ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಜೆಜಿ ಹಳ್ಳಿ ಗ್ರಾಮದ ಗಣೇಶ ದೇವಸ್ಥಾನದ ಮುಂಭಾಗದಲ್ಲಿ ಹೋಬಳಿ ಮಟ್ಟದ ರೈತ ಸಂಘದ ಸಭೆ ಕರೆಯಲಾಗಿತ್ತು.ಸಭೆ ಉದ್ದೇಶಿಸಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ಜೆಜೆ ಹಳ್ಳಿ ಹೋಬಳಿಯ ಗಾಯತ್ರಿ ಜಲಾಶಯ ಸೇರಿದಂತೆ ಹೋಬಳಿಯ ಎಲ್ಲಾ ಕೆರೆಗಳನ್ನು ವಾಣಿವಿಲಾಸ ಜಲಾಶಯದಿಂದ ನೀರು ಹರಿಸಿ ತುಂಬಿಸಬೇಕು. ವಾಣಿ ವಿಲಾಸ ಜಲಾಶಯಕ್ಕೆ 10 ಟಿಎಂಸಿ ನೀರು ಮೀಸಲಿಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಜೂ.10 ರಂದು ಜವನ ಗೊಂಡನಹಳ್ಳಿ ಬಂದ್ ಮಾಡಿ ಸರ್ಕಾರಕ್ಕೆ ಮತ್ತು ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಸಹ ಇದುವರೆಗೂ ಇಲಾಖೆಯಿಂದ ನೀರು ಹರಿಸುವ ವಿಚಾರವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದ್ದರಿಂದ ಜೂ.19 ಇಂದು ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಗ್ರಾಪಂ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗುವುದು ನೀರು ಹರಿಸುವ ಆದೇಶ ಸಿಗುವವರೆಗೂ ನಿರಂತರ ಹೋರಾಟ ಮಾಡಲಾಗುವುದು ಎಂದರು.
ಪ್ರತಿದಿನ ಒಂದೊಂದು ಗ್ರಾಮದವರು ಧರಣಿಯಲ್ಲಿ ಭಾಗವಹಿಸಿ ಪ್ರತಿ ಗ್ರಾಮದಲ್ಲೂ ಜಾಗೃತಿ ಸಭೆ ಹಮ್ಮಿಕೊಂಡು ರೈತರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು. ಈ ಹೋರಾಟದಲ್ಲಿ ಮಹಿಳಾ ಸಂಘಟನೆಯವರು, ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಸೇರಿದಂತೆ ಎಲ್ಲಾ ಪ್ರಗತಿಪರ ಸಂಘಟನೆಗಳು, ವಿದ್ಯಾರ್ಥಿಗಳು ಭಾಗವಹಿಸಿ ಬಯಲುಸೀಮೆ ಜವನಗೊಂಡನಹಳ್ಳಿ ಹೋಬಳಿಗೆ ನೀರು ಬರುವವರಗೆ ಹೋರಾಟ ಮಾಡುವ ನಿರ್ಧಾರ ಮಾಡಲಾಗಿದೆ ಎಂದರು. ಈ ವೇಳೆ ಅರಳಿಕೆರೆ ತಿಪ್ಪೇಸ್ವಾಮಿ, ತಿಮ್ಮಾರೆಡ್ಡಿ, ಬಿ.ಆರ್.ರಂಗಸ್ವಾಮಿ, ಹೋಬಳಿಯ ಅಧ್ಯಕ್ಷ ಈರಣ್ಣ, ಕಾರ್ಯಾಧ್ಯಕ್ಷ ಕನ್ಯಪ್ಪ, ಮಾಜಿ ಎಪಿಎಂಸಿ ಅಧ್ಯಕ್ಷ. ಎಂಆರ್ ಈರಣ್ಣ, ಜಿಪಂ ಮಾಜಿ ಸದಸ್ಯ ಪಾಪಣ್ಣ, ಬಸವರಾಜ್, ರಾಜಪ್ಪ, ರಘು, ನಾಗೇಂದ್ರಪ್ಪ, ರಾಮಕೃಷ್ಣ, ಬಾಲಕೃಷ್ಣ, ಶಿವಣ್ಣ, ಕರಿಯಪ್ಪ ಚಂದ್ರಶೇಖರ, ಮಂಜುನಾಥ ಮುಂತಾದವರು ಭಾಗವಹಿಸಿದ್ದರು.