ಬರ ಪರಿಹಾರ ವಿತರಣೆಯಲ್ಲಿ ಆಗಿರುವ ತಾರತಮ್ಯ, ಲೋಪದೋಷ ನಿವಾರಿಸಿ ವೈಜ್ಞಾನಿಕ ರೀತಿಯಲ್ಲಿ ಬರ ಪರಿಹಾರದ ಹಣವನ್ನು ರೈತರಿಗೆ ವಿತರಣೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಣಿಬೆನ್ನೂರು: ಬರ ಪರಿಹಾರ ವಿತರಣೆಯಲ್ಲಿ ಆಗಿರುವ ತಾರತಮ್ಯ, ಲೋಪದೋಷ ನಿವಾರಿಸಿ ವೈಜ್ಞಾನಿಕ ರೀತಿಯಲ್ಲಿ ಬರ ಪರಿಹಾರದ ಹಣವನ್ನು ರೈತರಿಗೆ ವಿತರಣೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ನೇತೃತ್ವದಲ್ಲಿ ತಾಲೂಕಿನ ರೈತರು ಉಪ ತಹಸೀಲ್ದಾರ್ ಮೋಹನ ಕಡೂರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ತಾಲೂಕಿನಲ್ಲಿ ಸತತ ಅತೀವೃಷ್ಟಿ ಮತ್ತು ಅನಾವೃಷ್ಟಿ ಮತ್ತು ತೀವ್ರ ಸ್ವರೂಪದ ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದಾರೆ. ಎಲ್ಲಾ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು, ಫೈನಾನ್ಸ್‌ಗಳು ಹಾಗೂ ಸಂಬಂಧಿಕರಲ್ಲಿ ಸಾಲ ಮಾಡಿದ್ದಾರೆ. ಕೆಲವು ರೈತರು ಸಾಲಕ್ಕಾಗಿ ಒಡವೆಗಳನ್ನು ಒತ್ತೆಯಿಟ್ಟು ವಿಪರೀತವಾಗಿ ಸಾಲ ಸೂಲ ಮಾಡಿ ಬಿತ್ತನೆ ಚಟುವಟಿಕೆಯನ್ನು ಮಾಡಿದ್ದಾರೆ.
ಕಳೆದ ವರ್ಷ ಸಮಯಕ್ಕೆ ಸರಿಯಾಗಿ ಮಳೆ ಬಾರದೇ ಸಂಪೂರ್ಣ ಬೆಳೆ ಹಾನಿಯಾಗಿದ್ದು ಅಲ್ಲದೇ ಕುಡಿಯುವ ನೀರಿಗೂ ಸಹ ಹಾಹಾಕಾರ ಉಂಟಾಗಿ ಜಾನುವಾರುಗಳಿಗೂ ಕುಡಿಯುವ ನೀರು ಮತ್ತು ಮೇವಿನ ಕೊರತೆ ಉಂಟಾಗಿದೆ. ಪರಿಸ್ಥಿತಿ ಹೀಗಿದ್ದರೂ ರಾಜಕೀಯ ಪಕ್ಷಗಳು ಮತ್ತು ಆಡಳಿತ ನಡೆಸುತ್ತಿರುವ ಸರ್ಕಾರಗಳು ಬರ ಪರಿಹಾರ ವಿತರಣೆಯಲ್ಲಿಯೂ ಸಹಿತ ಅನೇಕ ಲೋಪದೋಷ, ತಾರತಮ್ಯ ಮಾಡಿ ರೈತರ ಜೊತೆಗೆ ಚೆಲ್ಲಾಟವಾಡುತ್ತಾ ಅಧಿಕಾರಿಗಳು ಬೇಕಾ ಬಿಟ್ಟಿ ಬರ ಪರಿಹಾರವನ್ನು ಅವೈಜ್ಞಾನಿಕವಾಗಿ ವಿತರಣೆ ಮಾಡುತ್ತಿದ್ದಾರೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಲ್ಲದೆ ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗಳನ್ನು ಕೈಕೊಳ್ಳಲು ಸಹ ಆಸಕ್ತರಾಗಿರುವುದಿಲ್ಲ.
