ಮುಂಡರಗಿ: ತಾಲೂಕಿನಲ್ಲಿ ಅತಿವೃಷ್ಟಿ ಮಳೆಯಿಂದ ಹೆಸರು, ಸೂರ್ಯಕಾಂತಿ, ಮೆಕ್ಕೆಜೋಳ, ಹತ್ತಿ, ಶೇಂಗಾ, ಭತ್ತ, ಉಳ್ಳಾಗಡ್ಡಿ ಹಾಗೂ ಇತರೆ ಬೆಳೆಗಳು ನಾಶವಾಗಿದ್ದು, ಎಲ್ಲ ಬೆಳೆಗಳಿಗೂ ಶೀಘ್ರವೇ ಬೆಳೆ ಪರಿಹಾರ ಕೊಡಬೇಕು ಮತ್ತು ಬೆಳೆ ವಿಮೆ ಮಾಡಿಸಿದ ಎಲ್ಲ ರೈತರಿಗೆ ಬೆಳೆವಿಮೆ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸೋಮವಾರ ಪಟ್ಟಣದಲ್ಲಿ ರೈತರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಹೋರಾಟದ ನೇತೃತ್ವ ವಹಿಸಿದ್ದ ರೈತಸಂಘದ ರಾಜ್ಯ ಕಾರ್ಯದರ್ಶಿ ಶಿವಾನಂದ ಇಟಗಿ ಮಾತನಾಡಿ, ಈಗಾಗಲೇ ತಾಲೂಕಿನಾದ್ಯಂತ ವಾಡಿಕೆಗಿಂತಲೂ ಎರಡು ಪಟ್ಟು ಹೆಚ್ಚು ಮಳೆಯಾಗಿದ್ದು, ರೈತರು ಬೆಳೆದ ಎಲ್ಲ ಬೆಳೆಗಳೂ ಸಂಪೂರ್ಣವಾಗಿ ನಾಶವಾಗಿದ್ದ, ಹಾನಿಗೊಳಗಾದ ಎಲ್ಲ ಬೆಳೆಗಳಿಗೂ ಪರಿಹಾರ ವಿತರಿಸಬೇಕು. ಈಗಾಗಲೇ ಮೆಕ್ಕೆ ಜೋಳ, ಸೂರ್ಯಕಾಂತಿ ಕಟಾವ್ ಹಂತಕ್ಕೆ ಬಂದಿದ್ದು ಸರ್ಕಾರ ಎರಡಕ್ಕೂ ಖರೀದಿ ಕೇಂದ್ರ ತೆರೆದು ರೈತರಿಗೆ ಬೆಂಬಲ ಬೆಲೆ ನೀಡಬೇಕು.ಅತಿಯಾದ ಮಳೆಯಿಂದಾಗಿ ಬೆಳಹಾನಿಯಾಗಿರುವುದರಿಂದ ರೈತರ ಸಂಪೂರ್ಣಸಾಲ ಮನ್ನಾ ಮಾಡಬೇಕು, ರೈತರಿಗೆ ನೀಡಿರುವ ಆರ್.ಆರ್. ನಂಬರ್‌ಗಳನ್ನು ಅಧಿಕೃತವಾಗಿ ಸಕ್ರಮಗೊಳಿಸಬೇಕು, ತಾಲೂಕಿನಲ್ಲಿ ವಿವಿಧ ಗ್ರಾಮಗಳ ರೈತರ ಜಮೀನುಗಳಲ್ಲಿ ವಿವಿಧ ಕಂಪನಿಗಳ ಗಾಳಿ ವಿದ್ಯುತ್ ಕಂಬ ಹಾಕುತ್ತಿದ್ದು, ಅದರ ಒಪ್ಪಂದ ಪತ್ರವನ್ನು ಕನ್ನಡದಲ್ಲಿ ಮಾಡಬೇಕು, ತಾಲೂಕಿನಲ್ಲಿ ಯೂರಿಯಾ ಗೊಬ್ಬರಕ್ಕೆ ಆತಂಕ ಸೃಷ್ಟಿಸಿದ್ದು, ಎಲ್ಲ ರೈತರಿಗೂ ಸಿಗುವಂತೆ ಮಾಡಬೇಕು, ಬೆಳೆ ವಿಮೆಯಲ್ಲಿ ಸಾಕಷ್ಟು ಗೋಲ್ ಮಾಲ್ ನಡೆಯುತ್ತಿದ್ದು, ನಿಜವಾಗಿ ವಿಮೆ ತುಂಬಿದ ರೈತರಿಗೆ ಮಧ್ಯಂತರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾ ಉಪ ಕೃಷಿ ನಿರ್ದೇಶಕಿ ಸ್ಫೂರ್ತಿ ಜಿ.ಎಸ್. ಮಾತನಾಡಿ, ಈ ಬಾರಿ ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದೆ. ತಾಲೂಕಿನಲ್ಲಿ 53 ಸಾವಿರ ಹೆಕ್ಟೇರ್ ಬಿತ್ತನೆಯಾಗಿದ್ದು, ಅದರಲ್ಲಿ 8000 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. ನಾನು ಕಳೆದ 2-3 ದಿನಗಳಿಂದ ಮುಂಡರಗಿ ತಾಲೂಕಿನಲ್ಲಿ ಸುತ್ತಾಟ ನಡೆಸಿ ವೀಕ್ಷಿಸಿದ್ದು, ಈಗಾಗಲೇ ತಂಡ ರಚಿಸಿ ಕೃಷಿ ಇಲಾಖೆ, ಕಂದಾಯ ಇಲಾಖೆ ಎಲ್ಲರೂ ಸೇರಿ ಸರ್ಕಾರಕ್ಕೆ ಬೆಳೆಹಾನಿಯ ಮಾಹಿತಿ ನೀಡಲಿದ್ದೇವೆ. ಅಲ್ಲದೇ ಬೆಳೆಹಾನಿಯಲ್ಲಿ ಯಾವುದೇ ಗೊಂದಲಗಳು, ಅಕ್ರಮ ಜರುಗದಂತೆ ಕ್ರಮ ವಹಿಸಲಾಗಿದೆ ಎಂದರು.