆ ಭೂಮಿ ಅಧಿಕೃತವಾಗಿ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದೆ.

ಕಾಲುವೆಯಲ್ಲಿ ಸಂಗ್ರಹವಾಗಿರುವ ಹೂಳು ಮತ್ತು ದಟ್ಟವಾಗಿ ಬೆಳೆದಿರುವ ಮುಳ್ಳಿನ ಗಿಡ ಕಾಲಕಾಲಕ್ಕೆ ತೆರುವುಗೊಳಿಸದೆ ಇಲಾಖೆ ನಿರ್ಲಕ್ಷ್ಯ ತೋರಿರುವುದು ಒಂದು ಸಮಸ್ಯೆಯಾದರೆ ಮೆಲ್ಬಾಗದ ರೈತರು ಅನಧಿಕೃತವಾಗಿ ನೀರು ಬಳಸಿಕೊಳ್ಳುತ್ತಿರುವುದು ಮತ್ತೊಂದು ಸಮಸ್ಯೆಯಾಗಿದ್ದು, ಅಚ್ಚುಕಟ್ಟು ಪ್ರದೇಶದ ಕೆಳಭಾಗದ ರೈತರು ನೀರಿನ ಬವಣೆ ಎದುರಿಸುವಂತಾಗಿದೆ. ಮಳೆಯಿಲ್ಲದೆ ಬರಗಾಲ ಆವರಿಸಿರುವ ಜತೆಗೆ ತೀವ್ರ ಬಿಸಿಲಿನ ತಾಪಕ್ಕೆ ಬೆಳೆದ ಬೆಳೆ ಭೂಮಿ ಬಿಟ್ಟು ಮೇಲಕ್ಕೇಳುತ್ತಿಲ್ಲ. ಸಂಕಷ್ಟ ಪರಿಸ್ಥಿತಿಯಿಂದ ಕಂಗಾಲಾಗಿರುವ ನಾವು ಅನಿವಾರ್ಯವಾಗಿ ಕಾಲುವೆ ಸ್ವಚ್ಛತೆಗೆ ಮುಂದಾಗಿದ್ದೇವೆ ಎಂದು ರೈತರು ಅಳಲು ತೋಡಿಕೊಂಡರು.

ಈ ಸಂದರ್ಭದಲ್ಲಿ ರೈತರಾದ ಶಿವರುದ್ರಗೌಡ, ನಾಗರಾಜ, ತಿರುಪತಿರಾವ್, ಶಿವಪ್ಪ, ರಾಜು, ಜಡೇಶ, ಕಾಸೀಂ ಸಾಬ್, ರುದ್ರಪ್ಪ, ಮೌಲಪ್ಪ, ಕೃಷ್ಣ ಮತ್ತು ಮಲ್ಲಪ್ಪ ಇದ್ದರು. ಕಾಲುವೆ ಸ್ವಚ್ಛತೆಗೆ ಅಧಿಕಾರಿಗಳು ಸ್ಪಂದಿಸಲಿಲ್ಲ. ರೈತರಿಂದ ₹1.5 ಲಕ್ಷ ಹಣ ಸಂಗ್ರಹಿಸಿ ಜೆಸಿಬಿ ಮತ್ತು ಟ್ರ್ಯಾಕ್ಟರ್ ಬಳಸಿ ಮೂರು ದಿನದಲ್ಲಿ ಕಾಲುವೆಯಲ್ಲಿನ ಹೂಳು ಮತ್ತು ಮುಳ್ಳಿನ ಗಿಡ ತೆರುವುಗೊಳಿಸಿದ್ದೇವೆ ಎಂದು ರೈತ ಶಿವರುದ್ರಗೌಡ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ ಬೀದಿಪಾಲು ಮಾಡುವ ಆದೇಶ ಕೈಬಿಡಲು ಒತ್ತಾಯ
ಬಡವರ ಒಕ್ಕಲೆಬ್ಬಿಸಲು ಹುನ್ನಾರ: ತಿಮ್ಮಪ್ಪ ಎಂ.ಕೆ.