ಇದರಿಂದ ಈಗಾಗಲೇ ಕೃಷಿ ಪದ್ಧತಿಯು ವರ್ಷದಿಂದ ವರ್ಷಕ್ಕೆ ನಶಿಸಿ ಹೋಗುತ್ತಿದೆ. ಪ್ರಾಮಾಣಿಕವಾಗಿ ಬಿಸಿಲು ಮಳೆ ಗಾಳಿ ಎನ್ನದೇ ಹೊಲದಲ್ಲಿ ದುಡಿಯುವ ರೈತರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈ ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರ ಬರ ಪರಿಹಾರ ಪ್ರತಿ ಒಂದು ಗುಂಟೆಗೆ ರು. 85 ಅಂತಾ ನಿಗದಿಪಡಿಸಿರುವುದು ತೀರಾ ಅವಮಾನದ ಸಂಗತಿಯಾಗಿದೆ. ಅಲ್ಲದೇ ಈ ಹಿಂದೆ ಎಸ್.ಡಿ.ಆರ್.ಎಫ್. ಅನುದಾನದಲ್ಲಿ ರೈತರ ಖಾತೆಗಳಿಗೆ ರು. 2000 ವಿತರಣೆ ಮಾಡಿದ ಮೊತ್ತವನ್ನು ಸಹ ಕಟಾವಣೆ ಮಾಡಿ ರೈತರಿಗೆ ವಿತರಣೆ ಮಾಡಲಾಗಿತ್ತು. ಇದರಿಂದ ರೈತರ ಖಾತೆಗೆ 1500 ರಿಂದ 2000 ರಂತೆ ಖಾತೆಗೆ ಹಣ ಜಮೆ ಆಗಿತ್ತು.
ಇದರಿಂದ ರೈತರು ಬೀಜ ಗೊಬ್ಬರ ಖರೀದಿ ಮತ್ತು ಕುಟುಂಬ ನಿರ್ವಹಣೆ ಮಾಡುವುದು ಹೇಗೆ? ಕೆಲವೊಂದು ರೈತರಿಗೆ ಪರಿಹಾರ ಬಂದಿದೆ, ಕೆಲವೊಂದು ರೈತರಿಗೆ ಪರಿಹಾರ ಬರದೇ ತಾರತಮ್ಯ ಆಗಿರುವುದರಿಂದ ರೈತರು ಆತಂಕದಲ್ಲಿ ಇದ್ದಾರೆ. ನಾವು ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿಯಾಗಿ ವಿಚಾರಣೆ ಮಾಡಿದರೆ ಆಧಾರ ಲಿಂಕ್ ಆಗಿಲ್ಲ ಅಂತಾ ಸಬೂಬು ಹೇಳುತ್ತಾ ದಿನ ದೂಡುತ್ತಿದ್ದಾರೆ. ಇದರಿಂದ ತಾಲೂಕಿನ ಎಲ್ಲಾ ರೈತರು ರೋಷಿಹೋಗಿದ್ದು ರೈತರು ಬರ ಪರಿಹಾರ ವಿತರಣೆಯಲ್ಲಿ ಆಗಿರುವ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿ ವೈಜ್ಞಾನಿಕ ದರ ನಿಗದಿಪಡಿಸಿ ಎಲ್ಲಾ ರೈತರಿಗೂ ಸಮರ್ಪಕ ಬರ ಪರಿಹಾರ ವಿತರಣೆ ಆಗುವವರೆಗೂ ರಾಜ್ಯಾದ್ಯಂತ ವಿವಿಧ ರೈತ ಸಂಘ ಮತ್ತು ರೈತ ಪರ ಸಂಘಟನೆಗಳಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ.
ಅದಕ್ಕೆ ಅವಕಾಶ ಕೊಡದೇ ಪ್ರಾಥಮಿಕ ಹಂತದಲ್ಲಿಯೇ ಆಗಿರುವ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿ ವೈಜ್ಞಾನಿಕವಾಗಿ ಪ್ರತಿ ಎಕರೆ ಜಮೀನಿಗೆ ರು. 20 ಸಾವಿರದಂತೆ ಬರ ಪರಿಹಾರವನ್ನು ವಿತರಣೆ ಮಾಡಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು. ಕುಬೇರಪ್ಪ ಹುಲಿಹಳ್ಳಿ, ಮಹದೇವಪ್ಪ ಬಣಕಾರ, ಚಂದ್ರಶೇಖರ ಪಾಟೀಲ, ನಿಂಗಪ್ಪ ಸತ್ಯಪ್ಪನವರ, ಚಂದ್ರಶೇಖರ ತಿಮ್ಮೆನಹಳ್ಳಿ, ಚನ್ನಪ್ಪ ಅಡಿವೇರ, ವಾಸು ಗುಡ್ಡಣ್ಣನವರ, ವಾಸಪ್ಪ ಎರೇಸಿಮಿ, ಮಮ್ಮಣಸಾಬ್ ಮಮ್ಮಣಗೆರಿ, ರವಿ ಲಮಾಣಿ, ಲಕ್ಷ್ಮಣ ಗುಡಿಯವರ, ನಾಗರಾಜ ನಾಯ್ಕ್, ನಾರಾಯಣ ಲಮಾಣಿ, ಮಂಜಪ್ಪ ದೊಡ್ಮನಿ ಮತ್ತಿತರರಿದ್ದರು.