ರೈತರ ಜಮೀನುಗಳಿಗೆ ಹೆಚ್ಚುವರಿ ಯೂರಿಯಾ ಗೊಬ್ಬರ ಹಾಕುವುದರಿಂದ ಮಣ್ಣಿನ ಗುಣಮಟ್ಟ ಹಾಳಾಗಿ ಆ ಜಮೀನಿನಿಂದ ಹರಿದು ಹೋಗುವ ನೀರು ಸೇವನೆಯಿಂದ ಕ್ಯಾನ್ಸರ್ ಹರಡುವ ಭೀತಿಯಿಂದಾಗಿ ಸರ್ಕಾರವೇ ಉತ್ಪಾದನೆ ಕಡಿಮೆ ಮಾಡಿದೆ ಎಂದಾಗ ಬರದೂರಿನ ರೈತ ಹುಸೇನಸಾಬ್ ಕುರಿ ''''ನಮಗ ಮೊದ್ಲ್ ಸರ್ಕಾರಿ ಗೊಬ್ರದ್ ರುಚಿ ಹಚ್ಚಿದವ್ರು ನೀವ, ಅದರ್ಗೂಡ ಸೆಗಣಿ ಗೊಬ್ಬರ ಹಾಕತೀವೆಂದ್ರ ಬ್ಯಾಡ್ ಅಂದ್ರಿ. ಈಗ ಯೂರಿಯಾ ಹಾಕಬ್ಯಾಡ್ರಿ ಅಂದ್ರ ಹ್ಯಾಂಗ್ರಿ'''' ಎಂದು ಪ್ರಶ್ನಿಸಿದರು.
ನಾವು ಸರಕಾರಿ ಗೊಬ್ಬರದ ಜತೆಗೆ ಸಗಣೆ ಗೊಬ್ಬರ ಹಾಕುವಂತಲೂ ರೈತರಿಗೆ ತಿಳಿಸಿದ್ದೇವೆ. ಆದರೆ ನೀವ್ಯಾರು ಹಾಕಲಿಲ್ಲ. ಬೆಳೆವಿಮೆ ತುಂಬುವಾಗ ಆಗುವ ಅಕ್ರಮದ ಬಗ್ಗೆ ನಾವು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಲಿದ್ದೇವೆ. ಆದಷ್ಟು ಎಲ್ಲ ಬೆಳೆಗಳಿಗೂ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.ಈ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಶರಣಪ್ಪ ಕಂಬಳಿ ವಿವಿಧ ಬೇಡಿಕೆಗಳುಳ್ಳ ಮನವಿಯನ್ನು ಓದಿ ಉಪತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಕಳುಹಿಸಲಾಯಿತು. ಹುಚ್ಚಪ್ಪ ಹಂದ್ರಾಳ, ಚಂದ್ರಪ್ಪ ಗದ್ದಿ, ಯಲ್ಲಪ್ಪ ಡೋಣಿ, ಚಂದ್ರಪ್ಪ ಬಳ್ಳಾರಿ, ಹಾಲಪ್ಪ ಅರಹುಣಸಿ, ಉಮೇಶ ಬಳಗಾನೂರ, ರಾಘವೇಂದ್ರ ಕುರಿ, ಪ್ರವೀಣ ಹಂಚಿನಾಳ, ಭೀಮೇಶ ಬಂಡಿವಡ್ಡರ, ಅಂದಪ್ಪ ಹಂದ್ರಾಳ, ಅಶೋಕ ಬನ್ನಿಕೊಪ್ಪ, ಅಶ್ವಿನಿ ಬೀಡನಾಳ, ಗೀತಾ ರೋಣದ, ಚಂದ್ರಪ್ಪ ಗದ್ದಿ, ಶರಣಪ್ಪ ಚೆನ್ನಳ್ಳಿ, ಮಹಾಂತೇಶ ಯಲ್ಲಪ್ಪ ಡೊಣ್ಣಿ, ಶಿವಪ್ಪ ಕುರಿ, ಕೆ.ಎಲ್. ಆರೇರ್ ಉಪಸ್ಥಿತರಿದ್ದರು.
ಪಟ್ಟಣದ ಕೋಟೆ ಭಾಗದಿಂದ ಪ್ರಾರಂಭವಾದ ಮೆರವಣಿಗೆ ಬಜಾರ್, ಬೃಂದಾವನ ವೃತ್ತದ ಮೂಲಕ ಕೊಪ್ಪಳ ವೃತ್ತ ತಲುಪಿ ಅಲ್ಲಿಂದ ತಹಸೀಲ್ದಾರ್ ಕಚೇರಿ ಎದುರಿನ ರಸ್ತೆಯಲ್ಲಿ ಕೆಲವು ಸಮಯ ರಸ್ತೆ ತಡೆ ನಡೆಸಿದ್ದರು. ಅಧಿಕಾರಿಗಳ ಭರವಸೆಯ ನಂತರ ಪ್ರತಿಭಟನೆ ಹಿಂಪಡೆದರು.