ಗ್ರಾಮೀಣ ಕುಡಿಯುವ ನೀರಿಗೆ ಖಾಸಗಿ ಕೊಳವೆಬಾವಿ ಬಾಡಿಗೆಗೆ

KannadaprabhaNewsNetwork |  
Published : Apr 16, 2026, 02:30 AM IST
ಹಾನಗಲ್ಲಿನಲ್ಲಿ ವಿವಿಧ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಕುಡಿಯುವ ನೀರಿನ ಕುರಿತು ಸಭೆ ನಡೆಯಿತು. | Kannada Prabha

ಸಾರಾಂಶ

ಗ್ರಾಮೀಣ ಕುಡಿಯುವ ನೀರಿಗಾಗಿ ಖಾಸಗಿ ಕೊಳವೆಬಾವಿಗಳತ್ತ ಮುಖ ಮಾಡಿರುವ ಗ್ರಾಮ ಪಂಚಾಯಿತಿಗಳು ಈಗಾಗಲೇ ಹಾನಗಲ್ಲ ತಾಲೂಕಿನಲ್ಲಿ ೮ ಗ್ರಾಮ ಪಂಚಾಯಿತಿಗಳ ೧೦ ಗ್ರಾಮಗಳಿಗೆ ೧೧ ಕೊಳವೆಬಾವಿಗಳನ್ನು ಕುಡಿಯುವ ನೀರಿಗಾಗಿ ಬಾಡಿಗೆಯಾಗಿ ಪಡೆದಿವೆ.

ಹಾನಗಲ್ಲ: ಗ್ರಾಮೀಣ ಕುಡಿಯುವ ನೀರಿಗಾಗಿ ಖಾಸಗಿ ಕೊಳವೆಬಾವಿಗಳತ್ತ ಮುಖ ಮಾಡಿರುವ ಗ್ರಾಮ ಪಂಚಾಯಿತಿಗಳು ಈಗಾಗಲೇ ಹಾನಗಲ್ಲ ತಾಲೂಕಿನಲ್ಲಿ ೮ ಗ್ರಾಮ ಪಂಚಾಯಿತಿಗಳ ೧೦ ಗ್ರಾಮಗಳಿಗೆ ೧೧ ಕೊಳವೆಬಾವಿಗಳನ್ನು ಕುಡಿಯುವ ನೀರಿಗಾಗಿ ಬಾಡಿಗೆಯಾಗಿ ಪಡೆದಿವೆ.

ಹಾನಗಲ್ಲ ತಾಲೂಕಿನಲ್ಲಿ ೧೬೬ ಗ್ರಾಮಗಳು, ೪೨ ಗ್ರಾಮ ಪಂಚಾಯಿತಿಗಳಿವೆ. ಅಂತರ್ಜಲ ಕೊರತೆಯಿಂದ ಪ್ರತಿ ವರ್ಷ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯುವ ಅನಿವಾರ್ಯತೆ ಇದ್ದೇ ಇದೆ. ಪ್ರಸ್ತುತ ವರ್ಷ ಹುಲಗಿನಕೊಪ್ಪ, ಗಿರಿಸಿನಕೊಪ್ಪ, ಗುರುರಾಯಪಟ್ಟಣ, ಶಂಕ್ರಕೊಪ್ಪ, ಗೊಂದಿ, ಹಿರೇಕಾಂಸಿ, ನರೇಗಲ್ಲ, ಚಿಕ್ಕೇರಿಹೊಸಳ್ಳಿ, ಹೊಂಕಣ, ಬೊಮ್ಮನಹಳ್ಳಿ ಹೀಗೆ ೧೦ ಗ್ರಾಮಗಳಿಗೆ ಮಾರ್ಚ್‌ ತಿಂಗಳ ಮೊದಲ ವಾರದಿಂದಲೇ ಆದ್ಯತೆ ಮೇರೆಗೆ ಕೊಳವೆಬಾವಿಗಳನ್ನು ರೈತರಿಂದ ಬಾಡಿಗೆ ಪಡೆಯಲಾಗಿದೆ.

