ಅಗರ, ಮದ್ದೂರು ಕೆರೆಗಳಿಂದ 2 ಬೆಳೆಗೆ ನೀರು: ಎಂಬಿಪಾ

KannadaprabhaNewsNetwork |  
Published : May 22, 2026, 02:00 AM IST
ಕೊಳ್ಳೇಗಾಲ ತಾಲ್ಲೂಕಿನ ಅಗರ ಮತ್ತು ಮದ್ದೂರು ಕೆರೆಗಳ  | Kannada Prabha

ಸಾರಾಂಶ

ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಕಾವೇರಿ ನದಿ ನೀರು ಒದಗಿಸಲು ಕೊಳ್ಳೇಗಾಲ ತಾಲೂಕಿನ ಅಗರ ಮತ್ತು ಮದ್ದೂರು ಕೆರೆಗಳ ಸಾಮರ್ಥ್ಯವನ್ನು ಹೆಚ್ಚು ಮಾಡಿ, ಅಲ್ಲಿಂದ ಪಂಪ್ ಮಾಡಲು ಯೋಜನೆ ರೂಪಿಸಿದ್ದು, ಇದರಿಂದ ಹಾಲಿ ಒಂದು ಬೆಳೆ ಬೆಳೆಯುತ್ತಿರುವ ಅಚ್ಚುಕಟ್ಟು ಪ್ರದೇಶದ ರೈತರು ಮುಂದಿನ ದಿನಗಳಲ್ಲಿ ವರ್ಷಕ್ಕೆ ಎರಡು ಬೆಳೆ ಬೆಳೆಯಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಹೇಳಿದರು.

ಬೆಂಗಳೂರಿನ ಕೈಗಾರಿಕೆಗೆ ಕೆರೆಗಳಿಂದ ನೀರು । ಕೆರೆಗಳ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ । ಇದರಿಂದ ರೈತರಿಗೆ ಅಧಿಕ ಲಾಭ: ಸಚಿವ

---

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಕಾವೇರಿ ನದಿ ನೀರು ಒದಗಿಸಲು ಕೊಳ್ಳೇಗಾಲ ತಾಲೂಕಿನ ಅಗರ ಮತ್ತು ಮದ್ದೂರು ಕೆರೆಗಳ ಸಾಮರ್ಥ್ಯವನ್ನು ಹೆಚ್ಚು ಮಾಡಿ, ಅಲ್ಲಿಂದ ಪಂಪ್ ಮಾಡಲು ಯೋಜನೆ ರೂಪಿಸಿದ್ದು, ಇದರಿಂದ ಹಾಲಿ ಒಂದು ಬೆಳೆ ಬೆಳೆಯುತ್ತಿರುವ ಅಚ್ಚುಕಟ್ಟು ಪ್ರದೇಶದ ರೈತರು ಮುಂದಿನ ದಿನಗಳಲ್ಲಿ ವರ್ಷಕ್ಕೆ ಎರಡು ಬೆಳೆ ಬೆಳೆಯಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಹೇಳಿದರು.

ಈ ಸಂಬಂಧವಾಗಿ ಬೆಂಗಳೂರಿನ ಖನಿಜ ಭವನದಲ್ಲಿ ಬುಧವಾರ ತಮ್ಮನ್ನು ಭೇಟಿಯಾದ ಕೊಳ್ಳೇಗಾಲ ಶಾಸಕ ಎ.ಆರ್‌. ಕೃಷ್ಣಮೂರ್ತಿ ಅವರೊಂದಿಗೆ ಸಚಿವರು ವಿಚಾರ ವಿನಿಮಯ ನಡೆಸಿ, ಸಂಶಯ ಬಗೆಹರಿಸಿದ್ದಾರೆ. ಅಲ್ಲದೇ, ಆದಷ್ಟು ಬೇಗನೆ ಈ ಬಗ್ಗೆ ರೈತರ ಸಭೆಯನ್ನೂ ಏರ್ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸಚಿವರು, ‘ಕಾವೇರಿ ನ್ಯಾಯಮಂಡಳಿ ಕೈಗಾರಿಕಾ ಉದ್ದೇಶಕ್ಕೆ ೪ ಟಿಎಂಸಿ ನೀರು ಮೀಸಲಿಟ್ಟಿದೆ. ಅದರಲ್ಲಿ ಸದ್ಯ ೧.೩೭ ಟಿಎಂಸಿ ನೀರು ಬಳಕೆ ಮಾಡಲಾಗುತ್ತಿದೆ. ಉಳಿದ ೨.೬೩ ಟಿಎಂಸಿ ಅಡಿ ಪೈಕಿ ೨.೫ ಟಿಎಂಸಿ ಅಡಿ ನೀರನ್ನು ಬೆಂಗಳೂರಿನ ಕೈಗಾರಿಕಾ ಪ್ರದೇಶಗಳಿಗೆ ಪಂಪ್ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.

