ರಸ್ತೆ ನಿರ್ಮಾಣ ಮಾಡದ ರೈಲ್ವೆ ಇಲಾಖೆಗೆ ಪಾಠ ಕಲಿಸಿದ ರೈತರು!

KannadaprabhaNewsNetwork |  
Published : Apr 16, 2026, 02:30 AM IST
ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ಗ್ರಾಮದ ರೈತರು ಕಚ್ಚಾ ರಸ್ತೆ ನಿರ್ಮಿಸಿದರು. | Kannada Prabha

ಸಾರಾಂಶ

ರೈತ ಸಂಘದ ನೇತೃತ್ವದಲ್ಲಿ ಮೋಟೆಬೆನ್ನೂರಿನ ನೂರಾರು ರೈತರು ಟ್ರ್ಯಾಕ್ಟರ್‌ಗಳೊಂದಿಗೆ ತೆರಳಿ ಕಚ್ಚಾ ರಸ್ತೆ ನಿರ್ಮಿಸುವ ಮೂಲಕ ರೈಲ್ವೆ ಇಲಾಖೆ, ತಾಲೂಕು ಆಡಳಿತಕ್ಕೆ ಸಡ್ಡು ಹೊಡೆದಿದ್ದಾರೆ.

ಬ್ಯಾಡಗಿ: ವಹಿವಾಟು ನಡೆಸುತ್ತಿದ್ದ ಜಾಗದಲ್ಲಿ ರಸ್ತೆ ನಿರ್ಮಿಸುವ ಕುರಿತು ನಿರ್ಲಕ್ಷ್ಯ ತೋರಿದ ರೈಲ್ವೆ ಇಲಾಖೆ ವಿರುದ್ಧ ತೊಡೆ ತಟ್ಟಿದ್ದ ರೈತರು ತಾವೇ ರಸ್ತೆ ನಿರ್ಮಿಸಿಕೊಂಡಿದ್ದಾರೆ.

ರೈತ ಸಂಘದ ನೇತೃತ್ವದಲ್ಲಿ ಮೋಟೆಬೆನ್ನೂರಿನ ನೂರಾರು ರೈತರು ಟ್ರ್ಯಾಕ್ಟರ್‌ಗಳೊಂದಿಗೆ ತೆರಳಿ ಕಚ್ಚಾ ರಸ್ತೆ ನಿರ್ಮಿಸುವ ಮೂಲಕ ರೈಲ್ವೆ ಇಲಾಖೆ, ತಾಲೂಕು ಆಡಳಿತಕ್ಕೆ ಸಡ್ಡು ಹೊಡೆದಿದ್ದಾರೆ.

ನೂರು ವರ್ಷಗಳಿಂದ ವಹಿವಾಟು ನಡೆಸಿಕೊಂಡು ಬಂದಿದ್ದ ಈ ರಸ್ತೆಯನ್ನು ಇತ್ತೀಚೆಗೆ ರೈಲ್ವೆ ಇಲಾಖೆಯ ದ್ವಿಪಥ ಹಳಿ ನಿರ್ಮಿಸುವ ಹಿನ್ನೆಲೆಯಲ್ಲಿ ಹಾಳುಮಾಡಿದೆ. ಅದನ್ನು ಪ್ರಶ್ನಿಸಿದ ರೈತರಿಗೆ ಆ ಜಾಗ ತಮ್ಮ ನಿಯಂತ್ರಣದಲ್ಲಿದೆ ಎಂದು ಹೇಳಿದೆ, ಅಲ್ಲದೇ ರೈತರ ಕೃಷಿ ಚಟುವಟಿಕೆಗೆ ಅಡ್ಡಿಪಡಿಸಿತ್ತು.

ಏ. 15ರೊಳಗೆ ರಸ್ತೆ ನಿರ್ಮಿಸಿಕೊಡುವಂತೆ ರೈತರು ಬಿಗಿಪಟ್ಟು ಹಿಡಿದಿದ್ದರು. ತಾಲೂಕಾಡಳಿತ, ಜಿಲ್ಲಾಧಿಕಾರಿ, ರೈಲ್ವೆ ಅಧಿಕಾರಿಗಳು ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ರೈಲ್ವೆ ಇಲಾಖೆಗೆ ರೈತರು ಗಡುವು ನೀಡಿದ್ದರು. ಅಧಿಕಾರಿಗಳ ಉದಾಸೀನತೆಗೆ ಬೇಸತ್ತ ಮೋಟೆಬೆನ್ನೂರ ರೈತರು ಗಡುವು ಮುಗಿದ ಆನಂತರ ಮೋಟೆಬೆನ್ನೂರಿನಿಂದ ರೈಲ್ವೆ ಹಳಿಯನ್ನು ದಾಟಿ ಖುರ್ದಕೋಡಿಹಳ್ಳಿ ರಸ್ತೆಯಲ್ಲಿ ಮಣ್ಣು ಹಾಕಿದ್ದಾರೆ.