ಮುಂಗಾರು ಮಳೆ ಹೀಗೇ ತಡವಾದರೆ ನೆಲ್ಲೀಬೀಡ, ಬಿಂಗಾಪುರ, ರಾಮತೀರ್ಥ ಹೊಸಕೊಪ್ಪ, ಗುಡ್ಡದಮತ್ತಿಹಳ್ಳಿ, ಸೋಮಸಾಗರ ಸೇರಿದಂತೆ ೧೯ ಗ್ರಾಮಗಳಿಗೆ ನೀರಿನ ಕೊರತೆಯ ಸಾಧ್ಯತೆಯನ್ನು ಲೆಕ್ಕಹಾಕಲಾಗಿದೆ. ಈಗಾಗಲೇ ತಾಲೂಕಿನಲ್ಲಿರುವ ಚಿಕ್ಕಾಂಸಿಹೊಸೂರು, ಕೂಸನೂರು, ಉಪ್ಪಣಸಿ, ಕೂಡಲದಲ್ಲಿರುವ ೪ ಬಹುಗ್ರಾಮ ಕುಡಿಯುವ ನೀರಿನ ಘಟಕಗಳಲ್ಲಿ ತಾಂತ್ರಿಕ ಕಾರಣಕ್ಕೆ ಕೂಸನೂರ ಹಾಗೂ ಕೂಡಲ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ.

ನೆಲ್ಲಿಬೀಡದಲ್ಲಿ ಬಾಡಿಗೆ ತೆಗೆದುಕೊಂಡ ಕೊಳವೆಬಾವಿಯಲ್ಲೂ ನೀರು ಖಾಲಿಯಾಗಿದೆ. ಪರ್ಯಾಯ ವ್ಯವಸ್ಥೆಗೆ ಅಧಿಕಾರಿಗಳು ಹರಸಾಹಸಕ್ಕೆ ಮುಂದಾಗಿದ್ದಾರೆ. ಬಾದಮಗಟ್ಟಿಯಲ್ಲಿ ಕೊಳವೆಬಾವಿಯಿಂದ ಶುದ್ಧ ನೀರು ಬರುತ್ತಿಲ್ಲ. ಇಂತಹ ಕೊಳವೆಬಾವಿಗಳಿಂದ ನೀರು ಪೂರೈಕೆ ನಿಲ್ಲಿಸಿ, ಬೇರೆ ಕೊಳವೆಬಾವಿಗಳಿಗೆ ಶೋಧ ನಡೆದಿದೆ. ಸದ್ಯಕ್ಕೆ ಹೊಸ ಕೊಳವೆಬಾವಿ ಕೊರೆಯುವ ಯೋಜನೆ ಇಲ್ಲ ಎನ್ನಲಾಗಿದ್ದು, ಅನಿವಾರ್ಯವಾದರೆ ಜಿಲ್ಲಾಧಿಕಾರಿ ಪರವಾನಗಿ ಪಡೆದು ಹೊಸ ಕೊಳವೆಬಾವಿಗಳನ್ನು ಕೊರೆಯುವ ಯೋಚನೆ ಮಾಡಬಹುದಾಗಿದೆ. ಎಲ್ಲಿಯೂ ಟ್ಯಾಂಕರ್ ಮೂಲಕ ನೀರು ಹರಿಸುವ ಪರಿಸ್ಥಿತಿ ನಿರ್ಮಾಣವಾಗಿಲ್ಲ.

ಬುಧವಾರ ತಹಸೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ನಡೆದ ಕುಡಿಯುವ ನೀರು ನಿರ್ವಹಣಾ ಯೋಜನಾ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ೪೨ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆಯ ಗ್ರಾಮಾಡಳಿತಾಧಿಕಾರಿಗಳ ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚಿಸಲಾಯಿತು.

ಏನೇ ಆದರೂ ಕುಡಿಯುವ ನೀರಿಗೆ ಕೊರೆಯಾಗದಂತೆ ಕಾಳಜಿವಹಿಸಬೇಕು. ನೀರಿನ ಕೊರತೆ ಇರುವ ಗ್ರಾಮಗಳಲ್ಲಿ ಮದುವೆ ಸೇರಿದಂತೆ ವಿವಿಧ ಮಂಗಳಕಾರ್ಯಗಳಿಗೆ ಖಾಸಗಿಯಾಗಿಯೇ ನೀರು ಪೂರೈಕೆಗೆ ಸೂಚಿಸಬೇಕು. ಪ್ರತಿ ಮನೆಯ ನಳಗಳಿಂದ ನೀರು ಪೋಲಾಗದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಂಚಾಯಿತಿ ಸಿಬ್ಬಂದಿಯ ಮೂಲಕ ನಿಗಾ ಇಡಬೇಕು. ಎಲ್ಲ ಗ್ರಾಮ ಪಂಚಾಯಿತಿಗಳು ಲಭ್ಯ ಇರುವ ಅನುದಾನದಲ್ಲಿ ಕುಡಿಯುವ ನೀರಿಗಾಗಿ ಹಣ ಕಾದಿರಿಸಬೇಕು. ಎಲ್ಲಿಯೇ ಕುಡಿಯುವ ನೀರಿನ ಸಮಸ್ಯೆಯಾದರೆ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ನೀರಿನ ಮಿತ ಬಳಕೆಗೆ ಡಂಗುರ ಸಾರಿಸಿ ಜಾಗೃತಿ ಮೂಡಿಸಬೇಕು. ಜನ-ಜಾನುವಾರುಗಳಿಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯಕ್ಕೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು.

ದೊಡ್ಡ ತಾಲೂಕಿಗೆ ಕುಡಿಯುವ ನೀರಿನ ದೊಡ್ಡ ಸಮಸ್ಯೆ ಉಂಟಾಗುವ ಮೊದಲು ಪೂರ್ವಭಾವಿ ಯೋಜನೆ ರೂಪಿಸಿಕೊಂಡು ಕಾರ್ಯರೂಪಕ್ಕೆ ತರುವ ತೀರ ಅಗತ್ಯವಿದೆ. ಇದಕ್ಕಾಗಿ ಅನುದಾನದ ಕೊರತೆಯೂ ಇಲ್ಲ. ಸಕಾಲಿಕವಾದ ನಿರ್ವಹಣೆಯೇ ಅತ್ಯಂತ ಮುಖ್ಯ ಎನ್ನಲಾಗಿದೆ.

ಗ್ರೇಡ್-೨ ತಹಸೀಲ್ದಾರ್‌ ವಿಠ್ಠಲ ಚೌಗುಲಾ, ನೂತನ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ನೆಗಳೂರ, ಪರಶುರಾಮ ಪೂಜಾರ, ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಹಾಗೂ ವಿವಿಧ ಅಧಿಕಾರಿಗಳು ಸಭೆಯಲ್ಲಿ ಚರ್ಚಿಸಿ, ನೀರಿನ ಸಮಸ್ಯೆಯಾಗದಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಲು ನಿರ್ಣಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲೆ, ಸಂಸ್ಕೃತಿ ಉಳಿಸುವ ಜವಾಬ್ದಾರಿ ನಮ್ಮದು: ಚಂದ್ರಶೇಖರ ನರಸಿಂಹ ಹೆಗಡೆ
ಕಾಟಾಚಾರಕ್ಕೆ ಮರುಪರಿಶೀಲನೆ ಪ್ರಕ್ರಿಯೆ: ಡಾ. ನಾಗೇಶ ನಾಯ್ಕ ಕಾಗಾಲ ಆರೋಪ