ಕೃಷಿಗೆ ಮೀಸಲಿಟ್ಟಿರುವ ಕಾವೇರಿ ನೀರನ್ನು ಬಳಸುತ್ತಿಲ್ಲ. ಬದಲಿಗೆ ಕೈಗಾರಿಕೆ ಸಲುವಾಗಿ ಮೀಸಲಿಟ್ಟಿರುವ ನೀರನ್ನು ಬಳಸುತ್ತಿದ್ದು, ಮಳೆಗಾಲದಲ್ಲಿ ೧೨೦ ದಿನ ನೇರವಾಗಿ ಕಾವೇರಿ ನದಿಯಿಂದಲೇ ನೀರನ್ನು ಪಂಪ್ ಮಾಡಲಾಗುವುದು. ಉಳಿದ ದಿನಗಳಲ್ಲಿ ಈ ಕೆರೆಗಳಿಂದ ನೀರು ಪಂಪ್ ಮಾಡಲಾಗುವುದು. ಈ ಸಲುವಾಗಿ ಈ ಕೆರೆಗಳ ನೀರಿನ ಸಾಮರ್ಥ್ಯವನ್ನು ಹತ್ತುಪಟ್ಟು ಹೆಚ್ವಿಸಲಾಗುವುದು. ಇದರಿಂದ ರೈತರಿಗೂ ಅನುಕೂಲವಾಗಲಿದೆ ಎಂದರು.

ಅಗರ ಮತ್ತು ಮದ್ದೂರು ಕೆರೆಗಳ ಸಾಮರ್ಥ್ಯ ಈಗ ಕ್ರಮವಾಗಿ ೦.೧೫೬ ಮತ್ತು ೦.೧೧೧ ಟಿಎಂಸಿ ಅಡಿ ಇದೆ. ಇದನ್ನು ೧.೧೫೬ ಮತ್ತು ೧.೧೧೨ ಟಿಎಂಸಿ ಅಡಿಗೆ ಹೆಚ್ಚಿಸಲಾಗುವುದು. ಇಲ್ಲಿ ಕೆರೆಗಳ ಆಳವನ್ನು ಜಾಸ್ತಿ ಮಾಡಲಾಗುವುದೇ ವಿನಾ ಹೊಸ ಜಮೀನಿನ ಸ್ವಾಧೀನವೇನೂ ಇರುವುದಿಲ್ಲ. ಈ ಯೋಜನೆಯಿಂದ ಕೆರೆಗಳ ಅಚ್ಚುಕಟ್ಟು ವ್ಯಾಪ್ತಿಯಲ್ಲಿನ ರೈತರಿಗೆ ಯಾವ ತೊಂದರೆಯೂ ಇಲ್ಲ. ಈಗ ಅವರಿಗೆಲ್ಲ ವರ್ಷಕ್ಕೆ ಒಂದು ಬೆಳೆಗೆ ನೀರು ಕೊಡಲಾಗುತ್ತಿದೆ. ಆದರೆ, ಯೋಜನೆ ಮುಗಿದ ನಂತರ ಅಚ್ಚುಕಟ್ಟು ಪ್ರದೇಶ ಹೆಚ್ಚಳದ ಜತೆಗೆ ಎರಡು ಬೆಳೆಗಳಿಗೆ ನೀರು ಕೊಡಲಾಗುವುದು. ಕೃಷ್ಣಮೂರ್ತಿಯವರಿಗೂ ಇದನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಇದಲ್ಲದೆ, ಈ ಕೆರೆಗಳ ಕೆಳಭಾಗದಲ್ಲಿ ಇರುವ ಚಿಕ್ಕಹೊಳೆ ಮತ್ತು ಸುವರ್ಣವತಿ ಜಲಾಶಯಗಳನ್ನು ಕೂಡ ನಾವು ಅಭಿವೃದ್ಧಿ ಪಡಿಸಲಿದ್ದೇವೆ. ಇಲ್ಲಿಯ ನೀರು ಕೂಡ ರೈತರಿಗೆ ವರ್ಷವಿಡೀ ಲಭ್ಯವಾಗಲಿದೆ. ಈ ಯೋಜನೆಯಿಂದ ಅಂತರ್ಜಲ ವೃದ್ಧಿ, ಮೀನುಗಾರಿಕೆ, ದೋಣಿ ವಿಹಾರ ಮತ್ತು ಪ್ರವಾಸೋದ್ಯಮದ ಬೆಳವಣಿಗೆ ಕೂಡ ಸಿಗಲಿದೆ. ರೈತರು ಗಾಳಿಮಾತುಗಳಿಗೆ ಕಿವಿಗೊಡಬಾರದು ಎಂದು ಸಚಿವರು ಸಲಹೆ ನೀಡಿದರು.

ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಮಾತನಾಡಿ, ಕೈಗಾರಿಕಾ ಪ್ರದೇಶಗಳಿಗೆ ಬೇಕಾದ ನೀರು ಪೂರೈಕೆಗೆ ಅಗತ್ಯವಿರುವ ಜಲ ಸಂಗ್ರಹಾಗಾರಕ್ಕೆ ಅಗರ ಮತ್ತು ಮದ್ದೂರು ಕೆರೆಗಳಿರುವ ಜಾಗವು ಅತ್ಯಂತ ಸೂಕ್ತವಾಗಿದೆ. ಬೇರೆ ಕಡೆಗಳಲ್ಲಿ ಮಾಡಿದರೆ ಉದ್ದೇಶವೇ ಈಡೇರುವುದಿಲ್ಲ. ಜತೆಗೆ ಈಗಿನ ಯೋಜನೆಯಿಂದ ಸ್ಥಳೀಯ ರೈತರಿಗೆ ಮೊದಲಿಗಿಂತ ಹೆಚ್ಚು ನೀರಾವರಿ ಅನುಕೂಲ ಒದಗಿಸುವುದು ಸಾಧ್ಯವಾಗಲಿದೆ ಎಂದು ಶಾಸಕರಿಗೆ ಮನದಟ್ಟು ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಕೈಗಾರಿಕಾ ಇಲಾಖೆ ಆಯುಕ್ತೆ ಖುಷಿ ಗೋಯಲ್, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಮತ್ತು ಕೆಐಎಡಿಬಿ ಮುಖ್ಯ ಎಂಜಿನಿಯರ್‌ ವೀರಭದ್ರಯ್ಯ, ನೀರಾವರಿ (ದಕ್ಷಿಣ) ಇಲಾಖೆ ಮುಖ್ಯ ಎಂಜಿನಿಯರ್‌ ಮಹೇಶ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.---

20ಸಿಎಚ್ಎನ್‌17

ಬೆಂಗ‍ಳೂರಿನ ಖನಿಜ ಭವನದಲ್ಲಿ ಬುಧವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರೊಂದಿಗೆ ಕೊಳ್ಳೇಗಾಲ ತಾಲೂಕಿನ ಅಗರ ಮತ್ತು ಮದ್ದೂರು ಕೆರೆಗಳ ಬಗ್ಗೆ ಕೊಳ್ಳೇಗಾಲ ಶಾಸಕ ಎ.ಆರ್‌. ಕೃಷ್ಣಮೂರ್ತಿ ಚರ್ಚೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧಾರವಾಡ ಮಹಾನಗರ ಪಾಲಿಕೆ ನಾಮಫಲಕ ಅಳವಡಿಕೆ!
ಉಪ್ಪಾರ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಲಿ: ಪುರುಷೋತ್ತಮಾನಂದಪುರಿ ಶ್ರೀ