ಜಾಗ ಕೊಟ್ಟ ರೈತರಿಗೇ ರಸ್ತೆಯಿಲ್ಲ: 100ಕ್ಕೂ ಅಧಿಕ ವರ್ಷಗಳ ಹಿಂದೆ ರೈತರು ರೈಲ್ವೆ ನಿರ್ಮಾಣಕ್ಕೆ ತಮ್ಮ ಜಮೀನು ನೀಡಿದ್ದರು. ರೈಲ್ವೆ ಹಳಿಯ ಎಡ-ಬಲ ಭಾಗದಲ್ಲಿರುವ ಹೊಲಗಳಿಗೆ ಹೋಗುವ ರಸ್ತೆ ಹಾಗೂ ತಗ್ಗು-ಗುಂಡಿಗಳಿಂದ ತುಂಬಿದ್ದು, ವಾಹನ ಸಂಚಾರಕ್ಕೆ ಅಸಾಧ್ಯವಾಗಿತ್ತು. ಇವೆಲ್ಲದರ ನಡುವೆ ನಿಮ್ಮದೇ ಜಾಗದಲ್ಲಿ ಓಡಾಡುತ್ತೇವೆ, ರಸ್ತೆ ನಿರ್ಮಿಸಿಕೊಡುವಂತೆ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದರು. ಅಧಿಕಾರಿಗಳು ಉದಾಸಿನತೆ ತೋರಿದ್ದರಿಂದ ಬೇಸತ್ತು ತಾವೇ ಕಚ್ಚಾ ರಸ್ತೆ ನಿರ್ಮಿಸಿಕೊಳ್ಳುವ ಮೂಲಕ ತಕ್ಕಪಾಠ ಕಲಿಸಿದರು.

ನಾಚಿಕೆಗೇಡಿನ ಸಂಗತಿ: ನಮ್ಮನ್ನಾಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ರೈತರ ಬೇಡಿಕೆ ಈಡೇರಿಸುವ ತಾಕತ್ತಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಜನಸ್ನೇಹಿ ಆಡಳಿತ ವ್ಯವಸ್ಥೆ ಜನರ ಪಾಲಿಗೆ ಗಗನ ಕುಸುಮವಾಗಿದೆ. ರೈತರೆ ರಸ್ತೆ ನಿರ್ಮಿಸಿದ ಘಟನೆ ಸರ್ಕಾರಗಳಿಗೆ ನಾಚಿಕೆಗೇಡಿನ ಸಂಗತಿ ಎಂದು ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.ರಸ್ತೆ ನಿರ್ಮಾಣ ಮಾಡಲು ಸಹ ಆಗದಿರುವ ಸ್ಥಿತಿಗೆ ಸರ್ಕಾರಗಳು ಬಂದು ತಲುಪಿವೆ ಎಂಬುದು ನಾಚಿಗೇಡಿನ ಸಂಗತಿ. ರೈತರನ್ನು ಕಡೆಗಣಿಸಿರುವ ಸರ್ಕಾರಗಳಿಗೆ ಅಧಿಕಾರದಲ್ಲಿ ಉಳಿದ ಇತಿಹಾಸವಿಲ್ಲ ಎಂದು ಜಿಲ್ಲಾಧ್ಯಕ್ಷ ರಾಮಣ್ಣ ಕೇಂಚಳ್ಳೇರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲೆ, ಸಂಸ್ಕೃತಿ ಉಳಿಸುವ ಜವಾಬ್ದಾರಿ ನಮ್ಮದು: ಚಂದ್ರಶೇಖರ ನರಸಿಂಹ ಹೆಗಡೆ
ಕಾಟಾಚಾರಕ್ಕೆ ಮರುಪರಿಶೀಲನೆ ಪ್ರಕ್ರಿಯೆ: ಡಾ. ನಾಗೇಶ ನಾಯ್ಕ ಕಾಗಾಲ ಆರೋಪ