ರಾಮಮೂರ್ತಿ ನವಲಿ ಗಂಗಾವತಿ
ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಗಿದ್ದ ಅಣೆಕಟ್ಟಿನ ಮೂಲಕ ರೈತರು ತಮ್ಮ ಹೊಲಗದ್ದೆಗಳಿಗೆ ನೀರು ಪಡೆದುಕೊಳ್ಳುತ್ತಿದ್ದರು. ಸಾಣಾಪುರ ಬಳಿ ಅರಸರು ಅಣೆಕಟ್ಟು ನಿರ್ಮಿಸಿ ರೈತರಿಗೆ ನೀರು ಪೂರೈಸುತ್ತಿದ್ದರು. ಅಣೆಕಟ್ಟಿನ ಕೆಳ ಭಾಗದಲ್ಲಿ 8 ಮೋರೆಗಳಿದ್ದು, ಇದರ ಮೂಲಕ ಸುಮಾರು 18 ಗ್ರಾಮಗಳ ರೈತರ ಗದ್ದೆಗಳಿಗೆ ನೀರು ಪೂರೈಕೆ ಮಾಡುತ್ತಿದ್ದರು. ಸಾಣಾಪುರ ಗ್ರಾಮದಿಂದ ಸಂಗಾಪುರ ಲಕ್ಷ್ಮೀನಾರಾಯಣ ಕೆರೆಯವರಿಗೂ ಕಾಲುವೆ ಇದ್ದು, ಸುಮಾರ 2500ಕ್ಕೂ ಅಧಿಕ ಎಕರೆ ಭೂಮಿ ಇದೆ, ನಿರಂತರ 11 ತಿಂಗಳು ರೈತರು ಇಲ್ಲಿ ಬೆಳೆ ಬೆಳೆಯುತ್ತಿದ್ದರು.
ಸಮರ್ಪಕ ನೀರಿಗಾಗಿ ಹೋರಾಟ: ಪ್ರತಿ ವರ್ಷ ರೈತರು ಒಂದಲ್ಲ ಒಂದು ಸಮಸ್ಯೆ ಎದುರಿಸುವಂತಾಗಿದೆ. ಕಳೆದ ಬಾರಿ ಗೇಟ್ ದುರಸ್ತಿ, ಮಳೆ ಇಲ್ಲದೇ ಜಲಾಶಯಕ್ಕೆ ನೀರಿನ ಸಂಗ್ರಹದ ಕೊರತೆ ಇದ್ದಿದ್ದರಿಂದ ರೈತರು ವಿಜಯನಗರ ಕಾಲುವೆ ನೀರು ಬಳಕೆ ಮಾಡುವದು ಅನಿವಾರ್ಯವಾಗಿದೆ. ನದಿಯಿಂದ ನೀರು ಅಧಿಕ ಮಟ್ಟದಲ್ಲಿ ಹರಿಯುತ್ತಿದ್ದರಿಂದ ಸಾಣಾಪುರ ಬಳಿ ಇರುವ ವಿಜಯನಗರ ಅಣೆಕಟ್ಟಿನ ಕೆಳ ಭಾಗದಲ್ಲಿರುವ ಮೋರೆಗಳ ಮೂಲಕ ಕಾಲುವೆಗೆ ಸರಿಯಾದ ರೀತಿ ನೀರು ಹೋಗುತ್ತಿಲ್ಲ. ಈ ಕಾರಣಕ್ಕೆ ರೈತರು ಮೋರೆಗಳನ್ನು ತಾಡಪಾಲ್ ಮತ್ತು ಮರಳು ಚೀಲಗಳಿಂದ ಮುಚ್ಚಿದರೆ ಕಾಲುವೆಗೆ ಹೆಚ್ಚಿನ ನೀರು ಪೂರೈಕೆಯಾಗುತ್ತದೆ ಎನ್ನುವದು ರೈತರ ವಾದವಾಗಿದೆ.ಪುರಾತತ್ವ ಇಲಾಖೆ ಆಕ್ಷೇಪ: ವಿಜಯನಗರ ಕಾಲುವೆ ನೀರು ಪೂರೈಕೆ ಮತ್ತು ಅಣೆಕಟ್ಟಿನ ದುರಸ್ತಿಗಾಗಿ ಸರ್ಕಾರ ಅನುದಾನ ನೀಡಿದ್ದರೂ ಸಹ ಪುರಾತತ್ವ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ದುರಸ್ತಿ ಕಾರ್ಯ ನಡೆಯುತ್ತಿಲ್ಲ ಎಂದು ರೈತರು ಅರೋಪಿಸಿದ್ದಾರೆ. ಪ್ರಸ್ತುತ ರೈತರಿಂದ ಸಾಣಾಪುರ ಬಳಿಯಿರುವ ವಿಜಯನಗರ ಆಣೆಕಟ್ಟಿಗೆ ಮೋರೆ ಮುಚ್ಚಿ ಕಾಲುವೆಗೆ ನೀರು ಹರಿಸಿಕೊಳ್ಳುವ ಯತ್ನ ನಡೆದಿದೆ.
ಅಣೆಕಟ್ಟಿನ ಮೋರೆಗಳನ್ನು ತಾಡಪಲ್ಲು ಮತ್ತು ಮರಳು ಚೀಲಗಳಿಂದ ಮುಚ್ಚಲಾಗಿದೆ. ಇದರಿಂದ ವಿಜಯನಗರ ಕಾಲುವೆಗೆ ಸಮರ್ಪಕ ನೀರು ಹರಿಯುತ್ತದೆ. ಇಲ್ಲದಿದ್ದರೆ ಕಾಲುವೆ ನೀರು ಅವಲಂಬಿತವಾಗಿರುವ ರೈತರು ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ ಎಂದು ಗೂಗಿಬಂಡಿ ಕ್ಯಾಂಪ್ ಪ್ರಗತಿಪರ ರೈತ ಸುಬ್ಬರಾವ್ ತಿಳಿಸಿದ್ದಾರೆ.