ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕೇಂದ್ರ ಸರ್ಕಾರದಿಂದ ಪ್ರತಿ ಟನ್ ಕಬ್ಬಿಗೆ ೪ ಸಾವಿರ ರು. ನಿಗದಿಗೊಳಿಸಿ, ಮುಂಗಾರು ಮಳೆಯಿಂದ ನಷ್ಟವಾಗಿರುವ ಬೆಳೆಗೆ ಪರಿಹಾರ ವಿತರಣೆ ಮಾಡಲು ೨ ಸಾವಿರ ಕೋಟಿ ಅನುದಾನ ಬಿಡುಗಡೆಗೊಳಿಸಿ, ನಕಲಿ ಬಿತ್ತನೆ ಬೀಜ, ಕೀಟ ನಾಶಕ ಮಾರಾಟ ತಡೆಗೆ ಪ್ರಬಲ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿ ರೈತಸಂಘದಿಂದ ರೈಲ್ವೆ ಇಲಾಖೆಯ ಮುಂದೆ ಹೋರಾಟ ಮಾಡಿ ರೈಲ್ವೆ ಅಧಿಕಾರಿಗಳ ಮೂಲಕ ಮನವಿ ನೀಡಿದರು.ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಇಡೀ ದೇಶಕ್ಕೇ ಅನ್ನ ಹಾಕುವ ರೈತನನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ತುತ್ತು ಅನ್ನಕ್ಕಾಗಿ ಹೊರದೇಶದ ಬಳಿ ಕೈಚಾಚಬೇಕಾದ ಪರಿಸ್ಥಿತಿ ಬರಬಹುದು. ಕೈಗಾರಿಕೆ ಮಾಲೀಕರು ನಷ್ಟವೆಂದಾಕ್ಷಣ ನೂರಾರು ಕೋಟಿ ನೀಡುವ ಸರ್ಕಾರಗಳು, ರೈತನಿಗೆ ನಷ್ಟವಾದರೆ ಏಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಪ್ರಶ್ನಿಸಿದರು.ದೇಶದ ಯುವ ಜನರ ಹಾಳು ಮಾಡುವ ಕ್ರಿಕೆಟ್ ಗೆ ನೀಡುವ ಆದ್ಯತೆಯನ್ನೂ ರೈತನ ಸಮಸ್ಯೆಗೆ ನೀಡುತ್ತಿಲ್ಲ. ಮಳೆ ಬಂದರೆ ಕ್ರಿಕೆಟ್ ಮೈದಾನಕ್ಕೆ ರಕ್ಷಣೆ ಕೊಡುವ ಸರ್ಕಾರಗಳು ರೈತರ ಬೆಳೆ ಮಳೆಯಿಂದ ನಷ್ಟವಾದರೆ ಏಕೆ ರಕ್ಷಣೆ ಕೊಡುತ್ತಿಲ್ಲ ಎಂಬುದನ್ನು ಅನ್ನ ತಿನ್ನುವ ಸರ್ಕಾರಗಳು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು, ಈ ಮೂಲಕ ರೈತರ ರಕ್ಷಣೆಗೆ ನಿಲ್ಲಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ರೈಲ್ವೆ ಅಧಿಕಾರಿಗಳು, ನಿಮ್ಮ ಮನವಿ ಹಿರಿಯ ಅಧಿಕಾರಿಗಳ ಮುಖಾಂತರ ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಜಿಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ತಾಲೂಕಾಧ್ಯಕ್ಷ ಕದಿರನತ್ತ ಅಪ್ಪೋಜಿರಾವ್, ಸಂತೋಷ್, ಲಕ್ಷ್ಮಣ, ಕಾಮುಸಮುದ್ರದ ಹೋಬಳಿ ಅಧ್ಯಕ್ಷ ಮುನಿಕೃಷ್ಣ, ವಿಶ್ವ, ಚಾಂದ್ ಪಾಷ, ಮುನಿರಾಜು, ರಾಮಸಾಗರ ವೇಣು, ಬಾಬು, ಮಂಜುನಾಥ, ಸುರೇಶ ಬಾಬು, ಮಂಗಸಂದ್ರ ತಿಮ್ಮಣ್ಣ, ಕಿರಣ್, ಬಾಬಾಜಾನ್, ಗಿರೀಶ್, ರಾಜು, ಸು. ಶೈಲಜ, ಚೌಡಮ್ಮ, ನಾಗರತ್ನ, ಪವಿತ್ರ, ವೆಂಕಟಮ್ಮ, ಸುಶೀಲ, ರತ್ನಮ್ಮ, ಭಾಗಮ್ಮ ಇದ್ದರು.